ADVERTISEMENT

ವಿಳಾಸ ಪತ್ತೆಗೆ ಲಿನ್‌ಕೋಡ್ಸ್‌ ಆ್ಯಪ್

​ಪ್ರಜಾವಾಣಿ ವಾರ್ತೆ
Published 16 ಮೇ 2017, 19:30 IST
Last Updated 16 ಮೇ 2017, 19:30 IST
ವಿಳಾಸ ಪತ್ತೆಗೆ ಲಿನ್‌ಕೋಡ್ಸ್‌ ಆ್ಯಪ್
ವಿಳಾಸ ಪತ್ತೆಗೆ ಲಿನ್‌ಕೋಡ್ಸ್‌ ಆ್ಯಪ್   
ಬೆಂಗಳೂರಿನ ನೆಕ್ಸ್‌ಟ್ರಾ ಸಾಫ್ಟೆಕ್‌ ಕಂಪೆನಿಯು ನಿಖರವಾಗಿ ವಿಳಾಸವನ್ನು ಪತ್ತೆ ಹಚ್ಚಲು ನೆರವು ನೀಡುವಂತಹ ಲಿನ್‌ಕೋಡ್ಸ್‌ ಆ್ಯಪ್ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ವಿಳಾಸಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪತ್ತೆ ಹಚ್ಚುವ ಆ್ಯಪ್ ಆಗಿದೆ. ಇದನ್ನು ಬಳಕೆ ಮಾಡುವ ಬಳಕೆದಾರರು ತಾವು ತಲುಪುಲಿರುವ ನಿರ್ದಿಷ್ಟವಾದ ವಿಳಾಸವನ್ನು ಸುಲಭವಾಗಿ ಪತ್ತೆ ಹಚ್ಚಿ ಅಲ್ಲಿಗೆ ತೆರಳಬಹುದು.
 
‘ಈ ಲಿನ್‌ಕೋಡ್ಸ್‌  ಅಪ್ಲೀಕೇಷನ್ ಅನ್ನು 12 ಡಿಜಿಟ್ ವಿಳಾಸದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಂದು ವೇಳೆ ವಿಳಾಸವನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದಿದ್ದಾಗ ಸಂಕೇತಗಳನ್ನು ನೀಡುವ ವೈಶಿಷ್ಟ್ಯ ಈ ಆ್ಯಪ್‌ನಲ್ಲಿ ಇದೆ. ಉದಾಹರಣೆಗೆ ನೀವು ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ನಿಮ್ಮ ಕಾರು ಕೆಟ್ಟು ನಿಲ್ಲುತ್ತದೆ. ಇಂತಹ ಸಂದರ್ಭದಲ್ಲಿ ನೀವು ಇರುವ ಸ್ಥಳವನ್ನು ಲಿನ್‌ಕೋಡ್ಸ್‌ ಸುಲಭವಾಗಿ ಗುರುತಿಸುತ್ತದೆ.
 
ಇದರ ನೆರವಿನಿಂದ ನೀವು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡು ನಿಮ್ಮ ಸ್ಥಳವನ್ನು ತಲುಪಬಹುದು’ ಎಂದು ನೆಕ್ಸ್‌ಟ್ರಾ ಸಾಫ್ಟೆಕ್‌ ಕಂಪೆನಿಯ ಮುಖ್ಯಸ್ಥರಾದ ಪ್ರಮೋದ್ ರಾಥಿ ಹೇಳುತ್ತಾರೆ. ‘ತುರ್ತು ಸಂದರ್ಭಗಳಲ್ಲಿ ಆಂಬುಲನ್ಸ್‌ಗಳು, ಪೊಲೀಸ್ ವಾಹನಗಳು, ಅಗ್ನಿಶಾಮಕ ವಾಹನಗಳು ಲಿನ್‌ಕೋಡ್ಸ್‌ ಆ್ಯಪ್ ಬಳಸಿಕೊಂಡು ಸೂಕ್ತ ಪ್ರದೇಶವನ್ನು ಅತಿ ಕಡಿಮೆ ಸಮಯದಲ್ಲಿ ತಲುಪಬಹುದು’ ಎಂದು ಪ್ರಮೋದ್ ರಾಥಿ ಮಾಹಿತಿ ನೀಡುತ್ತಾರೆ.
 
 ಬೆಂಗಳೂರಿನಂತಹ ಮಹಾನಗರದಲ್ಲಿ ವಿಳಾಸಗಳನ್ನು ಪತ್ತೆ ಹಚ್ಚುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಬೆಂಗಳೂರಿನಲ್ಲಿ ವಿಳಾಸ ಹುಡುಕುವವರಿಗೆ ಈ ಆ್ಯಪ್ ನೆರವಾಗುತ್ತದೆ. ದೇಶದ ಯಾವುದೇ ಮೂಲೆಯಲ್ಲಿರುವ ವಿಳಾಸವನ್ನು ಲೀನ್ ಕೋಡ್ಸ್ ಆ್ಯಪ್ ನಿಖರವಾಗಿ ಪತ್ತೆಹಚ್ಚಿಕೊಡುತ್ತದೆ. ಇದರಿಂದ ವಿಳಾಸಕ್ಕಾಗಿ ದಾರಿಹೋಕರನ್ನು ಪದೇ ಪದೇ ಮಾತನಾಡಿಸುವ ಕಿರಿ ಕಿರಿಯು ತಪ್ಪುತ್ತದೆ. ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಈ ಆ್ಯಪ್ ಲಭ್ಯವಿದೆ.  ಆ್ಯಪ್  ಡೌನ್‌ಲೋಡ್‌ ಮಾಡಿಕೊಳ್ಳಲು ಅಂತರ್ಜಾಲ  ವಿಳಾಸ ಸಂಪರ್ಕಿಸಿ: www.lincodes.com
 
