ADVERTISEMENT

ಮೌಲ್ಯಯುತ ಸಂಸ್ಥೆ ಖ್ಯಾತಿಗೆ ಧಕ್ಕೆ

ಪಿಟಿಐ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST

ನವದೆಹಲಿ: ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌, ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿನ (ನಿಫ್ಟಿ) ಮುಂಚೂಣಿಯಲ್ಲಿ ಇರುವ 10 ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿಯಿಂದ ಕೆಳಗೆ ಜಾರಿದೆ.

ಮಂಗಳವಾರದ ವಹಿವಾಟಿನ ಅಂತ್ಯದಲ್ಲಿ ಸಂಸ್ಥೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯವು ‘ಬಿಎಸ್‌ಇ’ನಲ್ಲಿ ₹ 2,01,478 ಕೋಟಿಗಳಿಗೆ ಇಳಿದಿದೆ. ಇದರಿಂದಾಗಿ, ‘ಬಿಎಸ್‌ಇ’ಯಲ್ಲಿ ವಹಿವಾಟು ನಡೆಸುವ ಸಂಸ್ಥೆಗಳ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಈಗ 11ನೆ ಸ್ಥಾನಕ್ಕೆ ಇಳಿದಿದೆ.

‘ಎನ್‌ಸಿಇ’ಯಲ್ಲಿ (ನಿಫ್ಟಿ) ಕೂಡ ಸಂಸ್ಥೆಯ ಮಾರುಕಟ್ಟೆ ಮೌಲ್ಯ ₹ 2,01,074 ಕೋಟಿಗಳಷ್ಟಿದೆ.

ADVERTISEMENT

ಸ್ಥಾಪಕರ ಜತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಸಿಇಒ ವಿಶಾಲ್‌ ಸಿಕ್ಕಾ ಅವರು ರಾಜೀನಾಮೆ ಸಲ್ಲಿಸಿದ ನಂತರ ಸಂಸ್ಥೆಯ ಷೇರು ಬೆಲೆ ಕುಸಿತ ದಾಖಲಿಸುತ್ತಿದೆ. ಶುಕ್ರವಾರ ಒಂದೇ ದಿನ ಶೇ 10ರಷ್ಟು ಕುಸಿತ ಕಂಡು ಮಾರುಕಟ್ಟೆ ಮೌಲ್ಯದಲ್ಲಿ ₹ 22,519 ಕೋಟಿಗಳಷ್ಟು ಹೂಡಿಕೆದಾರರ ಸಂಪತ್ತನ್ನು ಕರಗಿಸಿತ್ತು. ಶನಿವಾರ ಪ್ರಕಟವಾದ ಷೇರು ಮರು ಖರೀದಿ ನಿರ್ಧಾರದ ಹೊರತಾಗಿಯೂ ಸೋಮವಾರವೂ ಷೇರು ಬೆಲೆ ಶೇ 5ರಷ್ಟು ಕುಸಿತ ಕಂಡಿತ್ತು.

₹ 5,08,385 ಕೋಟಿಗಳ ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌, ಮೊದಲ ಸ್ಥಾನದಲ್ಲಿ ಇದೆ. ಟಿಸಿಎಸ್‌ (₹ 4,77,815 ಕೋಟಿ), ಎಚ್‌ಡಿಎಫ್‌ಸಿ ಬ್ಯಾಂಕ್‌ (₹ 4,50,753 ಕೋಟಿ) ನಂತರದ ಸ್ಥಾನದಲ್ಲಿ ಇವೆ.

ಏರಿಳಿತದ ಮೇಲೆ ‘ಸೆಬಿ’ ನಿಗಾ

‘ಷೇರುಪೇಟೆಯಲ್ಲಿ ಇನ್ಫೊಸಿಸ್‌ ಷೇರಿನ ಬೆಲೆ ಭಾರಿ ಏರಿಳಿತ ಕಾಣುತ್ತಿರುವುದರ ಮೇಲೆ ನಿಗಾ ಇರಿಸಲಾಗಿದೆ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷ ಅಜಯ್‌ ತ್ಯಾಗಿ ಹೇಳಿದ್ದಾರೆ.

‘ಷೇರು ವಹಿವಾಟಿನ ಖಾತೆಗೆ ಆಧಾರ್‌ ಜೋಡಣೆ ಮಾಡಲು ವಿಧಿಸಿರುವ ಡಿಸೆಂಬರ್‌ ಗಡುವಿಗೆ ‘ಸೆಬಿ’ ಬದ್ಧವಾಗಿದೆ. ಷೇರು ಮಾರುಕಟ್ಟೆಯ ವಹಿವಾಟಿನ ಮೂಲಕ ತೆರಿಗೆ ತಪ್ಪಿಸುವುದಕ್ಕೆ ಕಡಿವಾಣ ಹಾಕುವುದು ಮತ್ತು ಹಣದ ಅಕ್ರಮ ವರ್ಗಾವಣೆ ತಪ್ಪಿಸುವುದು ಈ ಕ್ರಮದ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.