ADVERTISEMENT

21ರಂದು ಮೊಬೈಲ್‌ ಸಂಸ್ಥೆಗಳ ಸಭೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST

ನವದೆಹಲಿ: ಕರೆ ಮತ್ತು ಇಂಟರ್‌ನೆಟ್‌ ಸೇವೆಗಳಿಗೆ ಕನಿಷ್ಠ ದರ ನಿಗದಿ ಪಡಿಸುವುದನ್ನು ಚರ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ  (ಟ್ರಾಯ್‌), ಇದೇ 21ರಂದು ದೂರಸಂಪರ್ಕ ಸೇವಾ ಕಂಪೆನಿಗಳ ಪ್ರತಿನಿಧಿಗಳ ಸಭೆ ಕರೆದಿದೆ.

ಕನಿಷ್ಠ ದರ ನಿಗದಿ ಪಡಿಸುವ ಬಗ್ಗೆ ಲಿಖಿತ ಅಭಿಪ್ರಾಯ ನೀಡುವಂತೆ ದೂರ ಸಂಪರ್ಕ ಕಂಪೆನಿಗಳಿಗೆ ‘ಟ್ರಾಯ್‌’ ಸೂಚಿಸಿದೆ.  ಅಗತ್ಯ ಬಿದ್ದರೆ, ಗರಿಷ್ಠ ದರ ನಿಗದಿಪಡಿಸುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು  ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸದ್ಯಕ್ಕೆ, ಕರೆ ಅಥವಾ ಇಂಟರ್‌ನೆಟ್‌ ದರ ನಿಗದಿಗೆ  ನಿರ್ದಿಷ್ಟವಾದ ಕಾರ್ಯವಿಧಾನ ಅನುಸರಿಸಲಾಗುತ್ತಿಲ್ಲ.  ಕಂಪೆನಿಗಳು ಕರೆ ದರಗಳ ಹೊಸ ಯೋಜನೆಯನ್ನು ಘೋಷಿಸಿದ ನಂತರ ಏಳು ದಿನಗಳ ಒಳಗಾಗಿ ಅವುಗಳ ಬಗ್ಗೆ ‘ಟ್ರಾಯ್‌’ಗೆ ಮಾಹಿತಿ ನೀಡಿದರೆ ಸಾಕು. ಅಲ್ಲದೇ, ಈಗ ಗರಿಷ್ಠ ಅಥವಾ ಕನಿಷ್ಠ ದರ ಎಂಬುದಿಲ್ಲ. ರೋಮಿಂಗ್‌ ಸೌಲಭ್ಯಕ್ಕೆ ಮಾತ್ರ ‘ಟ್ರಾಯ್‌’, ಗರಿಷ್ಠ ದರ ನಿಗದಿಪಡಿಸಿದೆ.

ADVERTISEMENT

ಹೊಸದಾಗಿ ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟ ರಿಲಯನ್ಸ್‌ ಜಿಯೊ, ಉಚಿತವಾಗಿ ಸೇವೆಗಳನ್ನು ಕೊಡಲು ಆರಂಭಿಸಿದ ಬಳಿಕ ‘ಟ್ರಾಯ್‌’ಗೆ ಸಲಹೆ ನೀಡಿದ್ದ ಕೆಲವು ಕಂಪೆನಿಗಳು, ಕರೆ, ಇಂಟರ್‌ನೆಟ್‌ ಸೇವೆಗಳಿಗೆ ಕನಿಷ್ಠ ದರ ನಿಗದಿಪಡಿಸಬೇಕು. ಆ ಮೂಲಕ ಈ ಕ್ಷೇತ್ರವು ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದವು.

ಹೆಚ್ಚುತ್ತಿರುವ ಸಾಲ: ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಸೇರಿದಂತೆ ನಾಲ್ಕು ಬ್ಯಾಂಕುಗಳು ದೂರಸಂಪರ್ಕ ಸಚಿವಾಲಯದ ಅಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆಸಿದ್ದ  ಸಭೆಯಲ್ಲಿ, ದೂರಸಂಪರ್ಕ ಕ್ಷೇತ್ರದಲ್ಲಿ ಹೆಚ್ಚಾಗುತ್ತಿರುವ ಸಾಲದ ಪ್ರಮಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.