ಋತುಚಕ್ರದ ಆ್ಯಪ್‌  ನಂಬಲರ್ಹವಲ್ಲ?
ಮಾರುಕಟ್ಟೆಯಲ್ಲಿರುವ ಋತುಚಕ್ರದ ಆ್ಯಪ್‌ಗಳನ್ನು ನಂಬಿದ ಸಾಕಷ್ಟು ಯುವತಿಯರು ಬೇಸ್ತುಬಿದ್ದು ಗರ್ಭಿಣಿಯರಾಗಿದ್ದಾರೆ. ಋತುಚಕ್ರದ ಬಗ್ಗೆ ಖಚಿತ ಮಾಹಿತಿಯ ಭರವಸೆ ನೀಡುವ ಈ ಆ್ಯಪ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು   ಅಮೆರಿಕದ ಸಂಶೋಧನಾ ವರದಿಯೊಂದು ತಿಳಿಸಿದೆ.
ವಾಷಿಂಗ್ಟನ್ ವಿಶ್ವವಿದ್ಯಾಲಯದ ಅಧ್ಯಯನ ತಂಡವೊಂದು ಈ ಸಂಶೋಧನೆ ನಡೆಸಿದೆ.
 
2,000 ಯುವತಿಯರನ್ನು ಈ ಸಂಶೋಧನಾ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಕರಾರುವಾಕ್ಕಾಗಿ ಕೆಲಸ ಮಾಡದ ಈ ಆ್ಯಪ್‌ಗಳನ್ನು ನಂಬಿದ ಸಾಕಷ್ಟು ಯುವತಿಯರು ಗರ್ಭಿಣಿಯರಾಗಿರುವುದು ಈ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಋತುಚಕ್ರ ಆ್ಯಪ್ ಗಳು ಯಾವ ಸಮಯದಲ್ಲಿ ಗೆಳೆಯನ ಜೊತೆ ಕೂಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿರುತ್ತವೆ.
 
ನಾವು ಸಂದರ್ಶನ ನಡೆಸಿದ 2,000 ಯುವತಿಯರ ಪೈಕಿ  678 ಯುವತಿಯರು ಆ್ಯಪ್ ಗಳು ನೀಡಿದ ತಪ್ಪು ಮಾಹಿತಿಯಿಂದ  ಗರ್ಭಿಣಿಯಾಗಿ ದ್ದಾರೆ ಎಂಬ ಮಾಹಿತಿ ಬಹಿರಂಗ ವಾಯಿತು ಎಂದು  ಅಧ್ಯಯನ ತಂಡದ ಮುಖ್ಯಸ್ಥರಾದ ನೀಲ್ ನಿಕ್ಕಿಂ ತಿಳಿಸಿದ್ದಾರೆ. ಆ್ಯಪ್ ಸಿದ್ಧಪಡಿಸಿರುವ ಕಂಪೆನಿಗಳು ಈ ಅಧ್ಯಯನ ವರದಿಯನ್ನು ತಳ್ಳಿಹಾಕಿದ್ದು ಬಳಕೆದಾರರು ಕಾಲ ಕಾಲಕ್ಕೆ ಸರಿಯಾಗಿ ತಮ್ಮ ಋತುಚಕ್ರದ ಮಾಹಿತಿಯನ್ನು ಅಪ್ ಡೇಟ್ ಮಾಡದಿರುವುದೇ ಈ ಪ್ರಮಾದಕ್ಕೆ ಕಾರಣ ಎಂದು ತಿಳಿಸಿವೆ.
 
ಕರೆ ಗುಣಮಟ್ಟದ ಮೌಲ್ಯಮಾಪನ
ಭಾರತದ ದೂರಸಂಪರ್ಕ ಇಲಾಖೆಯು ಫೋನ್ ಕರೆಯ ಗುಣಮಟ್ಟವನ್ನು ಮಾಪನ ಮಾಡುವ ಆ್ಯಪ್  ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಬಗ್ಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಮಾಹಿತಿ ನೀಡಿದೆ.
 
