ADVERTISEMENT

ವಿಜಯ ಬ್ಯಾಂಕ್‌ ಲಾಭ ರೂ.161ಕೋಟಿ

1ನೇ ತ್ರೈಮಾಸಿಕ ಶೇ 22 ಪ್ರಗತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:46 IST
Last Updated 28 ಜುಲೈ 2014, 19:46 IST

ಬೆಂಗಳೂರು: ವಿಜಯ ಬ್ಯಾಂಕ್‌ ಪ್ರಸಕ್ತ ಹಣಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿ ರೂ.161.46 ನಿವ್ವಳ ಲಾಭ ಗಳಿಸಿದ್ದು, ಶೇ 21.89ರಷ್ಟು ಪ್ರಗತಿ ದಾಖಲಿಸಿದೆ. ಹಿಂದಿನ ಹಣಕಾಸು ವರ್ಷದ ಏಪ್ರಿಲ್‌ ಜೂನ್‌ ಅವಧಿ ಯಲ್ಲಿ ಬ್ಯಾಂಕ್‌ ರೂ.132.46 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಬ್ಯಾಂಕ್‌ ಅಧ್ಯಕ್ಷ ವಿ.ಕಣ್ಣನ್‌, ರೂ.2096.95 ಕೋಟಿ (ಶೇ 16.14 ವೃದ್ಧಿ) ಬಡ್ಡಿ ಮೂಲದ ವರಮಾನ ಸೇರಿದಂತೆ 1ನೇ ತ್ರೈಮಾಸಿಕದ ಒಟ್ಟಾರೆ ವರಮಾನ ಗಳಿಕೆ ರೂ.3189.95 ಕೋಟಿ (ಶೇ 18.19 ಹೆಚ್ಚಳ) ಮುಟ್ಟಿದೆ. ನಿವ್ವಳ ಬಡ್ಡಿ ಗಳಿಕೆ ಪ್ರಮಾಣ ಶೇ 11.37ರ ಹೆಚ್ಚಳದೊಂದಿಗೆ ರೂ.535.48 ಕೋಟಿಗೇರಿದೆ ಎಂದು ವಿವರ ನೀಡಿದರು.

ಆದರೆ, ನಿರ್ವಹಣಾ ಲಾಭದಲ್ಲಿ ಭಾರಿ ಇಳಿಕೆಯಾಗಿದೆ. ಹಿಂದಿನ ಹಣ ಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿ ರೂ.33,039 ಕೋಟಿಯಷ್ಟಿದ್ದುದು ಈ ಬಾರಿ ರೂ.29,005 ಕೋಟಿಗೆ ಇಳಿಕೆಯಾಗಿದೆ. ಸಾಲ ವಸೂಲಿ ಗುರಿ ಸಾಧನೆಯಲ್ಲಿಯೂ ರೂ.335 ಕೋಟಿಯಷ್ಟು ಹಿನ್ನಡೆಯಾಗಿದೆ. ಇದರಿಂದ ಒಟ್ಟಾರೆ ವಸೂಲಾಗದ ಸಾಲ (ಗ್ರಾಸ್‌ ಎನ್‌ಪಿಎ) ಪ್ರಮಾಣ ರೂ.1645 ಕೋಟಿಯಿಂದ ರೂ.2068 ಕೋಟಿಗೆ (ಶೇ 2.42ರಿಂದ ಶೇ 2.68ಕ್ಕೆ) ಹೆಚ್ಚಿದೆ. ನಿವ್ವಳ ‘ಎನ್‌ಪಿಎ’ ಶೇ 1.45ರಿಂದ ಶೇ 1.77ಕ್ಕೇರಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2014ರ ಜೂ.30ರ ವೇಳೆಗೆ ಬ್ಯಾಂಕ್‌ ಶಾಖೆಗಳು 1516ಕ್ಕೆ, ಎಟಿಎಂ ಸಂಖ್ಯೆ 1536ಕ್ಕೆ ಹೆಚ್ಚಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.