ADVERTISEMENT

ಮೊಬೈಲ್‌ ಪಾವತಿಗೆ ಮುನ್ನುಡಿ ‘ಪೇಟಿಎಂ’

ದೀಪಕ್‌ ಹೆಗಡೆ
Published 1 ಮಾರ್ಚ್ 2016, 19:58 IST
Last Updated 1 ಮಾರ್ಚ್ 2016, 19:58 IST
ವಿಜಯಶೇಖರ್‌ ಶರ್ಮ
ವಿಜಯಶೇಖರ್‌ ಶರ್ಮ   

ಮೊಬೈಲ್‌ ಮತ್ತು ಇಂಟರ್‌ನೆಟ್‌ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗುತ್ತಿರುವ ಇಂದಿನ ದಿನಗಳಲ್ಲಿ ದೈನಂದಿನ ವ್ಯವಹಾರಗಳನ್ನು ಮೊಬೈಲ್‌ನಿಂದಲೇ ನಿರ್ವಹಿಸುವಂತೆ ಮಾಡುವ ಎಷ್ಟು ಸೌ

ಜನರಿಗೆ ಆನ್‌ಲೈನ್‌ ಶಾಪಿಂಗ್‌ ಜೊತೆಗೆ ಮೊಬೈಲ್‌ ಶುಲ್ಕ ಪಾವತಿ, ಡಿಟಿಎಚ್‌ ಬಿಲ್‌ ಪಾವತಿ, ಬಸ್‌ ಟಿಕೆಟ್‌, ಬುಕಿಂಗ್‌, ಹೋಟೆಲ್‌ ಬುಕಿಂಗ್‌, ಕೆಲವು ಆಯ್ದ ನಗರಗಳಲ್ಲಿನ ವಿದ್ಯುತ್‌ ಬಿಲ್‌ ಮತ್ತು ಗ್ಯಾಸ್‌ ಬಿಲ್‌ ಪಾವತಿ ಹಾಗೂ ಮೊಬೈಲ್‌ ವ್ಯಾಲೆಟ್‌ ಮೂಲಕ ಹಣ ವರ್ಗಾವಣೆಯಂತಹ ಸೇವೆ ನೀಡುವ ಕಂಪೆನಿಯೇ ಪೇಟಿಎಂ.

2000ರಲ್ಲಿ one97 ಕಮ್ಯುನಿಕೇಷನ್‌ ಎಂಬ ಮೂಲ ಕಂಪೆನಿಯಿಂದ ಪ್ರಾರಂಭವಾದ ಪೇಟಿಎಂ (Paytm), ಇಂದು 10 ಕೋಟಿ ಬಳಕೆದಾರರನ್ನು ಹೊಂದಿರುವ ಬೃಹತ್‌ ಕಂಪೆನಿ. ದೆಹಲಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪದವಿ ಪಡೆದ ವಿಜಯಶೇಖರ್‌ ಶರ್ಮ ಅವರು  ಪೇಟಿಎಂನ ಸ್ಥಾಪಕ ಮತ್ತು  ಸಿ.ಇ.ಒ. ಆಗಿದ್ದಾರೆ.

ಉತ್ತರ ಪ್ರದೇಶದ ಅಲಿಗಡ     ಪಟ್ಟಣದಲ್ಲಿ ಪಿ.ಯು.ಸಿ. ವರೆಗಿನ ವಿದ್ಯಾಭ್ಯಾಸ ಮುಗಿಸಿ ಕೇವಲ 15ನೇ ವಯಸ್ಸಿಗೆ ದೆಹಲಿ  ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಪ್ರವೇಶ ಪಡೆದರು. ತಿಂಗಳಿಗೆ ಹತ್ತು ಸಾವಿರ ವೇತನ ಸಿಗುವ ನೌಕರಿ ಪಡೆದು ತಂದೆಯೊಬ್ಬರೆ ಆದಾಯದ ಮೂಲವಾಗಿದ್ದ ಆರು ಜನರ ಕುಟುಂಬಕ್ಕೆ ನೆರವಾಗಬೇಕೆಂಬುದು ಎಂಜಿನಿಯರಿಂಗ್‌ ಪ್ರವೇಶ ಪಡೆದಾಗ ಅವರಿಗಿದ್ದ ಗುರಿಯಾಗಿತ್ತು. ಆದರೆ ಪದವಿ ಮುಗಿಯುವ ವೇಳೆಗೆ ಅವರ ಗುರಿ ಸಂಪೂರ್ಣವಾಗಿ ಬದಲಾವಣೆಗೊಂಡಿತ್ತು.

