ADVERTISEMENT

ಶೇ 1.7ಕ್ಕೆ ತಗ್ಗಿದ ಚಾಲ್ತಿ ಖಾತೆ ಕೊರತೆ

1ನೇ ತ್ರೈಮಾಸಿಕ: ಚಿನ್ನ ಆಮದು ಇಳಿಕೆ ಪರಿಣಾಮ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ನವದೆಹಲಿ(ಪಿಟಿಐ): ದೇಶದ ಚಾಲ್ತಿ ಖಾತೆ ಕೊರತೆ (ಸಿಎಡಿ) ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ ಜೂನ್‌ ತ್ರೈಮಾಸಿಕದಲ್ಲಿ ಶೇ 1.7 ಮಟ್ಟಕ್ಕೆ ತಗ್ಗಿದ್ದು, ಆಶಾವಾದ ಹುಟ್ಟುಹಾಕಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಿಎಡಿ ಶೇ 4.8ರಷ್ಟಿತ್ತು.

2013–14ನೇ ಹಣಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿ 2180 ಕೋಟಿ ಡಾಲರ್‌ಗಳಷ್ಟಿದ್ದ (ಅಂದಿನ ಲೆಕ್ಕದಲ್ಲಿ ₨1.22 ಲಕ್ಷ ಕೋಟಿಯಷ್ಟಿದ್ದ) ಚಾಲ್ತಿ ಖಾತೆ ಕೊರತೆ, ಈ ಬಾರಿ 780 ಕೋಟಿ ಡಾಲರ್‌ಗಳಿಗೆ (ಈಗಿನ ಲೆಕ್ಕದಲ್ಲಿ ₨47190 ಕೋಟಿಗೆ) ಇಳಿಕೆಯಾಗಿದೆ. ವಿದೇಶಿ ಕರೆನ್ಸಿಗಳ ಒಳಹರಿವು ಮತ್ತು ಹೊರಹರಿವಿನ ಮೇರೆಗೆ ಸಿಎಡಿ ಲೆಕ್ಕ ಹಾಕಲಾಗುತ್ತದೆ.

ಮುಖ್ಯವಾಗಿ ಚಿನ್ನದ ಆಮದು ತೀವ್ರ ಸ್ವರೂಪದಲ್ಲಿ (ಶೇ 57.2ರಷ್ಟು) ಕಡಿಮೆ ಆಗಿರುವುದು 1ನೇ ತ್ರೈಮಾಸಿಕ ಅವಧಿ-­ಯಲ್ಲಿ ಆಮದು ರಫ್ತು ವಹಿವಾಟು ನಡುವಿನ ಅಂತರ ಗಣನೀಯವಾಗಿ ತಗ್ಗಲು ಕಾರಣವಾಗಿದೆ. ಇನ್ನೊಂದೆಡೆ ರಫ್ತು ಪ್ರಮಾಣದಲ್ಲೂ ಏರಿಕೆ ಕಂಡು­ಬಂದಿದೆ. ಈ ಅಂಶವೂ ಸಹ ದೇಶದ ಒಟ್ಟಾರೆ ಆಂತರಿಕ ಉತ್ಪಾದನೆಯ (ಜಿಡಿ ಪಿ) ಶೇ 1.7ರಷ್ಟು ಮಟ್ಟಕ್ಕೆ ಚಾಲ್ತಿ ಖಾತೆ ಕೊರತೆ ಪ್ರಮಾಣ ಇಳಿಮುಖವಾಗಲು ನೆರವಾಗಿದೆ.

2014ರ ಏಪ್ರಿಲ್‌ ಜೂನ್‌ ಅವಧಿಯಲ್ಲಿ ಆಮದು ವಹಿವಾಟು 11640 ಕೋಟಿ ಡಾಲರ್‌ಗಳಿಗೆ (₨7.04 ಲಕ್ಷ ಕೋಟಿಗೆ) ಇಳಿಕೆ­ಯಾಗಿದೆ. ಅಂದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6.5ಕ್ಕೆ ಮಾತ್ರವೇ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.