ADVERTISEMENT

ವಿಪ್ರೊ: ₹ 2,076 ಕೋಟಿ ನಿವ್ವಳ ಲಾಭ

ಷೇರು ಮರು ಖರೀದಿಗೆ ಸಂಸ್ಥೆಯ ನಿರ್ದೇಶಕ ಮಂಡಳಿ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ವಿಪ್ರೊ: ₹ 2,076 ಕೋಟಿ ನಿವ್ವಳ ಲಾಭ
ವಿಪ್ರೊ: ₹ 2,076 ಕೋಟಿ ನಿವ್ವಳ ಲಾಭ   

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸಂಸ್ಥೆಯಾಗಿರುವ ವಿಪ್ರೊ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹2,076 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

₹ 11 ಸಾವಿರ ಕೋಟಿಗಳಷ್ಟು ಮೊತ್ತದ ಷೇರುಗಳನ್ನು ಮರು ಖರೀದಿಸಲೂ ಸಂಸ್ಥೆ ನಿರ್ಧರಿಸಿದೆ. ಸಂಸ್ಥೆಯ ಬಳಿ ಇರುವ ಹೆಚ್ಚುವರಿ ನಗದನ್ನು ಷೇರುದಾರರಿಗೆ ಮರಳಿಸಲು ಈ ನಿರ್ಧಾರಕ್ಕೆ ಬರಲಾಗಿದೆ.

‘ವರ್ಷದ ಹಿಂದಿನ ₹ 2,052 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 1.2ರಷ್ಟು ಮಾತ್ರ ಹೆಚ್ಚಳ ದಾಖಲಾಗಿದೆ. ಏಪ್ರಿಲ್‌ನಿಂದ ಜೂನ್‌ವರೆಗಿನ ಮೂರು ತಿಂಗಳ ಒಟ್ಟು ವರಮಾನವು ₹ 14,281 ಕೋಟಿಗಳಷ್ಟಾಗಿದೆ. ಇದು ಶೇ 2.1ರಷ್ಟು ಏರಿಕೆ ದಾಖಲಿಸಿದೆ’ ಎಂದು ಸಂಸ್ಥೆಯ ಸಿಇಒ ಅಬಿದಾಲಿ ನಿಮೂಚವಾಲಾ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಪ್ರತಿ ಒಂದು ಷೇರಿಗೆ ಬೋನಸ್‌ ಷೇರು ನೀಡಲು ಮತ್ತು ಷೇರುಗಳನ್ನು ಮರು ಖರೀದಿಸಲೂ ಸಂಸ್ಥೆ ನಿರ್ಧರಿಸಿದೆ. ಷೇರು ಮರು ಖರೀದಿಗೆ ನಿರ್ದೇಶಕ ಮಂಡಳಿ ಸಮ್ಮತಿ ನೀಡಿದೆ. ಷೇರುದಾರರು ಇದಕ್ಕೆ ಅನುಮೋದನೆ ನೀಡಬೇಕಾಗಿದೆ.

‘ಷೇರುದಾರರಿಗೆ ಹೆಚ್ಚು ಲಾಭ ಒದಗಿಸುವ ಉದ್ದೇಶಕ್ಕೆ ಷೇರು ಮರು ಖರೀದಿಸಲಾಗುತ್ತಿದೆ’ ಎಂದು ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಜತಿನ್‌ ದಲಾಲ್‌ ಹೇಳಿದರು.

ಅಂಕಿ ಅಂಶ
* ₹11,000 ಕೋಟಿ ಷೇರು ಮರು ಖರೀದಿಗೆ ನಿಗದಿಪಡಿಸಿದ ಮೊತ್ತ
* 1,66,790 ಸಿಬ್ಬಂದಿಯ ಒಟ್ಟು ಸಂಖ್ಯೆ
* 34.3 ಕೋಟಿ ಮರು ಖರೀದಿಸಲಿರುವ ಷೇರುಗಳ ಸಂಖ್ಯೆ
* ₹320 ಮರು ಖರೀದಿಸಲಿರುವ ಪ್ರತಿ ಷೇರಿನ ಬೆಲೆ 
* 1,309 ಹೊಸಬರ ನೇಮಕ

*


ಸುದ್ದಿಗೋಷ್ಠಿಯಲ್ಲಿ ಸಿಒಒ ಭಾನು ಮೂರ್ತಿ, ಸಿಇಒ ಅಬಿದಾಲಿ ನಿಮೂಚ್‌ವಾಲಾ ಮತ್ತು ಹಿರಿಯ ಉಪಾಧ್ಯಕ್ಷ ಸೌರಭ್‌ ಗೋವಿಲ್‌ ಇದ್ದರು. –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.