ಹಿಂದಿ ಮಾಧ್ಯಮದಿಂದ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರಿಗೆ ಆಂಗ್ಲ ಭಾಷೆಯಲ್ಲಿ ಪರಿಪೂರ್ಣತೆ ಸಾಧಿಸಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಆಂಗ್ಲ ದಿನಪತ್ರಿಕೆ ನಿಯತಕಾಲಿಕೆಗಳನ್ನು  ಓದುವ ಅಭ್ಯಾಸ ಮಾಡಿಕೊಂಡರು. ಅದರಲ್ಲಿ ಸಿಲಿಕಾನ್‌ ವ್ಯಾಲಿಯ ದೊಡ್ಡ ಕಂಪೆನಿಗಳು, ಯಶಸ್ವಿ ಉದ್ಯಮಿಗಳ ಕುರಿತ ಲೇಖನಗಳಿಂದ ಪ್ರಭಾವಿತರಾಗಿ ಉದ್ಯೋಗ ಅರಸಿ ಹೋಗುವುದಕ್ಕಿಂತ ತಾವೇ ಸ್ವತಃ ಏನಾದರೂ ಆರಂಭಿಸಬೇಕೆನ್ನುವ ತುಡಿತ ಆರಂಭಗೊಂಡಿತು. ಆಗ ಚಿಗುರೊಡೆಯಲು ಪ್ರಾರಂಭಿಸಿದ ಕುಡಿಯ ಫಲವೇ ಪೇಟಿಎಂ.

ಐದು ನೂರಕ್ಕೂ ಹೆಚ್ಚು ವಿಭಾಗಗಳು,  30 ಲಕ್ಷಕ್ಕೂ  ಹೆಚ್ಚು ಉತ್ಪನ್ನಗಳು ಪೇಟಿಎಂನಲ್ಲಿ ಮಾರುಕಟ್ಟೆ ಅವಕಾಶ ಪಡೆದಿವೆ. ಒಂದು ಪೇಟಿಎಂ ಖಾತೆಯಿಂದ ಇನ್ನೊಂದು ಪೇಟಿಎಂ ಖಾತೆಗೆ ಹಣ ವರ್ಗಾವಣೆ, ಉತ್ಪನ್ನಗಳ ಬೆಲೆಯಲ್ಲಿ ಚೌಕಾಸಿ ಮಾಡುವ ಆಯ್ಕೆ ಕ್ಯಾಶ್‌ಬ್ಯಾಕ್‌ (ಹಣ ಮರಳಿಸುವುದು)  ಹೀಗೆ ವಿಶಿಷ್ಟ ಸೇವೆಗಳನ್ನು ಹೊಂದಿರುವ ಕಂಪೆನಿಗೆ ಅಲಿವೇ, ಅಲಿಬಾಬಾ, ಸೈಫ್‌ ಪಾರ್ಟಿಸ್‌, ಸಫೈರ್‌ ವೆಂಚರ್‌ ಮತ್ತು ಸಿಲಿಕಾನ್‌ ವ್ಯಾಲಿ ಬ್ಯಾಂಕ್ ಪ್ರಮುಖ ಹೂಡಿಕೆದಾರರಾಗಿದ್ದಾರೆ.

ಆನ್‌ಲೈನ್‌ ಶಾಪಿಂಗ್‌, ಮೊಬೈಲ್‌ ಡಿಟಿಎಚ್‌ ರಿಚಾರ್ಜ್‌, ಟಿಕೆಟ್‌ ಬುಕಿಂಗ್‌, ಕೆಲವು ಸೇವೆಗಳ ಬಿಲ್‌ ಪಾವತಿಯ ಜೊತೆಗೆ ಉಬರ್‌ ಮೇಕ್‌ ಮೈ ಟ್ರಿಪ್‌,  ಮುಂತಾದ ಅಂತರ್ಜಾಲ ತಾಣಗಳಿಗೂ ಪೇಟಿಎಂ ಖಾತೆಯ ಮೂಲಕ ಹಣ ಸಂದಾಯ ಮಾಡಬಹುದು. ಪೇಟಿಎಂ ವೆಬ್‌ಸೈಟ್‌ ಅಥವಾ ಆ್ಯಪ್‌ನಲ್ಲಿ ಈ ರೀತಿಯ ವಹಿವಾಟು ನಡೆಸಲು ಗ್ರಾಹಕ ತನ್ನ ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ವಿಳಾಸದೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ನಂತರ ಶಾಪಿಂಗ್‌, ರೀಚಾರ್ಜ್‌ ಅಥವಾ ಬಿಲ್‌ ಪೇಮೆಂಟ್‌ ಮಾಡುವಾಗ ಬ್ಯಾಂಕಿನ ಖಾತೆಯ ವಿವರದೊಂದಿಗೆ ಹಣ ಸಂದಾಯ ಮಾಡಬೇಕು. ಹೀಗೆ ಪೇಮೆಂಟ್ ಮಾಡುವಾಗ ಪ್ರೋಮೊ ಕೋಡ್‌ ಅಥವಾ ಕೂಪನ್‌ ಕೋಡ್‌ ನಮೂದಿಸುವ ಆಯ್ಕೆ ಇರುತ್ತದೆ.

