ADVERTISEMENT

ದುಡಿಮೆ ಶುರುವಾದಾಗಲೇ ಉಯಿಲು ಬರೆದಿಡಿ!

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 15:33 IST
Last Updated 10 ಆಗಸ್ಟ್ 2023, 15:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

–ವಿಷ್ಣು ಚುಂಡಿ

ನಾವು ಭೌತಿಕವಾಗಿ ಸಂಪಾದಿಸಿರುವ ವಸ್ತುಗಳಿಗೆ ಹಣದ ಲೆಕ್ಕದಲ್ಲಿ ಒಂದಿಷ್ಟು ಮೌಲ್ಯ ಇರುತ್ತದೆ. ಆದರೆ ಅವುಗಳ ಬೆಲೆ ಅಷ್ಟೇ ಅಲ್ಲ. ಅವುಗಳ ಜೊತೆ ಒಂದಿಷ್ಟು ಭಾವನೆಗಳೂ ಬೆಸೆದುಕೊಂಡಿರುತ್ತವೆ. ಹೀಗಾಗಿ, ನಮ್ಮ ಕಾಲಾನಂತರ ಅವುಗಳ ಪರಿಸ್ಥಿತಿ ಏನಾಗುತ್ತದೆ ಎಂಬುದು ಮಹತ್ವದ್ದಾಗುತ್ತದೆ. ಹೀಗಾಗಿ ‘ಉಯಿಲು’ ಪ್ರಾಮುಖ್ಯ ಪಡೆಯುತ್ತದೆ.

ಉಯಿಲು ಬರೆದಿಡಬೇಕಾದ ಅಗತ್ಯ ಇರುವುದು ಶ್ರೀಮಂತರಿಗೆ ಅಥವಾ ತೀರಾ ವಯಸ್ಸಾದವರಿಗೆ ಮಾತ್ರ ಎಂಬ ನಂಬಿಕೆಯೊಂದು ಇದೆ. ಆದರೆ ಇದು ತಪ್ಪು. ಹಣಕಾಸಿನ ಯೋಜನೆಗಳ ಭಾಗವಾಗಿ ಉಯಿಲು ಎಲ್ಲ ವಯಸ್ಕರ ಪಾಲಿಗೂ ಮಹತ್ವದ್ದೇ ಆಗಿರುತ್ತದೆ. ಹೀಗೆ ಉಯಿಲು ಬರೆದಿಡುವುದರ ಮೂಲಕ, ವ್ಯಾಜ್ಯಗಳು ಉಂಟಾಗುವುದನ್ನು ತಪ್ಪಿಸಬಹುದು.

ADVERTISEMENT

ಉಯಿಲಿಗೆ ಕಾನೂನಿನ ಮಾನ್ಯತೆ ಇದೆ. ಇಲ್ಲಿ ಉಯಿಲು ಬರೆಯುವ ವ್ಯಕ್ತಿಯು ತನ್ನ ಆಸ್ತಿಯನ್ನು ತನ್ನ ಮರಣದ ನಂತರದಲ್ಲಿ ಹೇಗೆ ಹಂಚಿಕೆ ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸುತ್ತಾನೆ. ಉಯಿಲಿನ ಜೊತೆಗೆ ಒಂದಿಷ್ಟು ಭಾವನಾತ್ಮಕ ಸಂಗತಿಗಳೂ ಬೆಸೆದುಕೊಂಡಿರುತ್ತವೆ. ಮೊದಲನೆಯದಾಗಿ, ವ್ಯಕ್ತಿ ಸಂಪಾದಿಸಿರುವ ಆಸ್ತಿಯು ಆತನ ಇಚ್ಛೆಗೆ ಅನುಗುಣವಾಗಿಯೇ ಹಂಚಿಕೆಯಾಗುತ್ತದೆ ಎಂಬುದನ್ನು ಉಯಿಲು ಖಾತರಿಪಡಿಸುತ್ತದೆ. ಉದಾಹರಣೆಗೆ, ಪೋಷಕರೊಬ್ಬರು ತಮ್ಮ ಆಸ್ತಿಯಲ್ಲಿ ಹೆಚ್ಚಿನ ಪಾಲನ್ನು ತಮ್ಮ ಒಂದು ಅಂಗವಿಕಲ ಮಗುವಿಗೆ ಕೊಡುವ ಬಯಕೆಯನ್ನು ಹೊಂದಿರಬಹುದು. ಉಯಿಲು ಬರೆದಿಡುವ ಮೂಲಕ ಈ ಬಯಕೆ ಈಡೇರುವಂತೆ ನೋಡಿಕೊಳ್ಳಬಹುದು. ಅದಕ್ಕಿಂತ ಹೆಚ್ಚಾಗಿ, ಉಯಿಲು ಬರೆದಿಟ್ಟಲ್ಲಿ ವಾರಸುದಾರರ ನಡುವೆ ಸಂಘರ್ಷಗಳನ್ನು ತಪ್ಪಿಸಬಹುದು.

