ADVERTISEMENT

ಸೋಲಾರ್‌, ಪವನ ಶಕ್ತಿ ಹೈಬ್ರಿಡ್‌ ಪಾರ್ಕ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಪಾವಗಡ ತಾಲ್ಲೂಕು ತಿರುಮಣಿ ಬಳಿಯ ಸೋಲಾರ್ ಪಾರ್ಕ್‌ನಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಯೋಜನೆಯ ನೀಲ ನಕ್ಷೆ ವೀಕ್ಷಿಸಿದರು. ಶಾಸಕ ಕೆ.ಎಂ.ತಿಮ್ಮರಾಯಪ್ಪ, ಸಂಸದ ಬಿ.ಎನ್.ಚಂದ್ರಪ್ಪ, ಮುಖಂಡ ವೆಂಕಟರವಣಪ್ಪ ಇದ್ದರು
ಪಾವಗಡ ತಾಲ್ಲೂಕು ತಿರುಮಣಿ ಬಳಿಯ ಸೋಲಾರ್ ಪಾರ್ಕ್‌ನಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಯೋಜನೆಯ ನೀಲ ನಕ್ಷೆ ವೀಕ್ಷಿಸಿದರು. ಶಾಸಕ ಕೆ.ಎಂ.ತಿಮ್ಮರಾಯಪ್ಪ, ಸಂಸದ ಬಿ.ಎನ್.ಚಂದ್ರಪ್ಪ, ಮುಖಂಡ ವೆಂಕಟರವಣಪ್ಪ ಇದ್ದರು   

ಪಾವಗಡ: ‘ಸೋಲಾರ್ ಹಾಗೂ ಪವನ ಶಕ್ತಿ ಮೂಲದಿಂದ ವಿದ್ಯುತ್ ಉತ್ಪಾದಿಸುವ ಹೈಬ್ರಿಡ್ ಪಾರ್ಕ್ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ತಾಲ್ಲೂಕಿನ ತಿರುಮಣಿ ಸೋಲಾರ್ ಪಾರ್ಕ್‌ಗೆ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿ ಮಾತನಾಡಿದರು.

‘ವೆಂಕಟಮ್ಮನಹಳ್ಳಿ ಗ್ರಾಮದ ರೈತರು 600 ಎಕರೆ ಜಮೀನು ನೀಡಲು ಮುಂದೆ ಬಂದಿದ್ದು, ಈ ಭೂಮಿಯಲ್ಲಿ ‘ಹೈ ಬ್ರಿಡ್ ಪಾರ್ಕ್’ ನಿರ್ಮಿಸುವ ಚಿಂತನೆ ಇದೆ’ ಎಂದರು.

ADVERTISEMENT

‘ನವೆಂಬರ್ ತಿಂಗಳ ವೇಳೆಗೆ 600 ಮೆಗಾ ವಾಟ್‌ ವಿದ್ಯುತ್ ಉತ್ಪಾದಿಸುವ ಗುರಿ ಇದೆ. ಕಾಮಗಾರಿ ಪ್ರಗತಿಯಲ್ಲಿದೆ. 1 ಮೆಗಾ ವಾಟ್‌ ಗೆ ₹ 6 ಕೋಟಿ ಬಂಡವಾಳ ಹೂಡಬೇಕಾಗಿದೆ. 2000 ಮೆಗಾ ವಾಟ್‌ಗೆ  ಕನಿಷ್ಠ ₹ 12 ಸಾವಿರ ಕೋಟಿ ಹೂಡಿಕೆ ಅಗತ್ಯವಿದೆ. ಅಂತರ ರಾಜ್ಯ, ವಿದೇಶಿ ಕಂಪೆನಿಗಳು ಸಹ ಹೂಡಿಕೆಗೆ ಆಸಕ್ತಿ ತೋರಿವೆ’ ಎಂದು ಮಾಹಿತಿ ನೀಡಿದರು.

‘ಸೋಲಾರ್ ಪಾರ್ಕ್‌ನಿಂದ ಇತರೆಡೆಗೆ ವಿದ್ಯುತ್ ಪೂರೈಸಲು ಹಿರಿಯೂರು, ಮಧುಗಿರಿ, ಬೆಂಗಳೂರಿಗೆ ವಿದ್ಯುತ್ ಲೈನ್ ಎಳೆಯುವ ಕಾಮಗಾರಿಯನ್ನು ಪಿಡಿಸಿಎಲ್ ಕಂಪೆನಿಗೆ ಕೊಡಲಾಗಿದೆ. ವಿದ್ಯುತ್ ಲೈನ್ ಎಳೆಯುವ ಕಾಮಗಾರಿಗೆ ₹ 1600 ಕೋಟಿ ಖರ್ಚಾಗಲಿದೆ’ ಎಂದರು.

‘ಸೋಲಾರ್‌ ಪಾರ್ಕ್‌ ಬಗ್ಗೆ ಪ್ರಪಂಚದಾದ್ಯಂತ  ಕುತೂಹಲ ವ್ಯಕ್ತವಾಗುತ್ತಿದೆ. ಪಾರ್ಕ್ ಕಾಮಗಾರಿ ವೀಕ್ಷಿಸಲು ಸೆಪ್ಟಂಬರ್ 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಲಿದ್ದಾರೆ’ಎಂದರು.

ರಾಯಚೆರ್ಲು, ತಿರುಮಣಿ, ವೆಂಕಟಮ್ಮನಹಳ್ಳಿ ಮಾರ್ಗದ ಸೋಲಾರ್ ಉತ್ಪಾದನಾ ಕೇಂದ್ರಗಳಿಗೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿದರು.

ಶಾಸಕ ಕೆ.ಎಂ.ತಿಮ್ಮರಾಯಪ್ಪ, ಕ್ರೆಡಲ್ ಅಧ್ಯಕ್ಷ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಬಲರಾಂ, ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್, ಉಪವಿಭಾಗಾಧಿಕಾರಿ ವೆಂಕಟೇಶಯ್ಯ ಇದ್ದರು.

*
ಕೇಂದ್ರ ಸರ್ಕಾರದ ಅನುಮೋದನೆ ದೊರೆತ ಕೂಡಲೇ ತಾಲ್ಲೂಕಿನಲ್ಲಿ ಹೈಬ್ರಿಡ್ ಪಾರ್ಕ್ ಕಾಮಗಾರಿ ಆರಂಭಿಸಲಾಗುವುದು.
–ಡಿ.ಕೆ.ಶಿವಕುಮಾರ್,
ಇಂಧನ ಸಚಿವ

*


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.