ಈ ನೂತನ ಆ್ಯಪ್ ಯಾವುದೇ ಫೋನ್ ಕರೆಯ ಗುಣಮಟ್ಟನ್ನು ಮಾಪನ ಮಾಡಲಿದೆ. ಒಂದು ವೇಳೆ ಗುಣಮಟ್ಟ ಕಳಪೆಯಾಗಿದ್ದಲ್ಲಿ ಸೇವಾ ಕಂಪೆನಿಗಳು ಬಳಕೆದಾರರಿಗೆ ಹಣ ವಾಪಸು ನೀಡುವಂತಹ ಕಾನೂನು ರಚಿಸುವ ಬಗ್ಗೆ ಚಿಂತನೆ ಪರಿಶೀಲನೆಯಲ್ಲಿ ಇದೆ ಎಂದು ‘ಟ್ರಾಯ್’ ತಿಳಿಸಿದೆ. ಕರೆಯ ಗುಣಮಟ್ಟದ ಆ್ಯಪ್ ವಿನ್ಯಾಸದ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲೇ ಈ ಆ್ಯಪ್  ಬಿಡುಗಡೆಯಾಗಲಿದೆ.
 
ರೇಡಿಯೋ ತರಂಗಗಳ ಪ್ರಮಾಣ…
ಮೊಬೈಲ್ ಟವರ್‌ನಿಂದ ಹೊರಸೂಸುವ ರೇಡಿಯೊ ತರಂಗಗಳ ಪ್ರಮಾಣವನ್ನು ಸಾರ್ವಜನಿಕರು ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಅಂತರ್ಜಾಲ ತಾಣ  ಅಭಿವೃದ್ದಿಪಡಿಸಿದೆ. ಸಾರ್ವಜನಿಕರು ಆ ಅಂತರ್ಜಾಲ ತಾಣದ ಮೂಲಕ ತಮ್ಮ ಪ್ರದೇಶದ ಮೊಬೈಲ್ ಟವರ್‌ಗಳ ರೇಡಿಯೊ ತರಂಗಗಳ ಪ್ರಮಾಣವನ್ನು ತಿಳಿದುಕೊಳ್ಳಬಹುದು.
 

 
www.tarangsanchar.gov.in ಇಲ್ಲಿಗೆ ಲಾಗಿನ್ ಆಗಿ ರೇಡಿಯೊ ತರಂಗಗಳ ಪ್ರಮಾಣವನ್ನು ತಿಳಿಯಬಹುದು. ದೇಶದಾದ್ಯಂತ 4.40 ಲಕ್ಷ ಮೊಬೈಲ್ ಟವರ್‌ಗಳ ರೇಡಿಯೊ ತರಂಗಗಳ ಮಾಹಿತಿ ಇಲ್ಲಿ ಲಭ್ಯವಿದೆ. 
 
ಹೊಸ ಹೋಂ ಸ್ಕ್ರೀನ್…
ಗೂಗಲ್ ಮ್ಯಾಪ್ ಕಂಪೆನಿಯು ಭಾರತದ ಬಳಕೆದಾರರಿಗಾಗಿ ಹೊಸ ಹೋಂ ಸ್ಕ್ರೀನ್  ಪರಿಚಯಿಸಿದೆ. ಇದರ ಮೂಲಕ ಗೆಳೆಯರು, ಪರಿಚಿತರು ಮತ್ತು ಸಂಬಂಧಿಕರನ್ನು ಸುಲಭವಾಗಿ ಗುರುತಿಸಬಹುದು. ಇದು ಆಂಡ್ರಾಯ್ಡ್‌ ಮಾದರಿಗೆ ಮಾತ್ರ ಲಭ್ಯವಿದು, ಹಲವು ನೂತನ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.
 
ಉದಾಹರಣೆಗೆ ಕಚೇರಿಯಲ್ಲಿ ಕುಳಿತು ಗೂಗಲ್ ಮ್ಯಾಪ್ ಮೂಲಕ ಮನೆಯಲ್ಲಿ ಪಾರ್ಕ್ ಮಾಡಿರುವ ಕಾರನ್ನು ಗುರುತಿಸಬಹುದು. ಕಾರು ಸ್ಪಷ್ಟವಾಗಿ ಗೋಚರಿಸದಿದ್ದರೂ ಅದರ ಆಕಾರದ ಮೂಲಕ ಕಾರು ಇರುವುದನ್ನು ಗುರುತಿಸಬಹುದು ಎಂದು ಗೂಗಲ್ ಮ್ಯಾಪ್ ಕಂಪೆನಿ ತಿಳಿಸಿದೆ. ಮಹಾನಗರಗಳಲ್ಲಿ ವಾಸಿಸುವ ನಾಗರಿಕರು ಗೂಗಲ್ ಮ್ಯಾಪ್ ಸಹಾಯದಿಂದ ಯಾವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಮ್ಯಾಪ್ ಅನ್ನು ತೆರೆದ ಕೂಡಲೇ ಹೊಸ ಹೋಂ ಸ್ಕ್ರೀನ್‌ನಲ್ಲಿ ಬಳಕೆದಾರ  ವಾಸಿಸುವ ವಿಳಾಸ ಮೊಬೈಲ್ ಪರದೆಯಲ್ಲಿ ಕಾಣುವ ಸೌಲಭ್ಯ ಇದರಲ್ಲಿ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.