ADVERTISEMENT

₹ 6,203 ಕೋಟಿ ಸಾಲ ವಸೂಲಿಗೆ ಡಿಆರ್‌ಟಿ ಆದೇಶ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
₹ 6,203 ಕೋಟಿ ಸಾಲ ವಸೂಲಿಗೆ ಡಿಆರ್‌ಟಿ ಆದೇಶ
₹ 6,203 ಕೋಟಿ ಸಾಲ ವಸೂಲಿಗೆ ಡಿಆರ್‌ಟಿ ಆದೇಶ   

ಬೆಂಗಳೂರು: ಮದ್ಯದ ದೊರೆ ವಿಜಯ್‌ ಮಲ್ಯ ಅವರಿಂದ ₹ 6,203 ಕೋಟಿಗಳಷ್ಟು ಸಾಲ ಬಾಕಿ ವಸೂಲಾತಿ   ಪ್ರಕ್ರಿಯೆ ಆರಂಭಿಸಲು ಇಲ್ಲಿಯ ಸಾಲ ವಸೂಲಿ  ನ್ಯಾಯಮಂಡಳಿಯು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೇತೃತ್ವದಲ್ಲಿನ ಬ್ಯಾಂಕ್‌ಗಳ ಒಕ್ಕೂಟಕ್ಕೆ ಆದೇಶಿಸಿದೆ.

ಸದ್ಯ ಹಾರಾಟ ಸ್ಥಗಿತಗೊಳಿಸಿರುವ ವಿಮಾನ ಯಾನ ಸಂಸ್ಥೆ ಕಿಂಗ್‌ಫಿಷರ್‌ ವಹಿವಾಟಿಗೆ ಸಂಬಂಧಿಸಿದಂತೆ ಮಲ್ಯ ಅವರು ಪಡೆದುಕೊಂಡಿದ್ದ  ಸಾಲವನ್ನು  ವಾರ್ಷಿಕ ಶೇ 11.5ರ ಬಡ್ಡಿ ದರದಲ್ಲಿ ವಸೂಲಿ ಮಾಡಲು ಸೂಚಿಸಲಾಗಿದೆ.

‘ಮಲ್ಯ ಮತ್ತು ಅವರಿಗೆ ಸೇರಿರುವ ಯುನೈಟೆಡ್‌ ಬ್ರಿವರೀಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌, ಕಿಂಗ್‌ಫಿಷರ್‌ ಫಿನ್‌ವೆಸ್ಟ್‌ ಮತ್ತು ಕಿಂಗ್‌ಫಿಷರ್‌ ಏರ್‌ಲೈನ್ಸ್‌ನಿಂದ ವಸೂಲಿ ಮಾಡಲು ಚಾಲನೆ ನೀಡಬೇಕು’ ಎಂದು ನ್ಯಾಯ ಮಂಡಳಿ (ಡಿಆರ್‌ಟಿ) ನ್ಯಾಯಾಧೀಶ ಕೆ. ಶ್ರೀನಿವಾಸನ್‌ ಆದೇಶದಲ್ಲಿ ತಿಳಿಸಿದ್ದಾರೆ.

ಹದಿನೇಳು ಬ್ಯಾಂಕ್‌ಗಳ ಒಕ್ಕೂಟವು ಸಾಲ ವಸೂಲಾತಿಗೆ ಮೂರು ವರ್ಷಗಳ ಹಿಂದೆ ಆರಂಭಿಸಿದ್ದ ಕಾನೂನು ಸಮರಕ್ಕೆ   ಈಗ ತೆರೆ ಬಿದ್ದಂತೆ ಆಗಿದೆ. ಹಾರಾಟ ಸ್ಥಗಿತಗೊಳಿಸಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ನಿಂದ ತನಗೆ ಬರಬೇಕಾದ ಸಾಲ ವಸೂಲಾತಿಗೆ ಬ್ಯಾಂಕ್‌ಗಳು 2013ರಲ್ಲಿ ‘ಡಿಆರ್‌ಟಿ’ಗೆ ಮೊರೆ ಹೋಗಿದ್ದವು. ಸುಸ್ತಿದಾರ ಮಲ್ಯ ಅವರ ಬಂಧನ ಮತ್ತು  ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧಿಸಿದಂತೆ ಎಸ್‌ಬಿಐ, ಇನ್ನೂ ಮೂರು ಅರ್ಜಿ ಸಲ್ಲಿಸಿತ್ತು.

ಮಲ್ಯ ಅವರನ್ನು ಬ್ಯಾಂಕ್‌ಗಳು ‘ಉದ್ದೇಶಪೂರ್ವಕ ಸುಸ್ತಿದಾರ’ ಎಂದು   ಘೋಷಿಸಿವೆ. ಮುಂಬೈನ ವಿಶೇಷ ನ್ಯಾಯಾಲಯವು ಕೂಡ ‘ಘೋಷಿತ ಅಪರಾಧಿ’ ಎಂದು  ಅಭಿಪ್ರಾಯಪಟ್ಟಿದೆ. ಮಲ್ಯ ಅವರು 2016ರ ಮಾರ್ಚ್‌ 2 ರಂದು ಲಂಡನ್‌ಗೆ ಪಲಾಯನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT