ADVERTISEMENT

ಮನೆ ಬಾಡಿಗೆ ಸಮಸ್ಯೆಗೆ ನೆಸ್ಟ್‌ಅವೇ ನೆರವು

​ಕೇಶವ ಜಿ.ಝಿಂಗಾಡೆ
Published 8 ನವೆಂಬರ್ 2016, 19:30 IST
Last Updated 8 ನವೆಂಬರ್ 2016, 19:30 IST
ಮನೆ ಬಾಡಿಗೆ ಸಮಸ್ಯೆಗೆ ನೆಸ್ಟ್‌ಅವೇ ನೆರವು
ಮನೆ ಬಾಡಿಗೆ ಸಮಸ್ಯೆಗೆ ನೆಸ್ಟ್‌ಅವೇ ನೆರವು   

ಮಹಾನಗರಗಳಲ್ಲಿ ಮನೆ ಬಾಡಿಗೆ ಹಿಡಿಯುವುದು ಅನೇಕರಿಗೆ ದೊಡ್ಡ ತಲೆನೋವು ಆಗಿದ್ದರೆ, ಸೂಕ್ತ ಬಾಡಿಗೆದಾರ ಬರಲಿ ಎಂದು ಮಾಲೀಕರು ಕಾಯುತ್ತಲೇ ಇರುತ್ತಾರೆ.ತಮ್ಮ ನಿರೀಕ್ಷೆಗೆ ತಕ್ಕಂತೆ ಬಾಡಿಗೆದಾರರು ಬರದೆ ಹೋದಾಗ ಮನೆಗಳನ್ನು ಬಾಡಿಗೆಗೆ ನೀಡದೆ ಖಾಲಿ ಬಿಡುವ ಪ್ರವೃತ್ತಿಯೂ ಮನೆ ಮಾಲೀಕರಲ್ಲಿ ಮನೆ ಮಾಡಿರುತ್ತದೆ.

ರಿಯಲ್‌ ಎಸ್ಟೇಟ್‌ ಬೆಲೆಗಳು ನಿರಂತರವಾಗಿ ಏರುತ್ತಲೇ ಇರುವಾಗ ಅನೇಕರು ಒಂದಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಿಸಿ ಇಲ್ಲವೇ ಖರೀದಿಸಿ ಬಾಡಿಗೆಗೆ ನೀಡಿ ನಿರಂತರ ಆದಾಯ ಪಡೆಯಲು ಉದ್ದೇಶಿಸಿರುತ್ತಾರೆ. ಇವರಲ್ಲಿ ಅನಿವಾಸಿ ಭಾರತೀಯರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ಬಾಡಿಗೆದಾರರ ಕುರಿತ ಸಾಕಷ್ಟು ಮಾಹಿತಿ ಇಲ್ಲದಿರುವುದು, ಮನೆಗಳ ಸುರಕ್ಷತೆ ಬಗೆಗಿನ ಕಾಳಜಿ, ನಿಯಮಿತವಾಗಿ ಬಾಡಿಗೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಅನೇಕರು ಮನೆಗಳನ್ನು ಯಾರೊಬ್ಬರಿಗೂ ಬಾಡಿಗೆ ನೀಡಲು ಮುಂದಾಗಿರುವುದಿಲ್ಲ.  ಮನೆ ಮಾಲೀಕರ ಇಂತಹ ಹಲವಾರು ಸಮಸ್ಯೆಗಳಿಗೆ ಯುವ ಉದ್ಯಮಿಗಳು ತಂತ್ರಜ್ಞಾನದ ನೆರವಿನಿಂದ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.

