ADVERTISEMENT

ರೂ 100 ಗಡಿ ದಾಟಿದ ತೊಗರಿ

ಸುಭಾಸ ಎಸ್.ಮಂಗಳೂರ
Published 30 ಜೂನ್ 2015, 19:30 IST
Last Updated 30 ಜೂನ್ 2015, 19:30 IST

ಬಡ ಮತ್ತು ಮಧ್ಯಮ ವರ್ಗದವರ ಮನೆಗಳಲ್ಲಿ ‘ಬೇಳೆ ಬೇಯುವುದು ಕಷ್ಟ’ ಸಾಧ್ಯ ಎನ್ನುವಂತಾಗಿದೆ. ಏಕೆಂದರೆ, ‘ತೊಗರಿಯ ಕಣಜ’ ಎಂದೇ ಖ್ಯಾತಿ ಪಡೆದಿರುವ ಕಲಬುರ್ಗಿ ಜಿಲ್ಲೆಯಲ್ಲೇ ತೊಗರಿ ಬೆಲೆ ಗಗನಮುಖಿ ಅಗಿದೆ.

ಇದು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಬೆಲೆ ಗಗನ ಮುಖಿಯಾಗಿರುವುದರಿಂದ ಹೆಚ್ಚು ಫಸಲು ಬೆಳೆಯದ ಬಡ ಮತ್ತು ಮಧ್ಯಮ ರೈತರು ಕೈ ಕೈ ಹಿಸುಕಿಕೊಳ್ಳು ವಂತಾದರೆ, ಭಾರಿ ಪ್ರಮಾಣದಲ್ಲಿ ತೊಗರಿ ಬೆಳೆ ತೆಗೆದಿರುವ ದೊಡ್ಡ ರೈತರು ಬಹಳ ಖುಷಿಯಾಗಿದ್ದಾರೆ. ಆದರೆ, ಗ್ರಾಹಕರು ಮಾತ್ರ ಒಂದು ಕಿಲೋ ತೊಗರಿ ಬೇಳೆಗೆ ₨120 ದರ ನೀಡಬೇಕಲ್ಲ ಎಂದು ಬೇಸರಗೊಂಡಿದ್ದಾರೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಸ್ಯಾ ಹಾರಿಗಳ ಸಂಖ್ಯೆ ಅಧಿಕ. ಅಲ್ಲದೇ, ಭಾರತೀಯರು ಬೇಳೆ ಕಾಳುಗಳನ್ನು ಅತಿ ಹೆಚ್ಚಾಗಿ ಬಳಸುತ್ತಾರೆ. ಅದರಲ್ಲೂ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್, ಮಹಾರಾಷ್ಷ್ರ ಮತ್ತು ಗೋವಾ ಸೇರಿದಂತೆ ದಕ್ಷಿಣ ಭಾರತೀಯರಿಗೆ ತೊಗರಿ ನೆಚ್ಚಿನ ಆಹಾರವಾಗಿದ್ದು, ಹೆಚ್ಚು ಕಡಿಮೆ ಪ್ರತಿ ನಿತ್ಯವೂ ಬಳಕೆ ಮಾಡುತ್ತಾರೆ.

240 ಲಕ್ಷ ಟನ್ ಅಗತ್ಯ

ಮಾರುಕಟ್ಟೆ ತಜ್ಞರ ಪ್ರಕಾರ ಭಾರತಕ್ಕೆ ಪ್ರತಿ ವರ್ಷ 240 ಲಕ್ಷ ಟನ್ ಬೇಳೆಕಾಳು ಬೇಕು. ಆದರೆ, ಸದ್ಯ 180 ಲಕ್ಷ ಟನ್ ಉತ್ಪಾದನೆ ಆಗುತ್ತಿದ್ದು, 60 ಲಕ್ಷ ಟನ್ ಕೊರತೆ ಬೀಳುತ್ತಿದೆ.

ತೊಗರಿ ಒಂದನ್ನೇ ತೆಗೆದುಕೊಂಡರೆ ಪ್ರತಿ ವರ್ಷ 35–40 ಲಕ್ಷ ಟನ್ ತೊಗರಿ ಭಾರತೀಯರಿಗೆ ಬೇಕು. ಈ ಪೈಕಿ 25–27 ಲಕ್ಷ ಟನ್ ತೊಗರಿ ಬೆಳೆಯಲಾಗುತ್ತಿದೆ. ಇದರಲ್ಲಿ ಕಲಬುರ್ಗಿ ವಿಭಾಗದ ಪ್ರಮಾಣವೇ ಶೇ 28ರಷ್ಟು ಇರುವುದು ಗಮನಾರ್ಹ.

