ADVERTISEMENT

ವೈಟ್‌ಕೋಟ್‌: ವೈದ್ಯರ ಡಿಜಿಟಲ್‌ ವೇದಿಕೆ

​ಕೇಶವ ಜಿ.ಝಿಂಗಾಡೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ವೈಟ್‌ಕೋಟ್‌: ವೈದ್ಯರ ಡಿಜಿಟಲ್‌ ವೇದಿಕೆ
ವೈಟ್‌ಕೋಟ್‌: ವೈದ್ಯರ ಡಿಜಿಟಲ್‌ ವೇದಿಕೆ   

ದೇಶಿ ಆರೋಗ್ಯ ರಕ್ಷಣೆ ವಲಯವು ಸರ್ಕಾರಿ ಮತ್ತು ಖಾಸಗಿ ಬಂಡವಾಳ ಹೂಡಿಕೆ ನೆರವಿನಿಂದ ತ್ವರಿತ ಬೆಳವಣಿಗೆ ದಾಖಲಿಸುತ್ತಿದೆ. 2020ರ ವೇಳೆಗೆ ಈ ವಲಯದ ವಾರ್ಷಿಕ ವಹಿವಾಟು  ₹ 18.20 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ ಇದೆ. ವೈದ್ಯಕೀಯ ಕ್ಷೇತ್ರದ ವಿವಿಧ ಸಂಘಟನೆಗಳ ಸದಸ್ಯತ್ವ ಹೊಂದಿರುವ ವೈದ್ಯರು, ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿಯೂ ಇದ್ದಾರೆ. ವೃತ್ತಿ ಸಂಬಂಧಿತ ಮಾಹಿತಿ ವಿನಿಮಯಕ್ಕೆ ಪ್ರತ್ಯೇಕ ಸಂವಹನದ ಡಿಜಿಟಲ್‌ ವೇದಿಕೆಯ ಅಗತ್ಯ ಎದುರಾಗಿತ್ತು. ದೂರದ ಊರಿನಲ್ಲಿ ಇರುವ ವೈದ್ಯರು ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿ ಇದ್ದರೆ ಚಿಕಿತ್ಸೆ ಸುಲಭವಾಗಲಿದೆ. ಕಾಯಿಲೆಪೀಡಿತರು ಶೀಘ್ರವಾಗಿ ಗುಣಮುಖರಾಗುತ್ತಾರೆ. ಈ ಉದ್ದೇಶಕ್ಕೆ ನೆರವಾಗಲೆಂದೇ ವೈಟ್‌ಕೋಟ್‌ ಆ್ಯಪ್‌ (White Coats) ಅಭಿವೃದ್ಧಿಪಡಿಸಲಾಗಿದೆ.

ಇದೊಂದು ಉಚಿತ ವೇದಿಕೆಯಾಗಿದೆ. ನಗರ ಪ್ರದೇಶಗಳಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರು ಕೂಡ ನಗರ ಪ್ರದೇಶಗಳಲ್ಲಿನ ವೈದ್ಯರ ಜತೆ ಸಂಪರ್ಕ ಸಾಧಿಸಿ ವಿವಿಧ ಬಗೆಯ ಕಾಯಿಲೆಗಳ ಚಿಕಿತ್ಸೆಯಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೂ ಇದರಿಂದ ಸಾಧ್ಯವಾಗಲಿದೆ.

‘ವಿಮೆ, ಆರೋಗ್ಯರಕ್ಷಣೆ ಮತ್ತು ಹಣಕಾಸು ಸಂಸ್ಥೆಗಳಿಗೆ ಸೇವೆ ಸಲ್ಲಿಸುತ್ತಿರುವ ‘ವ್ಯಾಲ್ಯುಮೌಮೆಂಟಮ್‌’ ಸಂಸ್ಥೆ ಈ ಆ್ಯಪ್‌ ಅಭಿವೃದ್ಧಿಪಡಿಸಿದೆ. ಕರ್ನಾಟಕದಲ್ಲಿ ಈಗಾಗಲೇ 20 ಸಾವಿರ ವೈದ್ಯರು ಈ ಡಿಜಿಟಲ್‌ ವೇದಿಕೆಯ ಸದಸ್ಯತ್ವ ಪಡೆದುಕೊಂಡಿದ್ದಾರೆ. ಚಿಕಿತ್ಸಾ ವಿಧಾನದಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ವೇದಿಕೆ ನೆರವಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿನ ವೈದ್ಯರ ಜತೆ ಸಂವಾದ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳಲು, ತಮ್ಮ ಅನೇಕ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಲು ಈ ಆ್ಯಪ್‌ ವೈದ್ಯರಿಗೆ ನೆರವಾಗುತ್ತಿದೆ’ ಎಂದು ವೈಟ್‌ಕೋಟ್‌ನ ಮುಖ್ಯ ಅಭಿವೃದ್ಧಿ ಅಧಿಕಾರಿ ಜಯೇಶ್‌ ಚೌಹಾಣ್‌ ಹೇಳುತ್ತಾರೆ.

ADVERTISEMENT

‘ವೈದ್ಯರು ಪರಸ್ಪರ ಮಾಹಿತಿ ವಿನಿಮಯ ನಡೆಸಲು, ಚಿಕಿತ್ಸೆಗಳ ಬಗ್ಗೆ ಸಲಹೆ ನೀಡಲು / ಪಡೆಯಲು ಈ ಆ್ಯಪ್‌ ನೆರವಾಗುತ್ತಿದೆ. ವೈದ್ಯರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವೂ ಇದಾಗಿದೆ. ವೈದ್ಯಕೀಯ ಸಂಘಟನೆಗಳ ಜತೆ ಒಪ್ಪಂದ ಮಾಡಿಕೊಂಡಿರುವುದರಿಂದ ಅವುಗಳ ಸದಸ್ಯರೂ ಈ ಆ್ಯಪ್‌ನ ಭಾಗವಾಗಿದ್ದಾರೆ. ಸಂಘಟನೆಯ ವ್ಯಾಪ್ತಿಗೆ ಬರದವರೂ ಇದರ ಸದಸ್ಯತ್ವ ಪಡೆದುಕೊಳ್ಳಬಹುದು. ವೈದ್ಯರ ವಿದ್ಯಾರ್ಹತೆ ಮತ್ತಿತರ ವಿವರಗಳನ್ನು ದೃಢಪಡಿಸಿಕೊಂಡೇ ಸದಸ್ಯತ್ವ ನೀಡಲಾಗುವುದು’ ಎಂದು ಅವರು ಹೇಳುತ್ತಾರೆ.

‘ಕಾರ್ಪೊರೇಟ್‌ ಆಸ್ಪತ್ರೆಗಳ ವೈದ್ಯರೂ ಈ ವೇದಿಕೆಯಲ್ಲಿ ಇದ್ದಾರೆ. ಪರಿಣತ ವೈದ್ಯರಿಂದ ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ಇದು ಉಪಯುಕ್ತ ವೇದಿಕೆಯಾಗಿದೆ. ವೈದ್ಯಕೀಯ ಲೋಕದ ಇತ್ತೀಚಿನ ಆಗುಹೋಗುಗಳು, ಕಾಯಿಲೆ, ಚಿಕಿತ್ಸಾ ವಿಧಾನದ ಮಾಹಿತಿ ಹಂಚಿಕೊಳ್ಳಲು ನೆರವಾಗಲಿದೆ. ಸಂಕೀರ್ಣ ಸ್ವರೂಪದ, ತಕ್ಷಣಕ್ಕೆ ನಿಯಂತ್ರಣಕ್ಕೆ ಬಾರದ, ವೈದ್ಯಲೋಕಕ್ಕೆ ಸವಾಲೊಡ್ಡುವ ಕಾಯಿಲೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡು ತಕ್ಷಣ ಪರಿಹಾರ ಕಂಡುಕೊಳ್ಳಲೂ ‘ವೈಟ್‌ಕೋಟ್‌’ ವೈದ್ಯಲೋಕಕ್ಕೆ ನೆರವಾಗಲಿದೆ.

‘ಸದ್ಯಕ್ಕೆ ಈ ಆ್ಯಪ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ವೈದ್ಯರು ಹೆಸರು ನೋಂದಾಯಿಸಿದ್ದಾರೆ. 2016ರ ಜುಲೈ ತಿಂಗಳಿನಿಂದ  ಬಳಕೆಗೆ ಬಂದಿರುವ ಈ ಆ್ಯಪ್‌ ಈಗಾಗಲೇ 50ಕ್ಕೂ ಹೆಚ್ಚು ವೈದ್ಯಕೀಯ ಸಂಘ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಗಳ ಸದಸ್ಯರೆಲ್ಲ ಈ ವೇದಿಕೆಯ ವೇದಿಕೆಯ ವ್ಯಾಪ್ತಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ  5,000 ಮತ್ತು ರಾಜ್ಯದಲ್ಲಿ  15 ಸಾವಿರಕ್ಕೂ ಹೆಚ್ಚು ವೈದ್ಯರು ಇದರ ಭಾಗವಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘಟದ (ಐಎಂಎ) ಜತೆಗೂ ಸಹಯೋಗ ಹೊಂದಿದೆ.

‘ವೈದ್ಯರ ವೃತ್ತಿ ಪರಿಣತಿ ಹೆಚ್ಚಿಸುವುದೇ ಈ ಆ್ಯಪ್‌ನ ಮೂಲ ಉದ್ದೇಶವಾಗಿದೆ. ಸಮುದಾಯವನ್ನು ಇಡಿಯಾಗಿ ಬಾಧಿಸುವ ಕಾಯಿಲೆಗಳು ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಅದರ ನಿವಾರಣೆಗೆ ಪರಿಹಾರ ಕಂಡುಕೊಳ್ಳಲು, ವೈದ್ಯಲೋಕವು ಒಗ್ಗಟ್ಟಿನಿಂದ ನೆರವಿಗೆ ಧಾವಿಸಲು ಇದರಿಂದ ಸಾಧ್ಯವಾಗಲಿದೆ. ವೈದ್ಯರು ಸಂಘಟಿತ ನಿರ್ಧಾರ ಕೈಗೊಳ್ಳಲು ಇದು ನೆರವಾಗಲಿದೆ. ಮೊಬೈಲ್‌ ಆ್ಯಪ್‌ನಲ್ಲಿ ಇರುವ ಈ ಸೌಲಭ್ಯ ಅಂತರ್ಜಾಲ ತಾಣಕ್ಕೂ ಶೀಘ್ರದಲ್ಲಿಯೇ ವಿಸ್ತರಿಸಲಾಗುವುದು. ಸದ್ಯಕ್ಕೆ 1 ಲಕ್ಷ ವೈದ್ಯರು ಈ ವೇದಿಕೆಯ ಸದಸ್ಯತ್ವ ಪಡೆದಿದ್ದಾರೆ. 2ರಿಂದ 2.50 ಲಕ್ಷ ವೈದ್ಯರನ್ನು ಈ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ರೋಗಿಗಳು ಮತ್ತು ಕಾಯಿಲೆ ಬಗ್ಗೆ ಸಂಗ್ರಹಿಸುವ ಮಾಹಿತಿಯ ದುರ್ಬಳಕೆ ಆಗುವುದಿಲ್ಲ’ ಎಂದೂ ಅವರು ಭರವಸೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.