ADVERTISEMENT

ರೂ.1800 ಕೋಟಿಗೂ ಅಧಿಕ ವಂಚನೆ

ಅಬಕಾರಿ ಸುಂಕ; 379 ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ನವದೆಹಲಿ(ಪಿಟಿಐ):  ತೆರಿಗೆ ಮೂಲದ ವರಮಾನ ಸೋರಿಕೆಯನ್ನು ಸಮರ್ಥ ರೀತಿಯಲ್ಲಿ ತಡೆಗಟ್ಟುವ ಯತ್ನವಾಗಿ ಕೇಂದ್ರ ಸರ್ಕಾರ ಕಳೆದ ಹಣಕಾಸು ವರ್ಷದಲ್ಲಿ ಕೈಗೊಂಡ ಕ್ರಮಗಳು ಸಾಕಷ್ಟು ಫಲ ನೀಡಿವೆ. ಈ ನಿಟ್ಟಿನಲ್ಲಿ ತೆರಿಗೆ ವಂಚನೆ ಪ್ರಕರಣಗಳ ಪತ್ತೆ ಕಾರ್ಯ ನಡೆಸಿದಾಗ 2013; 14ನೇ ಹಣಕಾಸು ವರ್ಷದಲ್ಲಿ  ಈವರೆಗೆ ಒಟ್ಟು ರೂ.1800 ಕೋಟಿಗೂ ಅಧಿಕ ಮೊತ್ತದ ಕೇಂದ್ರ ಅಬಕಾರಿ ಸುಂಕವನ್ನು ವಂಚಿಸಿರುವುದು ಕಂಡುಬಂದಿದೆ.

ದೇಶದ ವಿವಿಧೆಡೆ ಕೇಂದ್ರ ಅಬಕಾರಿ ಸುಂಕ ವಂಚಿಸಿದ ಒಟ್ಟು 379 ಪ್ರಕರಣಗಳು ಪತ್ತೆಯಾಗಿವೆ. ಕೇಂದ್ರ ಅಬಕಾರಿ ವಿಚಕ್ಷಣಾ ಮಹಾ ನಿರ್ದೇಶನಾಲಯ ರೂ.1,879.69 ಕೋಟಿ ಅಬಕಾರಿ ಸುಂಕ ವಂಚನೆಯ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಆದರೆ, ಸದ್ಯ ಈ ಪ್ರಕರಣಗಳಿಂದ ಒಟ್ಟು ರೂ.362.80 ಕೋಟಿ ಸುಂಕವನ್ನಷ್ಟೇ   ಈಗ ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಮುಖ್ಯವಾಗಿ, ಪಾನ್‌ ಮಸಾಲಾ, ಸಿಗರೇಟ್‌, ಕಬ್ಬಿಣ ಮತ್ತು ಉಕ್ಕು, ವಾಹನಗಳ ಬಿಡಿಭಾಗಗಳು, ಚಾಕೊಲೇಟ್‌ ಮಾರಾಟ ವಿಭಾಗದಲ್ಲಿಯೇ ಅತಿ ಹೆಚ್ಚು ಅಬಕಾರಿ ಸುಂಕ ವಂಚನೆ ನಡೆದಿವೆ.

2012; 13ನೇ ಹಣಕಾಸು ವರ್ಷದಲ್ಲಿ ಅಬಕಾರಿ ಸುಂಕ ವಂಚನೆಯ 458 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಇವಿಷ್ಟೂ ಪ್ರಕರಣಗಳಿಂದ ಒಟ್ಟು ರೂ.2,940 ಕೋಟಿಗಳಷ್ಟು ವಂಚನೆಯಾಗಿತ್ತು. ನಂತರ ರೂ.1,018 ಕೋಟಿ ವಸೂಲಿ ಮಾಡಲಾಗಿತ್ತು ಎಂದು ಸಚಿವಾಲಯದ ಅಧಿಕಾರಿಗಳು ವಿವರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.