ಕ್ಯಾಷ್‌ಬ್ಯಾಕ್‌ ಪಡೆಯಲು ಬೇರೆ ಬೇರೆ ಕೂಪನ್‌ ಸೈಟ್‌ಗಳಿಂದ (ಉದಾ: ಪ್ರೀಕಮಾಲ್‌ಡಾಟ್‌ಕಾಮ್‌, ಕೂಪನ್‌ದುನಿಯಾಡಾಟ್‌ಕಾಂ) ಪೇಟಿಎಂಗೆ ಸಂಬಂಧಿಸಿದ ಕೂಪನ್‌ ಕೋಡನ್ನು ಖರೀದಿಸಿದ ಉತ್ಪನ್ನ ಮತ್ತು ಒಟ್ಟು ಮೊತ್ತಕ್ಕೆ ಅನುಗುಣವಾಗಿ ಪಡೆದುಕೊಂಡು ಹಣ ಸಂದಾಯ ಮಾಡುವ ಪೂರ್ವದಲ್ಲಿ ನಮೂದಿಸಬೇಕು. ಕೆಲವೊಂದು ಸಮಯದಲ್ಲಿ ಪೇಟಿಎಂ ತನ್ನ ಆ್ಯಪ್‌ ಮತ್ತು ವೆಬ್‌ಸೈಟ್‌ ಮೂಲಕವೇ ವಿವಿಧ ರೀತಿಯ ಕೊಡುಗೆಗಳ ಕೂಪನ್‌ ಕೋಡ್‌ ಅಥವಾ ಕ್ಯಾಷ್‌ಬ್ಯಾಕ್‌ ಕೋಡನ್ನು ಗ್ರಾಹಕರಿಗೆ ತಲುಪಿಸುತ್ತದೆ.

ಪೂರ್ಣ ವಹಿವಾಟು ಮುಗಿದ 24 ಗಂಟೆಯೊಳಗೆ ಆಯಾ ಕೋಡ್‌ ನಿಗದಿಯಾದ ಮೊತ್ತ ಗ್ರಾಹಕನ ಪೇಟಿಎಂ ಖಾತೆ ಸೇರುತ್ತದೆ. ಈ ಮೊತ್ತವನ್ನು ಮುಂದಿನ ಖರೀದಿಗೆ ಅಥವಾ ಬಿಲ್‌ ಪಾವತಿಗೆ ವಿನಿಯೋಗಿಸಬಹುದು ಅಥವಾ ಬ್ಯಾಂಕ್‌ ಖಾತೆಗೂ ವರ್ಗಾವಣೆ ಮಾಡಬಹುದು. ಯಾವುದೇ ರೀತಿಯ ಉತ್ಪನ್ನ  ಅಥವಾ ವಸ್ತುವಿನ ತಯಾರಕರು ದೇಶದ  ನಾನಾ ಭಾಗದ ಗ್ರಾಹಕರಿಗೆ ಮಾರಾಟ ಮಾಡುವ ಮುಕ್ತ ಅವಕಾಶ ಪೇಟಿಎಂ ನಿಂದ ದೊರೆಯುತ್ತದೆ.

ಸರಕುಗಳ ಮಾರಾಟಗಾರರಿಗೆ ಅಂತರ್ಜಾಲ ತಾಣ ಅಥವಾ ಮೊಬೈಲ್‌ ಆ್ಯಪ್‌ ಮೂಲಕ ಹೇಗೆ ಮಾರಾಟ ಮಾಡಬೇಕೆಂದು ತಿಳಿಸಲು, ಆನ್‌ಲೈನ್‌ ವಹಿವಾಟಿನ ವಿವಿಧ ಹಂತದ ಬಗ್ಗೆ ಮಾಹಿತಿ ನೀಡಲು ಮತ್ತು ಅದಕ್ಕೆ ಅಗತ್ಯವಿರುವ ತಾಂತ್ರಿಕ ಸಹಕಾರ ಒದಗಿಸುವ ಸ್ಥಳೀಯ ಪರಿಣತರನ್ನು ಸಂಪರ್ಕಿಸುವ ಕಾರ್ಯಕ್ಕಾಗಿ ಪೇಟಿಎಂ  ನ ಗೋಬಿಗ್‌ ಮತ್ತು ಪೇಟಿಎಂಫೋರ್ಸ್‌ ವಿಭಾಗಗಳು ಕೆಲಸ ಮಾಡುತ್ತದೆ.

ಗ್ರಾಫಿಕ್‌ ಡಿಸೈನ, ಫೋಟೊ ಎಡಿಟರ್‌ ಬಿಸಿನೆಸ್‌ ಸರ್ವಿಸ್‌, ಹಣಕಾಸು ಸೇವೆ ಮತ್ತು ಇತರೆ ಸ್ಥಳೀಯ ಸೇವೆಗಳು ಹಾಗೂ ಮಾರಾಟಗಾರರ ನಡುವೆ ಗೋಬಿಗ್‌ ಸೇತುವೆಯಾಗಿ ಕೆಲಸ ಮಾಡುತ್ತದೆ. ಮಾರಾಟಗಾರರು  ಹೇಗೆ ಖಾತೆ ಪ್ರಾರಂಭಿಸಬೇಕು, ಅದನ್ನು ಹೇಗೆ ನಿರ್ವಹಿಸಬೇಕು. ಆರ್ಡರನ್ನು ಹೇಗೆ ಪ್ಯಾಕ್‌ ಮಾಡಬೇಕು ಮುಂತಾದ ವಿಷಯಗಳ ಬಗ್ಗೆ ಪೇಟಿಎಂ  ಫೋರ್ಸ್‌ ತರಬೇತಿ ನೀಡುತ್ತದೆ.

ದೇಶದೆಲ್ಲೆಡೆ ಸುಮಾರು ಮೂವತ್ತು ಸಾವಿರ ಪಿನ್‌ಕೋಡ್‌ಗಳಿಗೆ ಒಂದು ಲಕ್ಷದ ಏಳುಸಾವಿರ ಮಾರಾಟಗಾರರ ಮೂಲಕ ಸೇವೆ ಒದಗಿಸುತ್ತದೆ. ಮಾರಾಟಗಾರರ ಸಂಖ್ಯೆಯನ್ನು 2016ರ ಅಂತ್ಯದೊಳಗೆ ಒಂದು ಲಕ್ಷದ ಏಳು ಸಾವಿರದಿಂದ ಐದು ಲಕ್ಷಕ್ಕೆ  ಏರಿಸುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ ಪೇಟಿಎಂನ ವಹಿವಾಟು (ಎಲೆಕ್ಟ್ರಾನಿಕ್ಸ್ ) ಮುಖ್ಯಸ್ಥ ಅಮಿತ್‌ ಬಗಾರಿಯಾ.

ಪೇಮೆಂಟ್‌ ಮೂಲಕ ಆರಂಭಿಸಿ ಖರೀದಿಯೊಂದಿಗೆ ಅಭಿವೃದ್ಧಿಗೊಂಡು ಉಳಿತಾಯ ಮಾಡುವ ಅವಕಾಶ ನೀಡುತ್ತಿದ್ದೇವೆ ಎಂಬುದು ಸ್ಥಾಪಕ ಮತ್ತು ಸಿಇಒ ವಿಜಯಶೇಖರ ಶರ್ಮಾ ಅವರ ಮಾತು. ದೇಶದ ಇಂಟರ್‌ನೆಟ್‌ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ, ಚೀನಾದ ಇ–ಕಾಮರ್ಸ್‌ ದಿಗ್ಗಜ ಕಂಪೆನಿ ಅಲಿಬಾಬಾದಿಂದಲೇ ಹೂಡಿಕೆಯ ಪ್ರಯೋಜನ ಪಡೆದು 2016ರ ಅಂತ್ಯದೊಳಗೆ ಭಾರತದ ಮೆಟ್ರೊ ಮತ್ತು ಎರಡನೇ ಹಂತದ ನಗರಗಳ ಅತಿದೊಡ್ಡ ಮಾರುಕಟ್ಟೆ ಜಾಲತಾಣವಾಗುವ ಗುರಿಯೊಂದಿಗೆ ಪೇಟಿಎಂ ಮುನ್ನುಗ್ಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.