ಕಲಬುರ್ಗಿ ಜಿಲ್ಲೆಯೊಂದರಲ್ಲೇ ಈ ವರ್ಷ 3.70 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಈಗ ಬೆಲೆ ಹೆಚ್ಚಳದಿಂದಾಗಿ ಈ ಪ್ರಮಾಣ 4.20 ರಿಂದ 4.50 ಲಕ್ಷ ಹೆಕ್ಟೇರ್ ತಲುಪುವ ನಿರೀಕ್ಷೆ ಇದೆ.

ಪ್ರಕೃತಿ ಮುನಿಸು-ಇಳುವರಿ ಕುಸಿತ
ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಸಕಾಲಕ್ಕೆ ಬೀಳದ್ದರಿಂದ ರೈತರು ಬವಣೆ ಪಡುವಂತಾಯಿತು. ನಂತರ ಸುರಿದ ಮಳೆ ತೊಗರಿ ಹೂಗಳಿಗೆ ಹಾನಿ ಮಾಡಿದರೆ, ಆ ಬಳಿಕ ಆಲಿಕಲ್ಲು ಮಳೆ ಮತ್ತು ಇಬ್ಬನಿ ಕವಿದ ಪರಿಣಾಮ ತೊಗರಿ ಇಳುವರಿಯಲ್ಲಿ ಶೇ 50ರಿಂದ 60ರಷ್ಟು ಕುಂಠಿತವಾಯಿತು. ಎಕರೆಗೆ ನಾಲ್ಕರಿಂದ ಆರು ಕ್ವಿಂಟಲ್ ಬೆಳೆಯಬೇಕಾಗಿದ್ದ ಬೆಳೆ, ಎರಡರಿಂದ ಮೂರು ಕ್ವಿಂಟಲ್‌ಗೆ ಕುಸಿಯಿತು.
ಅಲ್ಲದೇ, ಆರಂಭದಲ್ಲಿ ತೊಗರಿಯನ್ನು ಮಾರಾಟ ಮಾಡಿದ ರೈತರಿಗೆ ಕ್ವಿಂಟಲ್‌ಗೆ ₨5 ಸಾವಿರದಿಂದ ₨5,500ರಷ್ಟು ದರ ಸಿಕ್ಕರೆ, ಈಗ ಮಾರುಕಟ್ಟೆಯಲ್ಲಿ ಕ್ವಿಂಟಲ್ ತೊಗರಿಯ ಬೆಲೆ ₨7,200ರ ಗಡಿ ತಲುಪಿದೆ!

ಎಲ್ಲೆಲ್ಲಿ ಬಿತ್ತನೆ ಹೆಚ್ಚು
ಕರ್ನಾಟಕ ಸೇರಿದಂತೆ ಗುಜರಾತ್, ಮಧ್ಯ ಪ್ರದೇಶ, ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಕೆಲ ಭಾಗಗಳಲ್ಲಿ ತೊಗರಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಕಲಬುರ್ಗಿ ವಿಭಾಗದ ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳು ತೊಗರಿ ಬಿತ್ತನೆಗೆ ಫಲವತ್ತಾದ ಭೂಮಿಯನ್ನು ಹೊಂದಿವೆ.

‘ಕರ್ನಾಟಕದಲ್ಲಿ ಈ ಬಾರಿ ಏಳರಿಂದ ಎಟು ಲಕ್ಷ ಟನ್ ತೊಗರಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ನೆರೆಯ ಮಹಾರಾಷ್ಟ್ರದಲ್ಲಿ 12 ಲಕ್ಷ ಟನ್‌ ಉತ್ಪಾದನಾ ಗುರಿ ಇದೆ. ಗುಜರಾತ್ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಮೂರರಿಂದ ನಾಲ್ಕು ಲಕ್ಷ ಟನ್ ತೊಗರಿ ಉತ್ಪಾದನೆ ನಿರೀಕ್ಷಿಸಲಾಗಿದೆ. ಒಟ್ಟಾರೆ ದೇಶದಲ್ಲಿ ಈ ಬಾರಿ 25 ಲಕ್ಷದಿಂದ 27 ಲಕ್ಷ ಟನ್ ತೊಗರಿ ಲಭ್ಯವಾಗಬಹುದು ಎಂದು ಕೃಷಿ ಇಲಾಖೆ ಹಾಗೂ ಸರ್ಕಾರಗಳು ಅಂದಾಜು ಮಾಡಿವೆ’ ಎಂದು ಅಂಕಿ ಅಂಶ ಸಹಿತ ವಿವರಿಸುತ್ತಾರೆ ಗುಲ್ಬರ್ಗ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ.

