ADVERTISEMENT

ಸಾಲ ವಸೂಲಿ ಕಾಯ್ದೆ: ಶೀಘ್ರ ಸುಗ್ರೀವಾಜ್ಞೆ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ನವದೆಹಲಿ : ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ಸಂಹಿತೆಯಲ್ಲಿ ಕೆಲ ತಿದ್ದುಪಡಿ ತರಲು ಶೀಘ್ರದಲ್ಲಿಯೇ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕಂಪನಿ ವ್ಯವಹಾರಗಳ ಸಚಿವ ಅರುಣ್‌ ಜೇಟ್ಲಿ ಅವರು ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕಾಲಮಿತಿಗೆ ಒಳಪಟ್ಟು ಬ್ಯಾಂಕ್‌ಗಳ ಸಾಲ ವಸೂಲಾತಿ ಪ್ರಕ್ರಿಯೆ ನಡೆಸಲು ಕಳೆದ ವರ್ಷದ ಡಿಸೆಂಬರ್‌ನಿಂದಲೇ ಈ ಸಂಹಿತೆ ಜಾರಿಗೆ ತರಲಾಗಿದೆ. ಕಂಪನಿ ವ್ಯವಹಾರ ಸಚಿವಾಲಯವು ಇದನ್ನು ಕಾರ್ಯಗತಗೊಳಿಸುತ್ತಿದೆ. ಈಗ ತರಲು ಹೊರಟಿರುವ ತಿದ್ದುಪಡಿಯ ವಿವರಗಳು ತಕ್ಷಣಕ್ಕೆ ತಿಳಿದು ಬಂದಿಲ್ಲ.

ಈ ಕಾಯ್ದೆಯ ವಿವಿಧ ವಿಷಯಗಳ ಬಗ್ಗೆ ಉದ್ಯಮ ವಲಯದಲ್ಲಿ ಕೇಳಿ ಬರುತ್ತಿರುವ ಕಳವಳದ ಕಾರಣಕ್ಕೆ ತಿದ್ದುಪಡಿ ತರಲಾಗುತ್ತಿದೆ. ಕೆಲ ಉದ್ದಿಮೆಗಳ ಪ್ರವರ್ತಕರು ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಉದ್ದಿಮೆ ಮೇಲೆ ಮತ್ತೆ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

ADVERTISEMENT

ಸಮಿತಿ ರಚನೆ: ಕಾಯ್ದೆ ಜಾರಿಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಲಹೆ ನೀಡಲು ಸರ್ಕಾರ ಈಗಾಗಲೇ 14 ಸದಸ್ಯರ ಸಮಿತಿ ರಚಿಸಿದೆ. ಕಂಪನಿ ವ್ಯವಹಾರ ಕಾರ್ಯದರ್ಶಿ ಐ. ಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿನ ಈ ಸಾಲ ವಸೂಲಾತಿ ಕಾಯ್ದೆ ಸಮಿತಿಯು ದಿವಾಳಿ ಸಂಹಿತೆ ಜಾರಿ ಕುರಿತು  ಮಾಹಿತಿ ಕಲೆ ಹಾಕುತ್ತಿದೆ.

ಸಾಲ ವಸೂಲಿಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಈಗಾಗಲೇ 300 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ನ್ಯಾಯಮಂಡಳಿ ಸಮ್ಮತಿ ನೀಡಿದ ನಂತರವೇ ಸಾಲ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.