ADVERTISEMENT

ಹೂಡಿಕೆದಾರ ಸ್ನೇಹಿ ತೆರಿಗೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ನವದೆಹಲಿ(ಪಿಟಿಐ): ದೇಶದ ತೆರಿಗೆ ಪದ್ಧತಿ ಹೂಡಿಕೆದಾರ ಸ್ನೇಹಿಯಾಗಿರಬೇಕು. ಎಲ್ಲ ಕಾಲಕ್ಕೂ ಊರ್ಜಿತವಾಗದಂತಹ ತೆರಿಗೆ ಪದ್ಧತಿಯಿಂದ ದೇಶ ವಿದೇಶದ ಹೂಡಿಕೆದಾರರು ದೇಶದಿಂದಲೇ ವಿಮುಖರಾಗುತ್ತಾರೆ. ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ ಅಷ್ಟೆ ಎಂದು   ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಹೇಳಿದರು.

ಇಲ್ಲಿ ಶುಕ್ರವಾರ ಎಚ್‌.ಟಿ ಲೀಡರ್‌ಷಿಪ್‌ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಹೂಡಿಕೆದಾರ ಸ್ನೇಹಿ ತೆರಿಗೆ ಪದ್ಧತಿ ಮತ್ತು ಭೂ ಸ್ವಾಧೀನ ಕಾರ್ಯವಿಧಾನಗಳನ್ನು ಮುಖ್ಯವಾಹಿ­ನಿಗೆ ತರುವುದು ಸದ್ಯ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು ಎಂದರು.
ಸರಕು ವರ್ಗಾವಣೆ ಶುಲ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ತೈಲ ಕಂಪೆನಿ ಶೆಲ್‌ ಇಂಡಿಯಾದಿಂದ ಆದಾಯ ತೆರಿಗೆ ಇಲಾಖೆಗೆ ₨18 ಸಾವಿರ ಕೋಟಿ ನಷ್ಟವಾಗಿದೆ ಎಂಬ ಪ್ರಕರಣ ಮುಂಬೈ ಹೈಕೋರ್ಟಿ­­ನಲ್ಲಿರುವ ಕುರಿತು ಪ್ರತಿಕ್ರಿಯಿ­ಸುವಾಗ ಜೇಟ್ಲಿ ಈ ರೀತಿ ಅಭಿಪ್ರಾಯಪಟ್ಟರು.

ಈಗಾಗಲೇ ₨20 ಸಾವಿರ ಕೋಟಿ ತೆರಿಗೆಗೆ ಸಂಬಂಧಿ­ಸಿದಂತೆ ವೊಡಾಫೋನ್‌ ಮತ್ತು ತೆರಿಗೆ ಇಲಾಖೆ ಮಧ್ಯೆ ವ್ಯಾಜ್ಯವಿದೆ. ಹೀಗಾಗಿ ಹೂಡಿಕೆ­ದಾರ ಸ್ನೇಹಿ ತೆರಿಗೆ ಪದ್ಧತಿ ಇಲ್ಲದಿದ್ದರೆ ಅವರು ಬೇರೆ ದೇಶಗಳತ್ತ ಗಮನ ಹರಿಸುತ್ತಾರೆ ಎಂದ ಸಚಿವರು, ದೇಶದಲ್ಲಿನ ತೆರಿಗೆ ಪದ್ಧತಿಯಲ್ಲಿ ಬಹಳಷ್ಟು ಬದಲಾ­ವಣೆ ತರಬೇಕಿರುವ ಕುರಿತು ಒತ್ತು ನೀಡಿ ಶೃಂಗ­ಸಭೆಯಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.