ADVERTISEMENT

₹1.50 ಲಕ್ಷ ಕೋಟಿ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: 2016ರ ಜನವರಿಯಿಂದ ನವೆಂಬರ್‌ ತನಕ ರಾಜ್ಯಕ್ಕೆ ₹ 1.50 ಲಕ್ಷ ಕೋಟಿ ಬಂಡವಾಳ ಆಕರ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿರುವ ಮೂರು ದಿನಗಳ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಕುರಿತ ವಸ್ತುಪ್ರದರ್ಶನ ಮತ್ತು ಸಮಾವೇಶ ‘ಇಂಡಿಯಾ ಫಾರ್ಮಾ–2017’ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕೆ ಮತ್ತು ಆರ್ಥಿಕ ಪ್ರಗತಿಯಲ್ಲಿ ದೇಶದಲ್ಲೆ ಕರ್ನಾಟಕ ಮುಂಚೂಣಿಯಲ್ಲಿದೆ. ಕೈಗಾರಿಕಾ ಸ್ನೇಹಿ ವಾತಾವರಣ ಇರುವ ಕಾರಣ ಬಂಡವಾಳ ಹರಿದು ಬರುತ್ತಿದೆ ಎಂದರು.

ಔಷಧ ಮತ್ತು ವೈದ್ಯಕೀಯ ಉಪಕರಣಗಳ ಪ್ರಾಮುಖ್ಯತೆ ಮನಗಂಡಿರುವ ರಾಜ್ಯ ಸರ್ಕಾರ ಹೆಚ್ಚಿನ ಗಮನಹರಿಸಿದೆ. ಕ್ಷೇತ್ರದ ಬೆಳವಣಿಗೆಗೆ  ಹೊಸ ನೀತಿ ಜಾರಿಗೆ ತರಲಾಗಿದೆ ಎಂದರು. ರಾಜ್ಯದಲ್ಲಿ 230 ಔಷಧ ಮತ್ತು ಜೈವಿಕ ತಂತ್ರಜ್ಞಾನ ಕಂಪೆನಿಗಳಿವೆ. ದೇಶದಲ್ಲಿರುವ 340 ಜೈವಿಕ ತಂತ್ರಜ್ಞಾನ ಕಂಪೆನಿಗಳ ಪೈಕಿ 194 ಕಂಪೆನಿಗಳು ರಾಜ್ಯದಲ್ಲಿವೆ ಎಂದು ಹೇಳಿದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಮಾತನಾಡಿ,  ಭಾರತದ ವೈದ್ಯಕೀಯ ಕ್ಷೇತ್ರ ಬದಲಾವಣೆಗೆ ತೆರೆದುಕೊಂಡಿದೆ. ಮುಂದಿನ ದಿನಗಳಲ್ಲಿ ಭಾರತ ವಿಶ್ವದ ಔಷಧ ಕೇಂದ್ರವಾಗಲಿದೆ. ಬೆಂಗಳೂರಿನಲ್ಲಿ  ಮೆಡ್‌ಪಾರ್ಕ್ ಮತ್ತು ಫಾರ್ಮಾಪಾರ್ಕ್‌ ಸ್ಥಾಪಿಸಲು ರಾಜ್ಯ ಸರ್ಕಾರ ಸ್ಥಳ ನೀಡಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.