ADVERTISEMENT

ಮೈಸೂರು ದಸರಾ ವಹಿವಾಟು ಜೋರಾ?

ಗಣೇಶ ಅಮಿನಗಡ
Published 2 ಸೆಪ್ಟೆಂಬರ್ 2014, 19:30 IST
Last Updated 2 ಸೆಪ್ಟೆಂಬರ್ 2014, 19:30 IST

ದಸರಾ ಎಂದರೆ ಮೈಸೂರಿಗರ ಕಣ್ಣಲ್ಲಿ ಕಾಮನಬಿಲ್ಲು ಮೂಡುತ್ತವೆ. ಬಂಧುಗಳು, ಗೆಳೆಯರು ಸೇರಲು ಒಂದು ನೆಪವಾದರೆ ವ್ಯಾಪಾರಿ ಗಳಿಗೆ ಇಡೀ ವರ್ಷದಲ್ಲೇ ಗರಿಷ್ಠ ವಹಿವಾಟಿನ ಸೀಜನ್‌ ಎಂದೇ ಖುಷಿಗೆ ಕಾರಣವಾಗುವ ಸಮಯವಿದೆ. ಹೋಟೆಲ್‌, ಟ್ಯಾಕ್ಸಿ, ಆಟೊ, ಕುದುರೆ ಟಾಂಗಾ, ರೇಷ್ಮೆ ಸೀರೆ, ಮೈಸೂರು ಪಾಕ್‌ ಸೇರಿದಂತೆ ದಸರೆ ಯಲ್ಲಿ ಹೆಚ್ಚಿನ ವಹಿವಾಟು ನಡೆಸಿ ಲಾಭ ಕಾಣಲು ವರ್ತಕರು, ಚಾಲಕರು ಹಂಬಲಿಸುತ್ತಿರುತ್ತಾರೆ. ಈ ಬಾರಿಯ ದಸರಾ ಕಲರವವೂ ಮೈಸೂರಿನಲ್ಲಿ ಅದಾಗಲೇ ಶುರುವಾಗಿದೆ. 

ದಸರಾ ಮಹೋತ್ಸವ ಸಂದರ್ಭದಲ್ಲಿ ಅದರಲ್ಲೂ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಬರುವ ಪ್ರವಾಸಿಗರು ಈಗಾಗಲೇ ಹೋಟೆಲ್‌ ಹಾಗೂ ಲಾಡ್ಜ್‌ಗಳಲ್ಲಿ ಕೊಠಡಿಗಳನ್ನು ಮುಂಗಡವಾಗಿ ಕಾದಿರಿಸಲು ಆರಂಭಿಸಿದ್ದಾರೆ. ಹೋಟೆಲ್‌, ಲಾಡ್ಜ್‌ಗಳಲ್ಲಿ ಉಳಿಯಲು ಕೊಠಡಿ ಕಾಯ್ದಿರಿಸುವ ಪ್ರವಾಸಿಗರಲ್ಲಿ ಶೇ 60ರಷ್ಟು ಮಂದಿ ಆನ್‌ಲೈನ್‌ ಮೂಲಕ ಕೋರಿಕೆ ಸಲ್ಲಿಸುತ್ತಿದ್ದಾರೆ. ರಾಜ್ಯ ಅಲ್ಲದೆ, ದೇಶ ಹಾಗೂ ವಿದೇಶಗಳಿಂದಲೂ ಮುಂಚಿತವಾಗಿ ಕೊಠಡಿ ಕಾದಿರಿಸುವವರ ಸಂಖ್ಯೆ ಹೆಚ್ಚೇ ಇದೆ.

ನಗರದಲ್ಲಿ 500 ರೆಸ್ಟೊರೆಂಟ್‌ ಒಳಗೊಂಡ ಹೋಟೆಲ್‌ಗಳು ಹಾಗೂ 300 ಲಾಡ್ಜ್‌ಗಳಿದ್ದು, ಒಟ್ಟಾರೆಯಾಗಿ ಏಳು ಸಾವಿರ ಕೊಠಡಿಗಳು ಪ್ರವಾಸಿಗರಿಗೆ ಲಭ್ಯವಿವೆ. ಕಳೆದ ವರ್ಷ 6,500 ಕೊಠಡಿಗಳು ಇದ್ದವು. ಪ್ರವಾಸಿಗರ ದಟ್ಟಣೆ ಕಂಡ ಹೋಟೆಲ್‌, ಲಾಡ್ಜ್‌ಗಳ ಮಾಲೀಕರು ವರ್ಷ ಕಳೆಯುವಷ್ಟರಲ್ಲಿಯೇ 500 ಕೊಠಡಿಗಳನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಹೊಸ ಹೋಟೆಲ್‌ ಹಾಗೂ ಲಾಡ್ಜ್‌ಗಳ ಕೊಠಡಿಗಳೂ ಸೇರಿವೆ.


