ADVERTISEMENT

‘ಬ್ಯಾಂಕ್‌ ನಿಯಂತ್ರಣ: ಚರ್ಚೆಗೆ ಸಿದ್ಧ’

ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಹೇಳಿಕೆ

ಪಿಟಿಐ
Published 3 ಜುಲೈ 2018, 19:45 IST
Last Updated 3 ಜುಲೈ 2018, 19:45 IST

ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ (ಪಿಎಸ್‌ಬಿ) ನಿಯಂತ್ರಣ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಜತೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧ ಇದೆ.

‘ಬ್ಯಾಂಕ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಜತೆ ಚರ್ಚೆ ನಡೆಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ’ ಎಂದು ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

‘ಪಿಎಸ್‌ಬಿ’ಗಳಲ್ಲಿನ ತನ್ನ ಪಾಲು ಬಂಡವಾಳ ಕಡಿಮೆ ಮಾಡಲು ಸರ್ಕಾರ ಆಲೋಚಿಸುತ್ತಿದೆ ಎನ್ನುವುದನ್ನು ಸಚಿವರು ಅಲ್ಲಗಳೆದಿದ್ದಾರೆ.

ADVERTISEMENT

‘ಮಾಲೀಕತ್ವವನ್ನು ಶೇ 51ಕ್ಕಿಂತ ಕಡಿಮೆ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಐಡಿಬಿಐ ಬ್ಯಾಂಕ್‌ನಲ್ಲಿನ ಸರ್ಕಾರದ ಪಾಲು ಬಂಡವಾಳವನ್ನು ಎಲ್‌ಐಸಿಗೆ ಮಾರಾಟ ಮಾಡುವ ಆಲೋಚನೆಗೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಸಂದರ್ಭದಲ್ಲಿಯೇ ಸಚಿವರ ಈ ಸ್ಪಷ್ಟನೆ ಹೊರ ಬಿದ್ದಿದೆ.

‘ವಸೂಲಾಗದ ಸಾಲಗಳ (ಎನ್‌ಪಿಎ) ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಉದ್ದಿಮೆಗಳನ್ನು ಪರಿಸಮಾಪ್ತಿಗೊಳಿಸುವುದೇ ಪರಿಹಾರ ಆಗಲಾರದು. ಅನೇಕ ಸಂದರ್ಭಗಳಲ್ಲಿ ಉದ್ದಿಮೆ ವಹಿವಾಟು ವೈಫಲ್ಯಗೊಂಡಿರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ. ಹಣಕಾಸು ಸಂಕಷ್ಟ ಎದುರಿಸುತ್ತಿರುವ ಬ್ಯಾಂಕ್‌ಗಳಿಗೆ ಅಗತ್ಯವಾಗಿರುವ ಬಂಡವಾಳದ ನೆರವು ನೀಡಲು ಸರ್ಕಾರ ಸಿದ್ಧ ಇದೆ’ ಎಂದರು.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸಲು ಕೇಂದ್ರೀಯ ಬ್ಯಾಂಕ್‌ಗೆ ಹೆಚ್ಚಿನ ಅಧಿಕಾರ ಇಲ್ಲ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಉರ್ಜಿತ್‌ ಪಟೇಲ್‌ ಇತ್ತೀಚೆಗೆ ದೂರಿದ್ದರು.

‘ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಮೇಲೆ ಆರ್‌ಬಿಐಗೆ ಹೆಚ್ಚಿನ ಅಧಿಕಾರ ಇಲ್ಲ. ಬ್ಯಾಂಕ್‌ಗಳ ಪ್ರತಿಯೊಂದು ಶಾಖೆಯ ಲೆಕ್ಕಪತ್ರದ ಮೇಲೆ
ನಿಗಾ ಇರಿಸಲು ಸಾಧ್ಯವಾಗುವುದಿಲ್ಲ’ ಎಂದೂ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು.

**

ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಬ್ಯಾಂಕಿಂಗ್‌ ಕ್ಷೇತ್ರ ವಿಫಲವಾಗಿರುವುದು ನಿಜ.

–ಪೀಯೂಷ್‌ ಗೋಯಲ್‌, ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.