ADVERTISEMENT

4ನೇ ವಾರವೂ ಸೂಚ್ಯಂಕ ಏರಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
4ನೇ ವಾರವೂ ಸೂಚ್ಯಂಕ ಏರಿಕೆ
4ನೇ ವಾರವೂ ಸೂಚ್ಯಂಕ ಏರಿಕೆ   

ನವದೆಹಲಿ : ಉತ್ತಮ ಖರೀದಿ ಚಟುವಟಿಕೆಯಿಂದ ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ವಾರವೂ ಏರುಮುಖವಾಗಿ ವಹಿವಾಟು ಅಂತ್ಯಕಂಡಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 134 ಅಂಶ ಏರಿಕೆ ಕಂಡು, 28,468 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ ವಾರದ ವಹಿವಾಟಿನಲ್ಲಿ 28 ಅಂಶ ಏರಿಕೆಯಾಗಿ, 8,822 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ವಾಹನ ಮತ್ತು ಔಷಧ ವಲಯದ ಕಂಪೆನಿಗಳ ಮೂರನೇ ತ್ರೈಮಾಸಿಕ ಸಾಧನೆ ಉತ್ತಮವಾಗಿದೆ. ಇದರ ಜತೆಗೆ ಚಿಲ್ಲರೆ ಹಣದುಬ್ಬರ ಜನವರಿಯಲ್ಲಿ
ಶೇ 3.17ಕ್ಕೆ ಕುಸಿತ ಕಂಡಿರುವುದು ಷೇರುಪೇಟೆಯಲ್ಲಿ ಸೂಚ್ಯಂಕದ ಏರಿಕೆಗೆ   ಕಾರಣವಾದವು.

ಮಾರಾಟದ ಒತ್ತಡ: ವಾರದ ವಹಿವಾಟಿನ ಮಧ್ಯಂತರದಲ್ಲಿ ಷೇರುಪೇಟೆ ಮಾರಾಟದ ಒತ್ತಡಕ್ಕೆ ಒಳಗಾಯಿತು. ಅಮೆರಿಕದ ಫೆಡರಲ್‌ ರಿಸರ್ವ್ ಮುಖ್ಯಸ್ಥೆ ಜಾನೆಟ್‌ ಯೆಲೆನ್‌ ಅವರು ಮಾರ್ಚ್‌ ತಿಂಗಳಿನಲ್ಲಿ ಬಡ್ಡಿದರ ಏರಿಕೆ ಮಾಡುವ ಸುಳಿವು ನೀಡಿದ್ದಾರೆ. ಇದು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಂದ ಬಂಡವಾಳ ಹೊರಹರಿವು ಹೆಚ್ಚಾಗುವ ಆತಂಕ ಸೃಷ್ಟಿಸಿ, ಷೇರುಪೇಟೆಯಲ್ಲಿ ಕೆಲಕಾಲ ಮಾರಾಟದ ಒತ್ತಡವನ್ನು ಹೆಚ್ಚಿಸಿತ್ತು.

ADVERTISEMENT

ವಹಿವಾಟು ಚೇತರಿಕೆ: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್‌) ಕಂಪೆನಿಯು ಷೇರು ಮರು ಖರೀದಿ ಬಗ್ಗೆ ಸೋಮವಾರ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ. ದೇಶಿ ಕಂಪೆನಿಗಳಲ್ಲಿ ವಿದೇಶಿ ಹೂಡಿಕೆದಾರರು ಷೇರು ಹೊಂದಲು ವಿಧಿಸಿದ್ದ ನಿರ್ಬಂಧವನ್ನು ಆರ್‌ಬಿಐ ತೆಗೆದುಹಾಕಿದೆ. ಇದರಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು 52 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಈ ಸುದ್ದಿಗಳಿಂದ ಸೂಚ್ಯಂಕ ಏರಿಕೆ ಕಂಡಿತು.

ಲಾಭ ಗಳಿಕೆ ಉದ್ದೇಶದ ವಹಿವಾಟು: ರಿಯಲ್‌ ಎಸ್ಟೇಟ್‌, ವಾಹನ, ಸರ್ಕಾರಿ ಸ್ವಾಮ್ಯದ ಕಂಪೆನಿಗಳು (ಪಿಎಸ್‌ಯು) ಬಂಡವಾಳ ಸರಕುಗಳು, ಗ್ರಾಹಕ ಬಳಕೆ ವಸ್ತುಗಳು, ಲೋಹ ವಲಯಗಳಲ್ಲಿ ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆಯಿತು.

ಗರಿಷ್ಠ ನಷ್ಟ
ಮೂರನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಕಂಪೆನಿ ನಿವ್ವಳ ಲಾಭ ₹112 ಕೋಟಿಗಳಿಗೆ ಅಂದರೆ ಶೇ 96 ರಷ್ಟು ಕುಸಿತ ಕಂಡಿದೆ. ಇದರಿಂದ ಒಟ್ಟು ವರಮಾನ ₹68,708 ಕೋಟಿಗಳಿಗೆ ಇಳಿಕೆಯಾಗಿದೆ. ಇದರಿಂದ ಕಂಪೆನಿ ಷೇರುಗಳು ವಾರದ ವಹಿವಾಟಿನಲ್ಲಿ
ಶೇ 12.47ರಷ್ಟು ಕುಸಿತ ಕಾಣುವಂತಾಯಿತು.

ಅದಾನಿ ಪೋರ್ಟ್ಸ್‌
ಶೇ 4.18, ಹೀರೊ ಮೋಟೊ ಕಾರ್ಪ್‌ ಶೇ 4.11, ಐಟಿಸಿ
ಶೇ 2.33 ರಷ್ಟು ಗರಿಷ್ಠ ಕುಸಿತ ಕಂಡಿವೆ.

ವಹಿವಾಟು ವಿವರ

₹8,402ಕೋಟಿ - ದೇಶಿ, ವಿದೇಶಿ ಹೂಡಿಕೆದಾರರು ಖರೀದಿಸಿರುವ ಷೇರುಗಳ ಒಟ್ಟು ಮೌಲ್ಯ

₹15,973ಕೋಟಿ - ಬಿಎಸ್‌ಇ ವಾರದ ವಹಿವಾಟು ಮೊತ್ತ

₹1.19ಲಕ್ಷ ಕೋಟಿ -ಎನ್‌ಎಸ್‌ಇ ವಾರದ ವಹಿವಾಟು ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.