ಮಧ್ಯಮ ವರ್ಗದವರಿಗೆ ಜೇಬಿಗೆ ಹೊರೆಯಾಗದಂತೆ ಕೈಗೆಟುಕುವ ದರದಿಂದ ಹಿಡಿದು, ಅಂದರೆ ದಿನಕ್ಕೆ ರೂ. 500ರಿಂದ ಗರಿಷ್ಠ ರೂ. 10 ಸಾವಿರದವರೆಗೂ ಶುಲ್ಕ ವಿಧಿಸುವ ಹೋಟೆಲ್‌ ಹಾಗೂ ಲಾಡ್ಜ್‌ಗಳು ಮೈಸೂರಿನಲ್ಲಿವೆ. ಇದರಲ್ಲಿ ತಾರಾ  ಶ್ರೇಣಿಯ ಹೋಟೆಲುಗಳೂ ಇವೆ. ಟೂ ಸ್ಟಾರ್‌ ಹಾಗೂ ತ್ರಿ ಸ್ಟಾರ್‌ ಹೋಟೆಲ್‌ಗಳೇ 50ರಷ್ಟಿವೆ. ಇವೆಲ್ಲವುಗಳಲ್ಲಿಯೇ ಒಟ್ಟು 2 ಸಾವಿರ ಕೋಣೆಗಳು ಪ್ರವಾಸಿಗರಿಗೆ ಲಭ್ಯವಿವೆ.

ಆನ್‌ಲೈನ್‌ ಮೂಲಕ ಮುಂಚಿತವಾಗಿ ಕೊಠಡಿಗಳನ್ನು ಕಾದಿರಿಸುವುದರಿಂದ ಪ್ರವಾಸಿಗರಿಗೇ ಲಾಭ. ಹೇಗೆಂದರೆ, ಹೋಟೆಲ್‌ ಹಾಗೂ ಲಾಡ್ಜ್‌ಗಳ ವೆಬ್‌ಸೈಟ್‌ಗಳಲ್ಲಿ ಕೋಣೆಗಳ ನಿಗದಿತ ದರ ಪ್ರಕಟಿಸಲಾಗಿರುತ್ತದೆ. ಹೀಗಾಗಿ ಪ್ರವಾಸಿಗರು ಮೈಸೂರಿಗೆ ಬಂದು ನೇರವಾಗಿ ಹೋಟೆಲ್‌ ಅಥವಾ ಲಾಡ್ಜ್‌ ಸೇರಿದಾಗ ದರದಲ್ಲೇನೂ ವ್ಯತ್ಯಾಸ ಆಗುವುದಿಲ್ಲ. ಹೀಗಾಗಿ, ನವರಾತ್ರಿಯಲ್ಲಿ ಶೇ 70ರಷ್ಟು ಹೋಟೆಲ್‌ಗಳು ಭರ್ತಿಯಾಗುತ್ತವೆ. ಜಂಬೂಸವಾರಿಯ ಹಿಂದಿನ ದಿನವೇ ಎಲ್ಲ ಹೋಟೆಲ್‌ ಕೊಠಡಿಗಳು ಭರ್ತಿಯಾಗಲಿವೆ.

‘ಪ್ರವಾಸಿಗರ ದಟ್ಟಣೆ ಇಲ್ಲದ ಅವಧಿಯಲ್ಲಿ ಹೋಟೆಲ್‌ ಕೊಠಡಿ ಮತ್ತು ಇತರೆ ಸೇವೆಗಳಿಗೆ ಶೇ 25ರಷ್ಟು ರಿಯಾಯಿತಿ ಕೊಟ್ಟಿರುತ್ತೇವೆ. ಸೀಜನ್ ವೇಳೆಗೆ ರಿಯಾಯಿತಿ ಕೊಡಲಾಗುವುದಿಲ್ಲ. ಇದನ್ನು ಕಂಡ ಪ್ರವಾಸಿಗರು ದರ ಹೆಚ್ಚಾಯಿತೆಂದು ಆಕ್ಷೇಪಿಸುತ್ತಾರೆ. ಹೋಟೆಲ್‌ ಕೊಠಡಿ ಶುಲ್ಕ ದುಪ್ಪಟ್ಟು ಮಾಡಲಾಗಿದೆ ಎಂದು ದೂರುವ ಅಗತ್ಯವಿಲ್ಲ. ಇದರ ನಿವಾರಣೆಗೆ ಮುಂಗಡ ಕಾದಿರಿಸುವುದೇ ಉತ್ತಮ ಪರಿಹಾರ, ಪ್ರವಾಸಿಗರ ದೃಷ್ಟಿಯಲ್ಲಿ ಜಾಣತನದ ನಿರ್ಧಾರ’ ಎನ್ನುತ್ತಾರೆ ಮೈಸೂರು ಹೋಟೆಲ್‌ಗಳ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ.

‘ಹೋಟೆಲ್‌ ಅಥವಾ ಲಾಡ್ಜ್‌ನವರು ಟ್ರಾವೆಲ್‌ ಏಜೆನ್ಸಿಗಳ ಜತೆಗೆ ಮೈತ್ರಿ  ಮಾಡಿಕೊಳ್ಳುವುದರಿಂದ ಅಲ್ಲಿಯೂ ರಿಯಾಯಿತಿ ಸಿಗುತ್ತದೆ. ಜತೆಗೆ, ಬೆಳಗಿನ ಉಪಾಹಾರ, ಪ್ರವಾಸಿ ತಾಣಗಳ ಕೈಪಿಡಿ ಉಚಿತ ಎನ್ನುವ ಸಣ್ಣಪುಟ್ಟ ಕಾಣಿಕೆಗಳನ್ನು ಕೊಡುತ್ತೇವೆ’ ಎಂದು ಖುಷಿಯಿಂದ ಹೇಳುತ್ತಾರೆ ಮೈಸೂರು ಹೋಟೆಲ್‌ಗಳ ಮಾಲೀಕರ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ.

‘ಜಿಲ್ಲಾಡಳಿತದ ಜತೆ ಹೋಟೆಲಿನವರೂ ಕೈಜೋಡಿಸುವುದು ದಸರಾ ಸಂದರ್ಭದಲ್ಲಿ ನಡೆದುಕೊಂಡುಬಂದಿದೆ. ಪ್ರವಾಸೋದ್ಯಮಕ್ಕೆ

ಸಂಬಂಧಿಸಿ ಕರಪತ್ರ, ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತೇವೆ. ಜತೆಗೆ, ವಿತರಿಸುತ್ತೇವೆ. ಪ್ರವಾಸ ಪ್ರಯಾಸವಾಗದ ಹಾಗೆ ನೋಡಿಕೊಳ್ಳುತ್ತೇವೆ’ ಎನ್ನುವ ಭರವಸೆ ಕೊಡುತ್ತಾರೆ ಮೈಸೂರು ಹೋಟೆಲ್‌ಗಳ ಮಾಲೀಕರ ಸಂಘದ ಖಜಾಂಚಿ ಸುಬ್ರಹ್ಮಣ್ಯ ತಂತ್ರಿ.

ADVERTISEMENT

ವಿಮಾನ ಹಾರಾಟ ಮತ್ತೆ ಶುರು
ಇದಿಷ್ಟು ಹೋಟೆಲ್‌ಗಳ ಸಂಗತಿಯಾದರೆ, ಮೈಸೂರಿನಿಂದ ದಕ್ಷಿಣ ಭಾರತದ ಪ್ರಮುಖ ನಗರಗಳೂ ಸೇರಿದಂತೆ ದೇಶದ ವಿವಿಧೆಡೆಗೆ ಮತ್ತು ಆ ನಗರಗಳಿಂದ ಮೈಸೂರಿಗೆ ಮತ್ತೆ ವಿವಾನ ಹಾರಾಟ ಆರಂಭವಾಗಿದೆ.

ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆ ಮತ್ತೆ ವಿಮಾನ ಹಾರಾಟ ಶುರು ಮಾಡಿದೆ. ಬೆಂಗಳೂರು, ಕೊಚ್ಚಿ, ಹೈದರಾಬಾದ್‌, ಮಂಗಳೂರು, ಬೆಳಗಾವಿ, ಚೆನ್ನೈ, ಪುಣೆ, ಮುಂಬೈ, ಕೋಲ್ಕತ್ತ ಹಾಗೂ ದೆಹಲಿಗೆ ಆಗಸ್ಟ್ 21ರಿಂದಲೇ ಹಾರಾಟ ಆರಂಭವಾಗಿದೆ. ಅಕ್ಟೋಬರ್‌ 30ರವರೆಗೆ ರಿಯಾಯಿತಿಯನ್ನೂ ಘೋಷಿಸಿದೆ. ಮೈಸೂರು–ಕೊಚ್ಚಿ, ಮೈಸೂರು–ಹೈದರಾಬಾದ್‌, ಮೈಸೂರು–ಮಂಗಳೂರು ಹಾಗೂ ಮೈಸೂರು–ಚೆನ್ನೈಗೆ ರೂ. 2,499 ದರ ನಿಗದಿಗೊಳಿಸಲಾಗಿದೆ. ಮೈಸೂರು–ವಿಶಾಖಪಟ್ಟಣಂ, ಮೈಸೂರು–ಪುಣೆಗೆ ರೂ. 2,799, ಮೈಸೂರು–ಮುಂಬೈಗೆ ರೂ. 2,999, ಮೈಸೂರು–ಕೊಲ್ಕತ್ತಗೆ ರೂ. 4,299 ಹಾಗೂ ಮೈಸೂರು–ದೆಹಲಿಗೆ ರೂ. 4,299 ದರಗಳಿವೆ.

‘ಮೈಸೂರು ದಸರಾ ಮಹೋತ್ಸವ ಪ್ರವಾಸಿಗರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸ್ಪೈಸ್‌ಜೆಟ್‌ ಮತ್ತೆ ಹಾರಾಟ ಆರಂಭಿಸಿದೆ. ಇದರೊಂದಿಗೆ ರಿಯಾಯಿತಿಯನ್ನೂ ನೀಡಿದ್ದೇವೆ. ದಸರಾಕ್ಕೆ ಇದು ನಮ್ಮ ಕೊಡುಗೆ’ ಎನ್ನುತ್ತಾರೆ ಸ್ಪೈಸ್‌ಜೆಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕನ್ನೇಶ್ವರನ್‌ ಅವಿಲಿ.

ಟೂರಿಸ್ಟ್‌ ಪಾಸ್‌ಪೋರ್ಟ್
ಈ ಬಾರಿಯ ದಸರಾದಲ್ಲಿ ಸ್ನೇಹಮಯಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಧೂಮಪಾನ ಹಾಗೂ ತಂಬಾಕು ಮುಕ್ತ ಪ್ರದೇಶ ಹಾಗೂ ಪ್ಲಾಸ್ಟಿಕ್‌ ಬಳಕೆ ನಿಷೇಧ... ಹೀಗೆ ಪರಿಸರಸ್ನೇಹಿ ಪ್ರವಾಸೋದ್ಯಮವೂ ಇರಲಿದೆ.

ಇದರೊಂದಿಗೆ, ಪ್ರವಾಸಿ ತಾಣಗಳ ಸುಲಭ ವೀಕ್ಷಣೆಗೆ, ಟಿಕೆಟ್‌ ಪಡೆಯುವ ಸಲುವಾಗಿ ಆಗುವ ನೂಕುನುಗ್ಗಲು ಹಾಗೂ ಸಮಯ ವ್ಯರ್ಥವಾಗುವುದನ್ನು ತಪ್ಪಿಸುವುದರ ಜತೆಗೆ, ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಟೂರಿಸ್ಟ್ ಪಾಸ್‌ಪೋರ್ಟ್ ನೀತಿಯನ್ನೂ ಸಹ ಜಾರಿಗೆ ತರಲಾಗುತ್ತಿದೆ. ಆನ್‌ಲೈನ್‌ ನಲ್ಲಿಯೇ ಈ ವಿಶೇಷ ಸೌಲಭ್ಯವನ್ನು ಕಾಯ್ದಿರಿಸಬಹುದು.