‘ದೇಶದ ಒಟ್ಟು ಉತ್ಪಾದನೆಯ ಶೇ 28ರಷ್ಟು ತೊಗರಿಯನ್ನು ಕಲಬುರ್ಗಿ ವಿಭಾಗದಲ್ಲಿ ಬೆಳೆಯಲಾಗುತ್ತಿದೆ. 2013–14ರಲ್ಲಿ ಇಳುವರಿ ಕಡಿಮೆಯಾದ್ದರಿಂದ ಈ ವರ್ಷ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮ ಕ್ವಿಂಟಲ್ ತೊಗರಿಯ ಬೆಲೆ ₨7,200ಕ್ಕೆ ತಲುಪಿದೆ’ ಎಂದು ಬೆಲೆ ಏರಿಕೆಗೆ ನಿಗ್ಗುಡಗಿ ಕಾರಣ ವಿವರಿಸುತ್ತಾರೆ.

‘2008–09ರಲ್ಲಿ ಕ್ವಿಂಟಲ್ ತೊಗರಿಗೆ ಕೇಂದ್ರ ಸರ್ಕಾರ ₨2 ಸಾವಿರ ಬೆಂಬಲ ಬೆಲೆ ನಿಗದಿ ಮಾಡಿತ್ತು. 2014–15ರಲ್ಲಿ ₨4,350 ನಿಗದಿ ಮಾಡಿದೆ. ಕಳೆದ ವರ್ಷ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಿಲೋ ತೊಗರಿ ಬೇಳೆಗೆ ₨60ರಿಂದ 70 ಇದ್ದ ದರ ಇದೀಗ, ₨110ರಿಂದ ₨120ಕ್ಕೆ ಏರಿಕೆಯಾಗಿದೆ. ಹವಾಮಾನ ವೈಪರೀತ್ಯ, ರೈತರು ಹತ್ತಿ ಮತ್ತು ಸೋಯಾಬಿನ್‌ ಹೆಚ್ಚಾಗಿ ಬೆಳೆದಿದ್ದರಿಂದ ಇಳುವರಿ ಗಣನೀಯವಾಗಿ ಕುಸಿಯಿತು. ಇದರ ಪರಿಣಾಮ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಹೆಚ್ಚಾಗಿ ಗ್ರಾಹಕರ ಜೇಬಿಗೆ ಬಿಸಿ ತಟ್ಟಿದಂತಾಗಿದೆ’ ಎಂದು ವರ್ತಕರು ಅಭಿಪ್ರಾಯಪಡುತ್ತಾರೆ.

‘ಕಲಬುರ್ಗಿ ಜಿಲ್ಲೆಯಲ್ಲಿ 200 ದಾಲ್‌ ಮಿಲ್‌ಗಳು (ಕಾಳನ್ನು ಒಡೆದು ಬೇಳೆ ಮಾಡುವ ಕಾರ್ಖಾನೆಗಳು) ಇವೆ. ಆದರೆ, ತೊಗರಿಯ ಇಳುವರಿ ಕುಸಿದಿದ್ದರಿಂದ ದಾಲ್ ಮಿಲ್ ಮಾಲೀಕರು ಈ ಬಾರ ಭಾರಿ ಸಂಕಷ್ಟ ಎದುರಿಸುವಂತಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು, ಪಾಲಿಶ್ ಮಾಡದೇ ಉತ್ತಮ ಗುಣಮಟ್ಟದ ತೊಗರಿ ಬೇಳೆಯನ್ನು ಇಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ. ಆದರೆ, ಬೆಲೆ ಏರಿಕೆ ಹಾಗೂ ಇಳುವರಿ ಕುಸಿತ ನಮಗೆಲ್ಲಾ ದೊಡ್ಡ ಹೊಡೆತ ನೀಡಿದೆ’ ಎಂದು ದಾಲ್ ಮಿಲ್ ಮಾಲೀಕರೊಬ್ಬರು ಕಳವಳ ವ್ಯಕ್ತಪಡಿಸುತ್ತಾರೆ.

