ADVERTISEMENT

ಸ್ಟಾರ್ಟ್‌ಅಪ್‌ಗಳ ಭವಿಷ್ಯ ಆಶಾದಾಯಕ: ನಿಲೇಕಣಿ

ಪಿಟಿಐ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST

ಹೈದರಾಬಾದ್‌ : ‘ದೇಶದ ನವೋದ್ಯಮಗಳ (ಸ್ಟಾರ್ಟ್‌ಅಪ್‌) ಭವಿಷ್ಯ ಆಶಾದಾಯಕವಾಗಿದೆ’ ಎಂದು ಇನ್ಫೊಸಿಸ್‌ ಸಹ ಸ್ಥಾಪಕ ನಂದನ್‌ ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ. ಸದ್ಯದ ಸ್ಥಿತಿಯಲ್ಲಿ ನವೋದ್ಯಮಗಳಿಗೆ ಸ್ವಲ್ಪ ಹಿನ್ನಡೆಯಾದಂತೆ ಕಂಡುಬಂದರೂ  ಅವುಗಳ ಭವಿಷ್ಯ ಆಶಾದಾಯಾಕ ವಾಗಿದೆ’ ಎಂದು ಅವರು ಹೇಳಿದ್ದಾರೆ.

ಎಲ್ಲ ಸವಾಲುಗಳನ್ನು ಎದುರಿಸಿ  ನವೋದ್ಯಮ ಹೊಸ ಆಯಾಮ ಪಡೆದುಕೊಳ್ಳುತ್ತಿವೆ. ಕೆಲವು  ವಹಿವಾಟು ಸ್ಥಗಿತಗೊಳಿಸಿವೆ ಎಂದ ಮಾತ್ರಕ್ಕೆ ಇಡೀ ನವೋದ್ಯಮಕ್ಕೆ ಭವಿಷ್ಯವೇ ಇಲ್ಲ ಎಂದು ಭಾವಿಸಬಾರದು’ ಎಂದರು. ‘ಕೆಲವು ನವೋದ್ಯಮ ಮುಚ್ಚಿರುವುದು ನಿಜ.   ವ್ಯಾಪಾರದಲ್ಲಿ ಅದೆಲ್ಲ ಸಾಮಾನ್ಯ ಎಂದು  ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅನೇಕ ನವೋದ್ಯಮಗಳು ಯಶಸ್ಸು ಕಾಣದೆ  ಮುಚ್ಚಿರಬಹುದು. ಆದರೆ,  ಉದ್ಯಮಿಗಳು ಈ ವೈಫಲ್ಯದಿಂದ ಒಳ್ಳೆಯ ಅನುಭವ  ಪಡೆದಿರುತ್ತಾರೆ. ಸೋಲು ಕಲಿಸಿದ ಅನುಭವ ಮತ್ತು ಪಾಠದಿಂದ ಹೊಸದಾಗಿ ಯಶಸ್ವಿ ಉದ್ಯಮಗಳು ಜನ್ಮಪಡೆಯುತ್ತವೆ. ಹೊಸ, ಹೊಸ ಆಲೋಚನೆಗಳು ಗರಿಗೆದರುತ್ತಿರುವ ಕಾರಣ ನವೋದ್ಯಮಗಳು ನನಗೆ ಅತ್ಯಂತ ಆಕರ್ಷಕವಾಗಿ ಕಾಣುತ್ತಿವೆ’ ಎಂದು  ಹೇಳಿದ್ದಾರೆ.

‘ಭಾರತದಲ್ಲಿ ನವೋದ್ಯಮಗಳಲ್ಲಿ ಸಾಕಷ್ಟು  ಜನರು ಹಣ ತೊಡಗಿಸುತ್ತಿದ್ದಾರೆ. ಬಂಡವಾಳ ಹೂಡಿಕೆಗೆ ಯಾವುದೇ ಕೊರತೆ ಎದುರಾಗಿಲ್ಲ. ದೀರ್ಘಕಾಲೀನ  ಅಪಾಯಗಳನ್ನು ಎದುರಿಸಲು ಸಜ್ಜಾಗಿ ನವೋದ್ಯಮಗಳಲ್ಲಿ ಹಣ ತೊಡಗಿಸಲು ಮುಂದಾಗುವುದು  ನಿಜಕ್ಕೂ ಶ್ಲಾಘನೀಯ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.