ADVERTISEMENT

ಸೂಚ್ಯಂಕ, ನಿಫ್ಟಿ ಹೊಸ ದಾಖಲೆ

ಕೋಟಕ್‌ ಮಹೀಂದ್ರಾ–ಐಎನ್‌ಜಿ ವೈಶ್ಯ ವಿಲೀನ ಪ್ರಭಾವ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಮುಂಬೈ(ಪಿಟಿಐ): ದೇಶದ ಷೇರುಪೇಟೆ­ಗಳಲ್ಲಿ ಶುಕ್ರವಾರ ಮತ್ತೊಮ್ಮೆ ಹೊಸ ದಾಖಲೆ ಸೃಷ್ಟಿಯಾಯಿತು. ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ (ಬಿಎಸ್‌ಇ) ಸಂವೇದಿ ಸೂಚ್ಯಂಕ 267 ಮತ್ತು ರಾಷ್ಟ್ರೀಯ ವಿನಿಮಯ ಕೇಂದ್ರದ ಸೂಚ್ಯಂಕ (ಎನ್‌ಎಸ್‌ಇ)  ‘ನಿಫ್ಟಿ’ 75 ಅಂಶಗಳಷ್ಟು ಏರಿಕೆ ಕಂಡು ದಾಖಲೆಯ ಗರಿಷ್ಠ ಮಟ್ಟ ತಲುಪಿದವು.

ಖಾಸಗಿ ಕ್ಷೇತ್ರದ ಕೋಟಕ್‌ ಮಹೀಂದ್ರಾ ಬ್ಯಾಂಕ್‌,  ಐಎನ್‌ಜಿ ವೈಶ್ಯ ಬ್ಯಾಂಕನ್ನು ಗುರುವಾರ ₨15 ಸಾವಿರ ಕೋಟಿಗೆ ಖರೀದಿ­ಸಿದ ಸುದ್ದಿ ಹೋರಬೀಳುತ್ತಿದ್ದಂತೆಯೇ  ಷೇರುಪೇಟೆ ವಹಿವಾಟಿನಲ್ಲಿ ಉತ್ಸಾಹ ಗರಿಗೆದರಿತು. ಇದು ಸೂಚ್ಯಂಕಗಳನ್ನು ಮತ್ತೊಮ್ಮೆ ಹೊಸ ಎತ್ತರಕ್ಕೆ ಕೊಂಡೊಯ್ದಿತು.

ಅಮೆರಿಕದ ಷೇರುಪೇಟೆಗಳು ಗುರುವಾರ ದಾಖಲೆ ಪ್ರಮಾಣದಲ್ಲಿ ವಹಿವಾಟು ನಡೆಸಿದ್ದು ಸಹ ವಿವಿಧ ದೇಶಗಳ ಮಾರುಕಟ್ಟೆ ಮೇಲೆ  ಸಕಾರಾತ್ಮಕ ಪರಿಣಾಮ ಬೀರಿತು.ಜತೆಗೆ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಆರ್ಥಿಕ ಸುಧಾರಣೆಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯೂ ಕೂಡಾ ಹೂಡಿಕೆದಾರರ ಭಾವನೆಗಳ ಮೇಲೆ ಪ್ರಭಾವಿಸಿದವು. ಮೂಲಸೌಕರ್ಯಗಳ ಅಭಿವೃದ್ಧಿಗೆ  ಸಂಸತ್ತು ಎಷ್ಟು ಶೀಘ್ರವಾಗಿ   ಅನುಮೋದನೆ ನೀಡುತ್ತದೆಯೋ ಅಷ್ಟೇ ಶೀಘ್ರವಾಗಿ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದ್ದು, ಮಾರುಕಟ್ಟೆ ವಹಿವಾಟೂ ಪ್ರಗತಿ ಕಾಣಲಿದೆ ಎಂದು ದಳ್ಳಾಳಿಗಳು ಹೇಳಿದ್ದಾರೆ.