ಪರ್ಯಾಯ ಬೆಳೆ ಅಗತ್ಯ
‘ಪ್ರತಿ ವರ್ಷ ಒಂದೇ ಜಮೀನಿನಲ್ಲಿ ತೊಗರಿಯನ್ನು ಬೆಳೆದರೆ ನೆಟೆರೋಗ ಬರುವ ಸಂಭವವಿದ್ದು, ಬೆಳೆ ಬದಲಾವಣೆ ಮಾಡುವುದು ಸೂಕ್ತ. ಅಂತರ ಬೆಳೆಯಾಗಿ ಸಜ್ಜೆ, ಜೋಳ, ಮೆಕ್ಕೆಜೋಳ, ಸೋಯಾಬಿನ್‌, ಹೆಸರು, ಉದ್ದು ಬಿತ್ತನೆ ಮಾಡಬಹುದು. ರೈತರು ಒಂದೇ ಬೆಳೆ ಬೆಳೆಯದೆ ನಾಲ್ಕೈದು ತರಹದ ಬೆಳೆಗಳನ್ನು ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಸೂಕ್ತ ದರ ನಿರೀಕ್ಷಿಸಬಹುದು. ಒಂದೇ ಬೆಳೆ ಬೆಳೆಯುವುದರಿಂದ ಕೀಟ, ರೋಗ ಬಾಧೆ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಆದ್ದರಿಂದ ರೈತರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡುತ್ತಾರೆ ಕಲಬುರ್ಗಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ.

ಬೇಳೆಕಾಳು ಆಮದು ಪರಿಣಾಮ?
‘ಕೇಂದ್ರ ಸರ್ಕಾರ ಸೆಪ್ಟೆಂಬರ್‌ ತಿಂಗಳಿನಲ್ಲಿ ಐದು ಲಕ್ಷ ಟನ್ ತೊಗರಿ ಬೇಳೆ ಕಾಳುಗಳನ್ನು ಆಮದು ಮಾಡಿಕೊಳ್ಳುವುದಾಗಿ ಹೇಳಿದೆ. ಆದರೆ, ಆಮದು ಸುಂಕ ವಿಧಿಸದ ಪರಿಣಾಮ ವ್ಯಾಪಾರಿಗಳಿಗೆ ಇದು ಹೆಚ್ಚಿನ ಲಾಭ ದೊರಕಿಸಿಕೊಡುತ್ತದೆಯೇ ಹೊರತು ಗ್ರಾಹಕರಿಗೆ ಏನೂ ಲಾಭವಾಗುವುದಿಲ್ಲ. ಅಲ್ಲದೇ, ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ತೊಗರಿಗೆ  ₨7,000 ದರವಿದೆ.

ಆಮದು ಮಾಡಿಕೊಂಡಲ್ಲಿ ಈ ದರ ₨5 ಸಾವಿರಕ್ಕೆ ಕುಸಿಯುವ ಭೀತಿಯಿದ್ದು, ರೈತರು ಮತ್ತೆ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ತೊಗರಿ ಆಮದು ಮಾಡಿಕೊಳ್ಳಬಾರದು. ಒಂದು ವೇಳೆ ಮಾಡಿಕೊಂಡಲ್ಲಿ ಕನಿಷ್ಠ ಶೇ 25 ರಿಂದ 30ರಷ್ಟು ಸುಂಕ ವಿಧಿಸಬೇಕು’ ಎಂಬುದು ಈ ಭಾಗದ ತೊಗರಿ ಬೆಳೆಗಾರರು ಮತ್ತು ಹೋರಾಟಗಾರರ ಆಗ್ರಹದ ನುಡಿ.

ಜೂನ್‌ ತಿಂಗಳ ಆವಕ
ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ ಪ್ರಕಾರ ರಾಜ್ಯದ ಮಾರುಕಟ್ಟೆಯಲ್ಲಿ ಜೂನ್ 19ರ ವರೆಗೆ 22,962 ಕ್ವಿಂಟಲ್ ಮಾದರಿ ತೊಗರಿ ಹಾಗೂ ಕೆಂಪು ತಳಿಯ 281 ಕ್ವಿಂಟಲ್ ಸೇರಿದಂತೆ ಒಟ್ಟು 23,243 ಕ್ವಿಂಟಲ್ ತೊಗರಿ ಆವಕವಾಗಿದೆ. ಹಿಂದಿನ ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ಈ ಪ್ರಮಾಣದಲ್ಲಿ ಶೇ 14ರಷ್ಟು ಇಳಿಕೆಯಾಗಿದೆ. ಕ್ವಿಂಟಲ್ ಮಾದರಿ ತೊಗರಿಗೆ ₨3,419ರಿಂದ ₨7,043ರ ವರೆಗೆ ಹಾಗೂ ಕೆಂಪು ತಳಿಯ ತೊಗರಿಗೆ ₨5,300 ರಿಂದ ₨7,100 ದರ ಸಿಕ್ಕಿದೆ.

ADVERTISEMENT


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.