ನವದೆಹಲಿ : ಷೇರು ಗುತ್ತಿಗೆ ವಹಿವಾಟಿಗೆ ಸಂಬಂಧಿಸಿದಂತೆ ರಿಲಯನ್ಸ್ ಇಂಡಸ್ಟ್ರೀಸ್ಗೆ (ಆರ್ಐಎಲ್) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು ಒಂದು ವರ್ಷದ ನಿಷೇಧ ವಿಧಿಸಿದೆ.
ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ಹತ್ತು ವರ್ಷಗಳ ಹಿಂದಿನ ವಂಚನೆ ಪ್ರಕರಣದಲ್ಲಿ ಮುಕೇಶ್ ಅಂಬಾನಿ ನೇತೃತ್ವದ ಸಂಸ್ಥೆಯು ಅಂದಾಜು ₹ 500 ಕೋಟಿಗೂ ಹೆಚ್ಚು ಮೊತ್ತದ ದಂಡ ಪಾವತಿಸಬೇಕಾಗಿದೆ.
ವಾರ್ಷಿಕ ಶೇ 12ರ ಬಡ್ಡಿ ದರದಲ್ಲಿ ₹ 447 ಕೋಟಿಗಳಷ್ಟು ದಂಡ ವಿಧಿಸಲಾಗಿದೆ. ಇದನ್ನು 2007ರ ನವೆಂಬರ್ 29ರಿಂದ ಪಾವತಿಸಬೇಕಾಗಿದೆ. 45 ದಿನಗಳಲ್ಲಿ ಪಾವತಿಸಬೇಕು ಎಂದೂ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಆರ್ಐಎಲ್ ಕಾನೂನು ಬಾಹಿರವಾಗಿ ₹ 513 ಕೋಟಿ ಲಾಭ ಮಾಡಿಕೊಂಡಿದೆ ಎಂದು ‘ಸೆಬಿ’ ಆರೋಪಿಸಿದೆ.
ರಿಲಯನ್ಸ್ನ ಈ ಮೊದಲಿನ ಅಂಗಸಂಸ್ಥೆ ರಿಲಯನ್ಸ್ ಪೆಟ್ರೋಲಿಯಂನ ಷೇರುಗಳ ಫ್ಯೂಚರ್ ಆ್ಯಂಡ್ ಆಪ್ಶನ್ ವಂಚನೆಯ ವಹಿವಾಟಿಗೆ ಈ ಪ್ರಕರಣ ಸಂಬಂಧಿಸಿದೆ. ಒಳಗಿನವರೇ ಕೈವಾಡ ನಡೆಸಿ ವಂಚನೆ ಎಸಗಿದ ಪ್ರಕರಣ ಇದಾಗಿದೆ. ಆರ್ಐಎಲ್ ಮತ್ತು ಇತರ 12 ಸಂಸ್ಥೆಗಳು ಒಂದು ವರ್ಷದವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವಹಿವಾಟು ನಡೆಸುವಂತಿಲ್ಲ ಎಂದು ಸೆಬಿ ಆದೇಶಿಸಿದೆ. ಈ ನಿಷೇಧ ತಕ್ಷಣದಿಂದಲೇ ಜಾರಿಗೆ ಬರಲಿದೆ.
‘ಸೆಬಿ’ಯ ನಿಷೇಧವನ್ನು ಷೇರುಗಳ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲಾಗುವುದು ಎಂದು ಆರ್ಐಎಲ್ನ ವಕ್ತಾರರೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.