ADVERTISEMENT

ಸೂಚ್ಯಂಕದ ನಾಗಾಲೋಟ

ಬ್ಯಾಂಕ್‌ಗಳಲ್ಲಿ ಎಫ್‌ಡಿಐ ಮಿತಿ ಏರಿಕೆ ಪ್ರಸ್ತಾವದ ಪರಿಣಾಮ

ಪಿಟಿಐ
Published 18 ಜನವರಿ 2018, 19:32 IST
Last Updated 18 ಜನವರಿ 2018, 19:32 IST
ಸೂಚ್ಯಂಕದ ನಾಗಾಲೋಟ
ಸೂಚ್ಯಂಕದ ನಾಗಾಲೋಟ   

ಮುಂಬೈ: ಷೇರುಪೇಟೆಗಳಲ್ಲಿ ಎರಡನೇ ದಿನವೂ ಸೂಚ್ಯಂಕದ ಓಟ ಮುಂದುವರಿಯಿತು. ಕೇಂದ್ರ ಸರ್ಕಾರವು  ಬ್ಯಾಂಕ್‌ಗಳಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ)ಮಿತಿಯನ್ನು ಏರಿಕೆ ಮಾಡುವ ಪ್ರಸ್ತಾವ ಇರುವುದು ಸಕಾರಾತ್ಮಕ ವಹಿವಾಟಿಗೆ ಉತ್ತೇಜನ ನೀಡಿತು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ಎಫ್‌ಡಿಐ ಮಿತಿಯನ್ನುಶೇ 49ಕ್ಕೆ ಹೆಚ್ಚಿಸಲು ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಎಫ್‌ಡಿಐ ಮಿತಿಯನ್ನು ಶೇ 100ರಷ್ಟು ಹೆಚ್ಚಿಸುವ ಕುರಿತಾಗಿ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎನ್ನುವ ವರದಿ ಬಂದಿದೆ. ಇದರಿಂದ ಬ್ಯಾಂಕಿಂಗ್‌ ಷೇರುಗಳ ಮೌಲ್ಯ ಏರಿಕೆ ಕಾಣುವಂತಾಯಿತು.

ವಿದೇಶಿ ಸಾಂಸ್ಥಿಕ ಹೂಡಿಕೆ ಪ್ರಮಾಣ ಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯು ಸೂಚ್ಯಂಕಗಳ ಏರುಮುಖ ಚಲನೆಗೆ ವೇಗ ನೀಡಿದವು. ಮೂರನೇ ತ್ರೈಮಾಸಿಕ ಫಲಿತಾಂಶದ ಬಗೆಗಿನ ಆಶಾವಾದ ಮತ್ತು ಬಜೆಟ್‌ ಮೇಲಿನ ನಿರೀಕ್ಷೆಗಳೂ ಸಹ ಉತ್ತಮ ವಹಿವಾಟಿಗೆ ಕಾರಣವಾಗುತ್ತಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ADVERTISEMENT

ಷೇರುಪೇಟೆ ವಹಿವಾಟು ಗರಿಷ್ಠ ಮಟ್ಟದಲ್ಲಿ ಇದ್ದಾಗ ಹೂಡಿಕೆದಾರರು ಮಾರಾಟಕ್ಕೆ ಒತ್ತು ನೀಡಿದ್ದರಿಂದ ಗಳಿಕೆ ಪ್ರಮಾಣ ತುಸು ತಗ್ಗಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ದಿನದ ವಹಿವಾಟಿನಲ್ಲಿ 35,507 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ವಹಿವಾಟಿನ ಅಂತ್ಯದವೇಳೆಗೆ 178 ಅಂಶಗಳ ಏರಿಕೆಯೊಂದಿಗೆ ಹೊಸ ಎತ್ತರವಾದ 35,260 ಅಂಶಗಳಿಗೆ ತಲುಪಿತು. ಬುಧವಾರದ ವಹಿವಾಟಿನಲ್ಲಿ 311 ಅಂಶ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 28 ಅಂಶ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 10,788 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

‘ವಿತ್ತೀಯ ಕೊರತೆ ಅಂತರ ಹೆಚ್ಚಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ಸಂಗ್ರಹಿಸಲಿರುವ ಮೊತ್ತವನ್ನು(₹ 50,000 ಕೋಟಿಯಿಂದ ₹ 20,000 ಕೋಟಿಗೆ) ತಗ್ಗಿಸಲು ನಿರ್ಧರಿಸಿದೆ.

ಇದರ ಜತೆಗೆ ಬ್ಯಾಂಕ್‌ಗಳಲ್ಲಿ ಎಫ್‌ಡಿಐ ಮಿತಿ ಹೆಚ್ಚಳ ಹಾಗೂ ಜಿಎಸ್‌ಟಿಮಂಡಳಿ ಸಭೆಯಲ್ಲಿ ಸರಕುಗಳ ತೆರಿಗೆ ದರ ಇಳಿಕೆ ನಿರೀಕ್ಷೆಯೂ ದಾಖಲೆ ಮಟ್ಟದ ವಹಿವಾಟು ನಡೆಯುವಂತೆ ಮಾಡಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಮಾರುಕಟ್ಟೆ ಮುಖ್ಯಸ್ಥ ಆನಂದ್ ಜೇಮ್ಸ್‌ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಮೆರಿಕದ ಷೇರುಪೇಟೆ ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ಏರಿಕೆ ಕಂಡಿವೆ. ಏಷ್ಯಾದ ಷೇರುಪೇಟೆಗಳ ವಹಿವಾಟು ಸ್ಥಿರವಾಗಿದೆ. ಈ ಅಂಶಗಳೂ ದೇಶಿ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿವೆ.

ಮಾರುಕಟ್ಟೆ ಮೌಲ್ಯ ಏರಿಕೆ

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯವು ₹ 5 ಲಕ್ಷ ಕೋಟಿ ಗಡಿ ದಾಟಿದೆ.

ಈ ಗಡಿ ದಾಟಿದ ಖಾಸಗಿ ವಲಯದ ಮೊದಲ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ (₹ 5.85 ಲಕ್ಷ ಕೋಟಿ) ಮತ್ತು ಟಿಸಿಎಸ್‌ (₹ 5.54 ಲಕ್ಷ ಕೋಟಿ) ನಂತರ ಈ ಸಾಧನೆ ಮಾಡಿದ ಮೂರನೇ ಕಂಪನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.