ಒಂದೇ ಪ್ರವೇಶಪತ್ರ
ಮೈಸೂರಿನ ಅಂಬಾವಿಲಾಸ ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿಬೆಟ್ಟ, ಕೆಆರ್‌ಎಸ್‌ ಅಣೆಕಟ್ಟೆ ಹಾಗೂ ರಂಗನತಿಟ್ಟು ಪಕ್ಷಿಧಾಮವನ್ನು ಒಂದೇ ಟೂರಿಸ್ಟ್ ಪಾಸ್‌ಪೋರ್ಟ್ ಮೂಲಕ ವೀಕ್ಷಿಸಬಹುದು. ಇದರ ಅವಧಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಇರುತ್ತದೆ.

ಒಂದೇ ಪಾಸ್‌ಪೋರ್ಟ್‌ನಲ್ಲಿ ಒಟ್ಟು ಮೂರು ಮಾದರಿಗಳಿವೆ. 1ನೇ ಮಾದರಿಯಾದ ಕಿತ್ತಲೆ ಬಣ್ಣದ ಪಾಸ್‌ಪೋರ್ಟ್‌ನಲ್ಲಿ, ಅರಮನೆ ಹಾಗೂ ಮೃಗಾಲಯ ವೀಕ್ಷಿಸಬಹುದು. 2ನೇ ಮಾದರಿಯದ್ದು ಹಸಿರು ಬಣ್ಣದ ಪಾಸ್‌ಪೋರ್ಟ್. ಇದರಲ್ಲಿ ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ ಹಾಗೂ ಚಾಮುಂಡಿ ಬೆಟ್ಟ ವೀಕ್ಷಣೆ ಅವಕಾಶವೂ ಒಳಗೊಂಡಿರುತ್ತದೆ. 3ನೇ ಮಾದರಿಯದು ನೀಲಿ ಬಣ್ಣದ ಪಾಸ್‌ಪೋರ್ಟ್ ಆಗಿದ್ದು, ಇದರಲ್ಲಿ ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿ ಬೆಟ್ಟ, ಕೆಆರ್ಎಸ್‌ ಅಣೆಕಟ್ಟೆ ಹಾಗೂ ರಂಗನತಿಟ್ಟು ಪಕ್ಷಿಧಾಮಗಳ ಪ್ರವೇಶ ಅವಕಾಶವಿದೆ. ಎಲ್ಲ ಪ್ರವಾಸಿ ಪಾಸ್‌ಪೋರ್ಟ್‌ಗಳಿಗೂ ಶೇ 20ರಷ್ಟು ರಿಯಾಯಿತಿ ಇರುತ್ತದೆ.

ಎಲ್ಲ ಪ್ರವಾಸೋದ್ಯಮ ಕೇಂದ್ರ, ಪ್ರವಾಸೋದ್ಯಮ ಇಲಾಖೆ, ಪ್ರಮುಖ ಹೋಟೆಲ್‌ಗಳಲ್ಲಿ ಟೂರಿಸ್ಟ್ ಪಾಸ್‌ಪೋರ್ಟ್ ಮಾರಾಟಕ್ಕೆ ಲಭ್ಯ.
ಇದರಿಂದ ದಸರಾ ಮಹೋತ್ಸವಕ್ಕೆ ಬರುವ ಪ್ರವಾಸಿಗರು ಮೈಸೂರಿನ ಸುತ್ತಲಿನ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಲು ಸುಲಭವಾಗುತ್ತದೆ.
ಸಾಂಸ್ಕೃತಿಕ ನಗರಿ ಮೈಸೂರು ವಿಶ್ವ ಪ್ರಸಿದ್ಧ ದಸರಾ ಹಬ್ಬಕ್ಕೆ ಸಜ್ಜಾಗಿದೆ. ದಸರಾ ಎಂದರೆ ದೂಸರಾ ಮಾತಾಡದೆ (ಸಬೂಬು ಹೇಳಿ ತಪ್ಪಿಸಿಕೊಳ್ಳದೇ) ಬನ್ನಿ ಎನ್ನುವ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.