ಬಾಡಿಗೆ ಮನೆಗಳ ದಕ್ಷ ನಿರ್ವಹಣೆ ಉದ್ದೇಶದಿಂದಲೇ ಅಸ್ತಿತ್ವಕ್ಕೆ ಬಂದಿರುವ ನೆಸ್ಟ್‌ಅವೇ (NestAway) ಸ್ಟಾರ್ಟ್‌ಅಪ್‌, ಮನೆ ಮಾಲೀಕರ ನೆರವಿಗೆ ನಿಂತಿದೆ. ಬಾಡಿಗೆ ಮನೆಗಳ ಹುಡುಕಾಟದಲ್ಲಿ ಇರುವವರ ತಲೆನೋವನ್ನೂ ಇದು ದೂರ ಮಾಡಿದೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸ್ಟಾರ್ಟ್‌ಅಪ್‌, ಬಾಡಿಗೆ ಮನೆಗಳ ಹುಡುಕಾಟಕ್ಕಷ್ಟೇ  ಸೇವೆ ಸೀಮಿತಗೊಳಿಸಿಲ್ಲ.  ಸಂಪೂರ್ಣ ಸುಸಜ್ಜಿತ ಮನೆಗಳನ್ನು ಬಾಡಿಗೆದಾರರಿಗೆ ಒದಗಿಸುವ, ಬಾಡಿಗೆದಾರ ಮತ್ತು ಮಾಲೀಕರಿಗೆ ತಲೆನೋವಾಗದ ರೀತಿಯಲ್ಲಿ ಮನೆಗಳನ್ನು ನಿರ್ವಹಿಸುವ, ಮಾಲೀಕರಿಗೆ ನಿಯಮಿತವಾಗಿ ಬಾಡಿಗೆ ಹಣ ಪಾವತಿಸುವ ಕಾರ್ಯವನ್ನೂ ಮಾಡಲಿದೆ.

ಸೂರತ್ಕಲ್‌ನ ಎನ್‌ಐಟಿಯ 2004ರ ತಂಡದ ಪದವೀಧರರಾದ  ಜಿತೇಂದ್ರ ಜಗದೇವ್, ಅಮರೇಂದ್ರ ಸಾಹು, ಸ್ಮೃತಿ ಪರಿಧಾ ಮತ್ತು ದೀಪಕ್ ಧರ್ ಜತೆಯಾಗಿ 2015ರ ಜನವರಿಯಲ್ಲಿ ಈ ಸ್ಟಾರ್ಟ್‌ಅಪ್‌ ಸ್ಥಾಪಿಸಿದ್ದಾರೆ.

ಕೆಲಸ ಅರಸಿಕೊಂಡು ಮಹಾನಗರಗಳಿಗೆ ಬರುವ ಯುವಕ – ಯುವತಿಯರಿಗೆ ತಾವು ಕೆಲಸ ಮಾಡುವ ಸ್ಥಳದ ಹತ್ತಿರದಲ್ಲಿ ಸೂಕ್ತ ಬಾಡಿಗೆ ಮನೆ ಹುಡುಕುವುದೇ ದೊಡ್ಡ ತಲೆನೋವಿನ ಕೆಲಸ ಆಗಿರುತ್ತದೆ. ಪೇಯಿಂಗ್ ಗೆಸ್ಟ್‌ಗಳು (ಪಿಜಿ) ಲಭ್ಯ ಇದ್ದರೂ, ಅಲ್ಲಿನ ಕಡಿಮೆ ಸ್ಥಳಾವಕಾಶ ಮತ್ತು ಇತರ ಸೌಲಭ್ಯಗಳ ಕೊರತೆಗಳಿಂದಾಗಿ ಅನೇಕರಿಗೆ ಅವುಗಳು ಇಷ್ಟವಾಗುವುದಿಲ್ಲ.

ಎರಡು ಮೂರು ಬೆಡ್‌ರೂಂಗಳ ಮನೆಗಳನ್ನೇ ಬಾಡಿಗೆದಾರರ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿ, ಎಲ್ಲ ಅನುಕೂಲತೆಗಳನ್ನು ಒದಗಿಸಿ ಕೊಡುವುದು,  ಬಾಡಿಗೆದಾರ ಮತ್ತು ಮಾಲೀಕರ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವ ಉದ್ದಿಮೆ ಬಾಡಿಗೆದಾರರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಬಾಡಿಗೆದಾರರಿಗೆ ಬಾಡಿಗೆ ಮನೆ ತೋರಿಸುವುದರಿಂದ ಹಿಡಿದು, ಬಾಡಿಗೆದಾರರು, ಮನೆ ಮಾಲೀಕರ ಮಧ್ಯೆ ಬಾಡಿಗೆ ಒಪ್ಪಂದ, ಬಾಡಿಗೆದಾರರ ವಿಳಾಸ ದೃಢೀಕರಣ ಮತ್ತಿತರ  ಹೊಣೆಗಾರಿಕೆಯನ್ನೆಲ್ಲ ಈ ಸ್ಟಾರ್ಟ್‌ಅಪ್‌ ನೋಡಿಕೊಳ್ಳುತ್ತಿದೆ. ತಿಂಗಳ ಬಾಡಿಗೆ ಹಣದಲ್ಲಿನ ಸಣ್ಣ ಮೊತ್ತವನ್ನು ಶುಲ್ಕ ರೂಪದಲ್ಲಿ ವಸೂಲಿ ಮಾಡುತ್ತದೆ.

ಅನೇಕ ಕಾರಣಗಳಿಗೆ  ಬ್ರಹ್ಮಚಾರಿಗಳಿಗೆ ಮನೆಗಳನ್ನು ಬಾಡಿಗೆಗೇ ಕೊಡಬಾರದು ಎನ್ನುವುದು ಬಹುತೇಕ ಮಾಲೀಕರ ಧೋರಣೆಯಾಗಿದೆ. ವಿವಾಹಿತರಾಗಿದ್ದರೆ ಒಂದೆಡೆಯೇ ದೀರ್ಘಕಾಲ ಇರುತ್ತಾರೆ. ಅವಿವಾಹಿತರು  ಯಾವಾಗ ಬೇಕಾದರೂ ಮನೆ ಖಾಲಿ ಮಾಡುತ್ತಾರೆ.  ಹೊಸ ಬಾಡಿಗೆದಾರರನ್ನು ಹುಡುಕುವುದು ಹೊಸ ತಲೆನೋವಿನ ಕೆಲಸ ಎನ್ನುವ ಕಾರಣವನ್ನೂ ಅವರು ನೀಡುತ್ತಾರೆ.

ಮೂರು, ನಾಲ್ಕು ಮಲಗುವ  ಮನೆಗಳನ್ನು ಹೊಂದಿರುವ ಸುಸಜ್ಜಿತ ಮನೆಗಳ ಒಂದೊಂದು ಕೋಣೆಯನ್ನು  ಒಬ್ಬೊಬ್ಬರಿಗೆ ಬಾಡಿಗೆ ಕೊಡಲು ಸಾಧ್ಯವೇ ಎನ್ನುವ ಆಲೋಚನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ‘ನೆಸ್ಟ್‌ಅವೇ’ ಯಶಸ್ವಿಯಾಗಿದೆ. ಮಾಲೀಕರು ತಮ್ಮ ಮನೆಗಳನ್ನು ‘ನೆಸ್ಟ್ಅವೇ’ ವಶಕ್ಕೆ ಒಪ್ಪಿಸಿ ನಿಶ್ಚಿಂತೆಯಿಂದ ಇರಬಹುದಾಗಿದೆ.  ಬಾಡಿಗೆ ಮನೆಗಳನ್ನು ‘ನೆಸ್ಟ್‌ಅವೇ’ ಸಂಪೂರ್ಣವಾಗಿ ನಿರ್ವಹಣೆ ಮಾಡಲಿದೆ.

ಬಾಡಿಗೆದಾರರ ಪೂರ್ವಾಪರ ವಿಚಾರಣೆ, ವಿಳಾಸ ದೃಢೀಕರಣವನ್ನು ಸಂಸ್ಥೆಯೇ ನಿರ್ವಹಿಸುತ್ತದೆ.  2 ತಿಂಗಳ ಭದ್ರತಾ ಠೇವಣಿ ಸಂಗ್ರಹ,  ವಿಳಾಸ, ಪೊಲೀಸ್ ದೃಢೀಕರಣ ಅರ್ಜಿಗಳನ್ನು ಸಂಸ್ಥೆಯೇ ನಿರ್ವಹಿಸುತ್ತದೆ. ಒಂದು ಮನೆಯನ್ನು ಯುವತಿಯರಿಗೆ ಇಲ್ಲವೇ ಯುವಕರಿಗೆ ಮಾತ್ರ  ಹಂಚಿಕೆ ಮಾಡಲಾಗುವುದು.  ಯುವತಿಯರಿಗೆ ಸುರಕ್ಷಿತ ವಲಯದಲ್ಲಿಯೇ ಮನೆಗಳನ್ನು ಒದಗಿಸಿಕೊಡಲು ಆದ್ಯತೆ ನೀಡಲಾಗುವುದು.

‘ಟಿವಿ, ಫ್ರಿಜ್, ವಾಷಿಂಗ್‌ ಮಷಿನ್‌, ಫ್ಯಾನ್‌ ಮತ್ತಿತರ ಸೌಲಭ್ಯಗಳಿಂದ ಸುಸಜ್ಜಿತವಾದ ಮನೆಗಳನ್ನು ‘ನೆಸ್ಟ್‌ಅವೇ’  ವಶಕ್ಕೆ ಒಪ್ಪಿಸಿದರೆ, ತಿಂಗಳಿಗೆ ₹ 10 ಸಾವಿರ ಬಾಡಿಗೆ ಬರುವಲ್ಲಿ ₹ 14 ಸಾವಿರದವರೆಗೆ ಬಾಡಿಗೆ ಪಡೆಯಬಹುದು’ ಎಂದು ಸಂಸ್ಥೆಯ ಬೆಂಗಳೂರು ವಹಿವಾಟಿನ ಮುಖ್ಯಸ್ಥರಾಗಿರುವ ಇಸ್ಮಾಯಿಲ್ ಖಾನ್ ಅವರು ಹೇಳುತ್ತಾರೆ.

ಇತ್ತ ಪಿಜಿಯೂ ಅಲ್ಲದ, ಅತ್ತ ಸ್ವತಂತ್ರ ಮನೆಯೂ ಅಲ್ಲದ ಹೊಸ ಬಗೆಯ ಬಾಡಿಗೆ ಮನೆಗಳನ್ನು  ಒದಗಿಸುವ ಮತ್ತು ಅವುಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ವಿಶಿಷ್ಟ ನವೋದ್ಯಮ ಇದಾಗಿದೆ. ‘ನೆಸ್ಟ್‌ಅವೇ’ ವಶದಲ್ಲಿ ಇರುವ ಮನೆಗಳ ಬಾಡಿಗೆ ಹಣವನ್ನು ಮನೆ ಮಾಲೀಕರಿಗೆ ಪ್ರತಿ ತಿಂಗಳೂ 1ನೆ ತಾರೀಕಿಗೆ ಪಾವತಿಸುವ ಮೂಲಕ ಮಾಲೀಕರಿಗೆ ಬಾಡಿಗೆ ಖಾತರಿ ನೀಡಲಾಗುತ್ತಿದೆ.  ಬೆಂಕಿ, ಭೂಕಂಪ ಮತ್ತಿತರ ಆಕಸ್ಮಿಕಗಳಿಂದ ಕಟ್ಟಡಗಳಿಗೆ ಆಗುವ ನಷ್ಟ ಭರ್ತಿಗೆ ಟಾಟಾ ಎಐಜಿ ಜತೆ ವಿಮೆ ಸೌಲಭ್ಯ ಮಾಡಲಾಗಿರುತ್ತದೆ.

ದಲ್ಲಾಳಿಗಳ ಪಾತ್ರ
‘ನೆಸ್ಟ್‌ಅವೇ’ ವಹಿವಾಟಿನಲ್ಲಿ ದಲ್ಲಾಳಿಗಳೂ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಬಾಡಿಗೆದಾರರು ಮತ್ತು ಮನೆ ಮಾಲೀಕರನ್ನು ಸಂಸ್ಥೆಗೆ ಪರಿಚಯಿಸಿ  ಸಂಸ್ಥೆ ನಿಗದಿಪಡಿಸುವ ಕಮಿಷನ್‌ ಪಡೆಯುವದರ ಜತೆಗೆ, ಮನೆಗಳ ನಿರ್ವಹಣೆ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೂ ದಲ್ಲಾಳಿಗಳು  ಸಂಸ್ಥೆಗೆ ನೆರವಾಗುತ್ತಾರೆ. ಇದರಿಂದ  ಬ್ರೋಕರ್‌ಗಳಿಗೆ ನಿಯಮಿತವಾಗಿ ಆದಾಯ ಬರುವ ಮೂಲವೂ ಇದಾಗಿದೆ. ನಗರಗಳಲ್ಲಿ ಬ್ರೋಕರ್ಸ್ ಜಾಲ ದೊಡ್ಡದಿದೆ. ನಮ್ಮ  ವಹಿವಾಟಿನಲ್ಲಿ ಅದರ ಸದುಪಯೋಗ ಮಾಡಿಕೊಳ್ಳಲಾಗುತ್ತಿದೆ’ ಎಂದು ಇಸ್ಮಾಯಿಲ್‌ ಖಾನ್‌ ಹೇಳುತ್ತಾರೆ.

‘ಇಲ್ಲಿಯ ವಹಿವಾಟು ಸಂಪೂರ್ಣ ಪಾರದರ್ಶಕವಾಗಿರುತ್ತದೆ. ತೆರಿಗೆಗೆ ಒಳಪಡದ ಕಪ್ಪು ಹಣದ ವಹಿವಾಟಿಗೆ ಇಲ್ಲಿ ಅವಕಾಶವೇ ಇಲ್ಲ. ಚೆಕ್ ಇಲ್ಲವೆ ಬ್ಯಾಂಕ್ ಖಾತೆ ಮೂಲಕ ಬಾಡಿಗೆ ಹಣ ಪಾವತಿಸಲಾಗುತ್ತಿದೆ. ನಗದು ಇಲ್ಲಿ ಕೈಬದಲಿಸಲು ಅವಕಾಶವೇ ಇಲ್ಲ. ನಗದು  ವಹಿವಾಟು ನಡೆಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಮನೆ ಮಾಲೀಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ’ ಎಂದು ಅವರು ಹೇಳುತ್ತಾರೆ.

ಉದ್ಯಮಿ ರತನ್ ಟಾಟಾ ಸೇರಿದಂತೆ ಫ್ಲಿಪ್‌ಕಾರ್ಟ್‌, ಟೈಗರ್ ಗ್ಲೋಬಲ್ ಮುಂತಾದ ಸಂಸ್ಥೆಗಳೂ  ಈ ಸ್ಟಾರ್ಟ್‌ಅಪ್‌ನಲ್ಲಿ ಬಂಡವಾಳ ತೊಡಗಿಸಿರುವುದು ಇದರ ಯಶಸ್ಸಿಗೆ ಕನ್ನಡಿ ಹಿಡಿಯುತ್ತದೆ.

‘ಮೊಬೈಲ್‌ ಆ್ಯಪ್, ಅಂತರ್ಜಾಲ ತಾಣಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ ನಂತರ ಈ ವರ್ಷಾಂತ್ಯಕ್ಕೆ – ಮುಂಬೈ ಮತ್ತು ಚೆನ್ನೈನಲ್ಲಿಯೂ ವಹಿವಾಟು  ಆರಂಭಿಸಲು ಸಂಸ್ಥೆ ಉದ್ದೇಶಿಸಿದೆ. ಬೆಂಗಳೂರಿನಲ್ಲಿನ ವಹಿವಾಟಿನಿಂದ ಬರುವ ಲಾಭವನ್ನು ಇತರ ನಗರಗಳಲ್ಲಿ ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ.

ಮಾಲೀಕರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ವಲಯವಾರು ಕಚೇರಿ ಆರಂಭಿಸಲೂ  ನಿರ್ಧರಿಸಲಾಗಿದೆ. ಮಾಲೀಕರನ್ನು ನೇರವಾಗಿ ಅಥವಾ ದಲ್ಲಾಳಿಗಳ ಮೂಲಕವೂ ಸಂರ್ಪಕಿಸಲಾಗುತ್ತಿದೆ. ಮಾಲೀಕರು ತಮಗೆ ನಿಗದಿಯಾದ ಸಿಬ್ಬಂದಿ ಜತೆ ನೇರವಾಗಿ ವ್ಯವಹರಿಸಬಹುದು.  ಒಬ್ಬ ಅಧಿಕಾರಿಗೆ (ರಿಲೇಷನ್‌ಶಿಪ್‌ ಮ್ಯಾನೇಜರ್) 100 ರಿಂದ 200 ಮಾಲೀಕರ  ನಿರ್ವಹಣೆಯ ಹೊಣೆ ಒಪ್ಪಿಸಲಾಗಿದೆ.

‘ಔತಣಕೂಟ ಏರ್ಪಡಿಸಿ, ಗಲಾಟೆ ಮಾಡಿದ, ಬಾಡಿಗೆ ಕರಾರು ಉಲ್ಲಂಘಿಸಿದ ಸಂದರ್ಭಗಳಲ್ಲಿ ಸಂಸ್ಥೆಯು ಮಧ್ಯಪ್ರವೇಶಿಸಿ ಬಿಕ್ಕಟ್ಟು ಬಗೆಹರಿಸಲೂ ಶ್ರಮಿಸುತ್ತದೆ’ ಎಂದು ಇಸ್ಮಾಯಿಲ್ ಖಾನ್ ಹೇಳುತ್ತಾರೆ.

‘ಐಬಿಎಂ, ಸಿಸ್ಕೊ ಮತ್ತಿತರ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ   ’ನೆಸ್ಟ್‌ಅವೇ’ಯ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಜಾರಿಯಲ್ಲಿ ಇದೆ.

‘ಬಾಡಿಗೆದಾರರ ವೇದಿಕೆ ರೂಪಿಸಿ,   ದೀರ್ಘಾವಧಿಯಲ್ಲಿಯೂ ಅವರು ಸಂಸ್ಥೆ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇರುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ‘ಬಾಡಿಗೆ ಮನೆ ಶಿಫಾರಸು ಮಾಡಿದವರಿಗೆ ಬಾಡಿಗೆ ಹಣದಲ್ಲಿ  ಶೇ 25ರಷ್ಟು ರಿಯಾಯ್ತಿ, ಮಾಲೀಕರು ಹೊಸ ಮಾಲೀಕರಿಗೆ ಶಿಫಾರಸು ಮಾಡಿದರೆ  ಅವರಿಗೆ ₹  10 ಸಾವಿರದಷ್ಟು ಶುಲ್ಕ ಪಾವತಿಸಲಾಗುವುದು’ ಎಂದು ಅವರು ಹೇಳುತ್ತಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೈಸೂರು, ದಾವಣೆಗೆರೆ, ಹುಬ್ಬಳ್ಳಿಗಳಲ್ಲಿಯೂ ಈ ಪರಿಕಲ್ಪನೆ ವಿಸ್ತರಿಸುವ ಆಲೋಚನೆ ಈ ಸ್ಟಾರ್ಟ್‌ಅಪ್‌  ಸ್ಥಾಪಕರಿಗೆ ಇದೆ.

ಸಂಸ್ಥೆಯ ವಹಿವಾಟಿನ ವಿವರ
* 3,500 ಬೆಂಗಳೂರಿನಲ್ಲಿ ಸಂಸ್ಥೆಯ  ನಿರ್ವಹಣೆಯಲ್ಲಿ ಇರುವ ಆಸ್ತಿಗಳ ಸಂಖ್ಯೆ
* 25%-30% ಅನಿವಾಸಿ ಭಾರತೀಯರ ಒಡೆತನದಲ್ಲಿ ಇರುವ ಬಾಡಿಗೆ ಮನೆಗಳು
* ₹5ಸಾವಿರದಿಂದ ₹2 ಲಕ್ಷ ಸಂಸ್ಥೆಯ ವಶದಲ್ಲಿ ಇರುವ ಮನೆ ಮತ್ತು ಸ್ವತಂತ್ರ ವಿಲಾಸಿ ಮನೆ (ವಿಲ್ಲಾ) ಗಳ ತಿಂಗಳ ಬಾಡಿಗೆ
* 20%ಬೆಂಗಳೂರಿನ ಹೊರಗೆ ನೆಲೆಸಿರುವ ಮನೆ ಮಾಲೀಕರು
* 6 ಸಾವಿರ ದೇಶದಾದ್ಯಂತ ಸಂಸ್ಥೆಯ ನಿರ್ವಹಣೆಯಲ್ಲಿರುವ ಆಸ್ತಿಗಳು
* ₹60 ಕೋಟಿ ವಾರ್ಷಿಕ ವಹಿವಾಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT