ADVERTISEMENT

ಷೇರು ಮಾರುಕಟ್ಟೆಯಲ್ಲಿ ₹ 18,000 ಕೋಟಿ ಹೂಡಿಕೆಗೆ ಇಪಿಎಫ್‌ಒ ಚಿಂತನೆ

ಏಜೆನ್ಸೀಸ್
Published 16 ಮೇ 2017, 6:59 IST
Last Updated 16 ಮೇ 2017, 6:59 IST
ಬಂಡಾರು ದತ್ತಾತ್ರೇಯ (ಸಾಂದರ್ಭಿಕ ಚಿತ್ರ)
ಬಂಡಾರು ದತ್ತಾತ್ರೇಯ (ಸಾಂದರ್ಭಿಕ ಚಿತ್ರ)   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ಮಾರುಕಟ್ಟೆಯಲ್ಲಿ ಕನಿಷ್ಠ ₹ 18,000 ಕೋಟಿ ಹೂಡಿಕೆ ಮಾಡಲು ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್‌ಒ) ಚಿಂತನೆ ನಡೆಸಿದೆ.

ಕಳೆದ ಒಂದೂವರೆ ವರ್ಷದಲ್ಲಿ ಮಾಡಲಾಗಿರುವ ಹೂಡಿಕೆಗೆ ಉತ್ತಮ ಸ್ಪಂದನೆ ದೊರೆತಿದೆ. ಹೀಗಾಗಿ ಹೆಚ್ಚಿನ ಹೂಡಿಕೆಗೆ ಆಸಕ್ತಿ ತೋರಲಾಗಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ ಎಂದು ‘ಲೈವ್ ಮಿಂಟ್‌’ ವೆಬ್‌ಸೈಟ್ ವರದಿ ಮಾಡಿದೆ.

ಕಾರ್ಮಿಕ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಪಿಎಫ್‌ಒ 2015ರ ಆಗಸ್ಟ್ ತಿಂಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆರಂಭಿಸಿತ್ತು. 2015–16ನೇ ಸಾಲಿನಲ್ಲಿ ವಾರ್ಷಿಕ ನಿಧಿಯ ಶೇಕಡ 5ರಷ್ಟು ಮತ್ತು 2016–17ನೇ ಸಾಲಿನಲ್ಲಿ ಶೇಕಡ 10ರಷ್ಟು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದೆ.

ADVERTISEMENT

‘ನಾವು ಹೂಡಿಕೆ ಹೆಚ್ಚಿಸಬೇಕಿದೆ. ಇಪಿಎಫ್‌ಒದ ಕೇಂದ್ರ ಮಂಡಳಿ (ಸಿಬಿಟಿ) ಸಭೆ ಮೇ 27ರಂದು ನಡೆಯಲಿದ್ದು, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ವಿಷಯಕ್ಕೆ ಸಂಬಂಧಸಿ ಒಮ್ಮತಕ್ಕೆ ಬರುವ ನಿರೀಕ್ಷೆ ಇದೆ’ ಎಂದು ದತ್ತಾತ್ರೇಯ ಹೇಳಿದ್ದಾರೆ. ಬಂಡಾರು ದತ್ತಾತ್ರೇಯ ಅವರು ಸಿಬಿಟಿಯ ಅಧ್ಯಕ್ಷರೂ ಆಗಿದ್ದಾರೆ.

ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಪ್ರಮಾಣವನ್ನು ಶೇಕಡ 15ಕ್ಕೆ ಹೆಚ್ಚಿಸುವ ಬಗ್ಗೆ ಏಪ್ರಿಲ್‌ನಲ್ಲಿ ನಡೆದ ಸಭೆಯಲ್ಲಿ ಸಿಬಿಟಿ ಒಮ್ಮತಕ್ಕೆ ಬಂದಿರಲಿಲ್ಲ. ಆ ಸಭೆಯಲ್ಲಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಚರ್ಚೆಯ ಪ್ರಮುಖ ವಿಷಯವಾಗಿರಲಿಲ್ಲ. ಆದರೆ, ಈ ಬಾರಿ ಅದೂ ಸಹ ಸಭೆಯ ಅಜೆಂಡಾವಾಗಿರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಿಸುವ ಬಗ್ಗೆ ಸರ್ಕಾರ ನೀಡಿರುವ ಸುಳಿವಿನಿಂದ ನಿಫ್ಟಿ ಮತ್ತು ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ವಹಿವಾಟಿನಲ್ಲಿ ಚೇತರಿಕೆ ಕಾಣಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.