ADVERTISEMENT

ವಿಮಾನ ಟಿಕೆಟ್‌ ದರ ನಿಯಂತ್ರಣ

ಒಂದು ಗಂಟೆಗೆ ₹ 2,500: ಕೇಂದ್ರ ಸರ್ಕಾರದ ಚಿಂತನೆ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ವಿಮಾನ ಟಿಕೆಟ್‌ ದರ ನಿಯಂತ್ರಣ
ವಿಮಾನ ಟಿಕೆಟ್‌ ದರ ನಿಯಂತ್ರಣ   

ನವದೆಹಲಿ (ಪಿಟಿಐ): ಒಂದು ಗಂಟೆ ಅವಧಿಯ ವಿಮಾನಯಾನದ ಟಿಕೆಟ್‌ ದರವನ್ನು  ಗರಿಷ್ಠ ₹ 2,500 ನಿಗದಿ ಪಡಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಈ ಕುರಿತ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ನಾಗರಿಕ ವಿಮಾನಯಾನ ಸಚಿವ  ಅಶೋಕ್‌ ಗಜಪತಿ ರಾಜು ಮಂಗಳವಾರ  ಲೋಕಸಭೆಗೆ ತಿಳಿಸಿದರು.

ವಿಮಾನ ಟಿಕೆಟ್‌ ಬೆಲೆ ನಿಯಂತ್ರಣ ಕುರಿತು ವಿಮಾನಯಾನ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸುವುದಾಗಿ  ಅವರು ಭರವಸೆ ನೀಡಿದರು.
ಪ್ರವಾಹ, ಭೂಕಂಪ, ಭೂಕುಸಿತಹಾಗೂ ಪ್ರತಿಭಟನೆ, ಹಿಂಸಾಚಾರದಂಥ ತುರ್ತು ಸಂದರ್ಭಗಳಲ್ಲಿ  ವಿಮಾನ ಟಿಕೆಟ್‌ ದರಗಳನ್ನು ಬೇಕಾಬಿಟ್ಟಿಯಾಗಿ ಹೆಚ್ಚಿಸಲಾಗುತ್ತಿದೆ ಎಂದು ಸಂಸದರು ತೀವ್ರ ಅಸಮಾಧಾನ  ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮಹೇಶ್ ಶರ್ಮಾ ಪ್ರಾದೇಶಿಕ ವಿಮಾನ ಸಂಪರ್ಕ ಜಾಲವನ್ನು ಸದೃಢಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದರು.

ಕಪ್ಪುಹಣ ಅಂದಾಜು ಸಿಕ್ಕಿಲ್ಲ: ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣದ ಬಗ್ಗೆ ಕೇಂದ್ರ ಸರ್ಕಾರದ ಬಳಿ ಅಧಿಕೃತ ಮಾಹಿತಿ ಇಲ್ಲ ಎಂದು  ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ  ರಾಜ್ಯಸಭೆಗೆ ತಿಳಿಸಿದ್ದಾರೆ.

ವಿದೇಶದಲ್ಲಿರುವ ಭಾರತೀಯರಿಗೆ  ಸೇರಿದ ಕಪ್ಪುಹಣದ ನಿಖರವಾದ ಅಂಕಿ, ಸಂಖ್ಯೆಗಳ ಬಗ್ಗೆ ತನಿಖಾ ಸಂಸ್ಥೆಗಳು ಇನ್ನೂ ತನಿಖೆ ನಡೆಸಬೇಕಿದೆ ಎಂದರು.

ಸುಸ್ತಿದಾರರ ಸಂಖ್ಯೆ ಹೆಚ್ಚಳ
ಸರ್ಕಾರಿ ವಲಯದ ಬ್ಯಾಂಕ್‌ಗಳ ಉದ್ದೇಶಪೂರ್ವಕ ಸುಸ್ತಿದಾರರ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ಹೆಚ್ಚಾಗಿದ್ದು, ವಸೂಲಾಗದ ಸಾಲದ ಪ್ರಮಾಣವೂ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2012ರಲ್ಲಿ 5,554ರಷ್ಟಿದ್ದ ಉದ್ದೇಶಪೂರ್ವಕ ಸುಸ್ತಿದಾರರ ಸಂಖ್ಯೆ ಮೂರು ವರ್ಷಗಳಲ್ಲಿ ಅಂದರೆ 2015ರವೇಳೆಗೆ 7,686ಕ್ಕೆ ಏರಿಕೆಯಾಗಿದೆ.

2012ರಲ್ಲಿ ₹27,749 ಕೋಟಿಯಷ್ಟಿದ್ದ ವಸೂಲಾಗದ ಸಾಲದ ಬಾಕಿ ಮೊತ್ತ 2015ರ ವೇಳೆಗೆ ₹ 66,190 ಕೋಟಿಗೆ ಹೆಚ್ಚಿದೆ. 

2015ರ ಡಿಸೆಂಬರ್‌ ಅಂಕಿ, ಅಂಶಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಮೊದಲ 50 ಸ್ಥಾನಗಳಲ್ಲಿ ಇರುವ ಸುಸ್ತಿದಾರರು ಬಾಕಿ  ಉಳಿಸಿಕೊಂಡ ಮೊತ್ತ ₹1.21 ಲಕ್ಷ ಕೋಟಿಗೆ ತಲುಪಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT