ADVERTISEMENT

ವೀಸಾ: ವಿಶ್ವ ವಾಣಿಜ್ಯ ಸಂಘಟನೆಗೆ ಮೊರೆ

ಪಿಟಿಐ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ನಿರ್ಮಲಾ
ನಿರ್ಮಲಾ   

ನವದೆಹಲಿ: ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌  ಅನುಸರಿಸುತ್ತಿರುವ ಕಠಿಣ ವೀಸಾ ನೀತಿ ವಿರುದ್ಧ ಅಸಮಾಧಾನಗೊಂಡಿರುವ ಭಾರತ ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯೂಟಿಒ) ಮೊರೆ ಹೋಗಿದೆ. 

ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವ ಭಾರತೀಯರಿಗೆ ವೀಸಾ ನೀತಿ ತೊಡಕಾಗಿ ಪರಿಣಮಿಸಿದೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ.
ರಾಷ್ಟ್ರಗಳ ಮಧ್ಯೆ ಸುಗಮ ಸೇವಾ ವಹಿವಾಟು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ   ವಿಶ್ವ ವಾಣಿಜ್ಯ ಸಂಘಟನೆ ರೂಪಿಸಿರುವ ಜಾಗತಿಕ ನಿಯಮಾವಳಿಗೆ ಇದು ವಿರುದ್ಧ ವಾಗಿದೆ ಎಂದು ಭಾರತ ಆರೋಪಿಸಿದೆ.

ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ ಭಾರತ ಇತ್ತೀಚೆಗೆ ವಿಶ್ವ ವಾಣಿಜ್ಯ ಸಂಘಟನೆಗೆ ಪತ್ರ ಬರೆದಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ವಿಶ್ವ ವಾಣಿಜ್ಯ ಸಂಘಟನೆ ರೂಪಿಸಿರುವ ಜಾಗತಿಕ ನಿಯಮಾವಳಿಗೆ ಪೂರಕವಾದ ವೀಸಾ ನೀತಿ ಮಾರ್ಪಾಡು ಮಾಡುವಂತೆ ಈ ರಾಷ್ಟ್ರಗಳಿಗೆ ಸೂಚಿಸುವಂತೆ ಭಾರತ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಮನವಿ ಮಾಡಿದೆ.

ADVERTISEMENT

ಡಿಸೆಂಬರ್‌ನಲ್ಲಿ ಅರ್ಜೆಂಟೀನಾದಲ್ಲಿ  ನಡೆಯಲಿರುವ ವಿಶ್ವ ವಾಣಿಜ್ಯ ಸಂಘಟನೆಯ ವಾರ್ಷಿಕ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ  ತಿಳಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಜಾಗತಿಕ ವೇದಿಕೆಯಲ್ಲಿ ಉಳಿದ ಸದಸ್ಯ ರಾಷ್ಟ್ರಗಳ ಬೆಂಬಲ ಕೋರಿರುವುದಾಗಿ ಸಚಿವರು ತಿಳಿಸಿದರು. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 60ಕ್ಕೂ ಹೆಚ್ಚು ಮತ್ತು ಉದ್ಯೋಗ ವಲಯಕ್ಕೆ ಶೇ 28ರಷ್ಟು ಕೊಡುಗೆಯನ್ನು ಸೇವಾ ವಲಯ ನೀಡುತ್ತಿದೆ. ಒಂದು ವೇಳೆ ಮುಂದುವರೆದ ರಾಷ್ಟ್ರಗಳು ವೀಸಾ ನೀತಿ ಬಿಗಿಗೊಳಿಸಿದರೆ ಸೇವಾ ವಲಯದ ಪ್ರಗತಿ ಕುಸಿಯುತ್ತದೆ ಎಂದಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ವಿಷಯವನ್ನು ಪ್ರಸ್ತಾಪ ಮಾಡಲಿದ್ದಾರೆ ಎಂದರು. ವೀಸಾ ನೀತಿಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಸೇರಿದಂತೆ ಕೆಲವು ಮುಂದುವರೆದ ರಾಷ್ಟ್ರಗಳು ಅಮೆರಿಕದ ನೀತಿಯನ್ನೇ ಪಾಲಿಸುತ್ತಿವೆ. ಅಮೆರಿಕದ  ವೀಸಾ ನೀತಿಯಿಂದ ಭಾರತದಲ್ಲಿರುವ ಹಲವು ಅಮೆರಿಕ ಕಂಪೆನಿಗಳು ತೊಂದರೆಗೆ ಸಿಲುಕಲಿವೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.