ಡಾಲರ್‌ ಎದಿರು ರೂಪಾಯಿ ಮೌಲ್ಯ ಗುರುವಾರ 9 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿತ ಕಂಡಿದ್ದೂ ಕೂಡಾ ವಹಿವಾಟಿನ ಮೇಲೆ ಪ್ರಭಾವ ಬೀರಿದೆ.ಬ್ಯಾಂಕಿಂಗ್‌ ವಲಯಗಳು, ಪ್ರಧಾನ ಸರಕುಗಳು, ಗ್ರಾಹಕ ಬಳಕೆ ವಸ್ತುಗಳು, ತೈಲ ಮತ್ತು ಅನಿಲ, ಎಫ್‌ಎಂಸಿಜಿ, ಆಟೊ, ರಿಯಾಲಿಟಿ ಮತ್ತು ಇಂಧನ ವಲಯದ ಷೇರುಗಳು ಬಿಎಸ್‌ಇ ಸೂಚ್ಯಂಕವನ್ನು 28,334.63 ಕ್ಕೇರುವಂತೆ ಮಾಡಿದವು. ಈ ಹಿಂದೆ ನ. 17ರಂದು ಬಿಎಸ್‌ಇ ಸೂಚ್ಯಂಕ 28,177.88 ಅಂಶಗಳಲ್ಲಿ ದಾಖಲೆ ವಹಿವಾಟು ನಡೆಸಿತ್ತು.

ಮಧ್ಯಾಂತರ ವಹಿವಾಟಿನಲ್ಲಿ ಸಾರ್ವಕಾಲೀನ ದಾಖಲೆ ಮಟ್ಟವಾದ 28,360.66 ಅಂಶಗಳಷ್ಟು ಏರಿಕೆ ಕಂಡಿತ್ತು. ನ. 19ರಂದು 28,294 ಅಂಶಗಳಿಗೆ ಏರಿಕೆ ಕಂಡಿದ್ದೇ ಈ ಹಿಂದಿನ ಸಾರ್ವಕಾಲೀನ ದಾಖಲೆ ಮಟ್ಟ­ವಾಗಿತ್ತು.ಆರ್‌ಐಎಲ್‌, ಹಿಂಡಾಲ್ಕೊ, ಸಿಪ್ಲಾ, ಬಿಎಚ್‌ಇಎಲ್‌, ಹಿರೊ ಮೊಟೊ­ಕಾರ್ಪ್‌, ಐಟಿಸಿ ಮತ್ತು ಎಲ್‌ಅಂಡ್‌ಟಿ ಸೂಚ್ಯಂಕ ಏರಿಕೆಗೆ ಉತ್ತಮ ಬೆಂಬಲ ನೀಡಿದವು.
ನಿಫ್ಟಿ ಹೊಸ ದಾಖಲೆ

ರಾಷ್ಟ್ರೀಯ ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) 50 ಷೇರುಗಳು 75.45 ಅಂಶಗಳಷ್ಟು ಏರಿಕೆ ಕಂಡುಕೊಂಡು, 8,477.35 ಅಂಶಗಳ ಹೊಸ ಮಟ್ಟ ತಲುಪಿತು. ಈ ಹಿಂದೆ ನ. 17ರಂದು 8,430.75 ಅಂಶಗಳಲ್ಲಿ ಗರಿಷ್ಠ ಮಟ್ಟದ ವಹಿವಾಟು ನಡೆಸಿತ್ತು.
ಕೋಟಕ್‌ ಮಹೀಂದ್ರಾ ಬ್ಯಾಂಕಿನ ಷೇರುಗಳೂ ಶೇ 3.68ರಷ್ಟು ಏರಿಕೆ ಕಂಡರೆ, ಐಎನ್‌ಜಿ ವೈಶ್ಯ ಬ್ಯಾಂಕ್‌ ಷೇರುಗಳು ಶೇ 2ರಷ್ಟು ಮೌಲ್ಯ ಹೆಚ್ಚಿಸಿಕೊಂಡವು.

ವಿದೇಶಿ ಹೂಡಿಕೆದಾರರು ಗುರುವಾರ  ₨477 ಕೋಟಿ­ಮೌಲ್ಯದ ಷೇರುಗಳನ್ನು ಮಾರಿಟ ಮಾಡಿದ್ದಾರೆ ಎಂದು ಷೇರುಪೇಟೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.