ಉಯಿಲಿನ ವಿಚಾರದಲ್ಲಿ ಹಲವು ತಪ್ಪು ಕಲ್ಪನೆಗಳು ಇವೆ. ಅದರ ಕಾರಣದಿಂದಾಗಿಯೇ ಉಯಿಲು ವ್ಯಾಪಕವಾಗಿ ಬಳಕೆಯಾಗುತ್ತಿಲ್ಲ. ಉಯಿಲು ಬರೆದಿಡುವ ಅಗತ್ಯವಿರುವುದು ಶ್ರೀಮಂತರಿಗೆ ಮಾತ್ರ ಎಂಬ ತಪ್ಪು ಕಲ್ಪನೆಯೊಂದು ಇದೆ. ವಾಸ್ತವದಲ್ಲಿ, ವ್ಯಕ್ತಿ ಸಂಪಾದಿಸಿದ ಆಸ್ತಿಯ ಪ್ರಮಾಣ ಎಷ್ಟೇ ಇರಲಿ, ಅದು ಆ ವ್ಯಕ್ತಿಯ ಇಚ್ಛೆಗೆ ಅನುಗುಣವಾಗಿ ಹಂಚಿಕೆಯಾಗುವುದನ್ನು ಉಯಿಲು ಖಾತರಿಪಡಿಸುತ್ತದೆ.

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪಾಲಕರು ಯಾರು ಎಂಬುದನ್ನು ಕೂಡ ಉಲ್ಲೇಖಿಸಬಹುದು. ಉಯಿಲು ಬರೆದಿಡಬೇಕಾದ ಅಗತ್ಯವು ಹಿರಿಯ ನಾಗರಿಕರಿಗೆ ಮಾತ್ರ ಇರುತ್ತದೆ ಎಂಬುದು ಕೂಡ ಇನ್ನೊಂದು ತಪ್ಪು ಕಲ್ಪನೆ. ಏಕೆಂದರೆ, ಕೆಟ್ಟ ಸಂದರ್ಭವು ಯಾವ ವಯಸ್ಸಿನವರಿಗೂ ಎದುರಾಗಬಹುದು. ಹೀಗಾಗಿ, ವ್ಯಕ್ತಿಯ ಹಣಕಾಸು ಯೋಜನೆಗಳಲ್ಲಿ ಉಯಿಲು ಬರೆದಿಡುವುದು ಅವಿಭಾಜ್ಯ ಅಂಗವಾಗಬೇಕು. ವ್ಯಕ್ತಿ ತಾನು ದುಡಿಮೆಯನ್ನು ಆರಂಭಿಸಿದ ತಕ್ಷಣವೇ ಉಯಿಲು ಬರೆದಿಡುವುದು ಸೂಕ್ತ. ಉಯಿಲು ಬರೆಯುವುದು ಬಹಳ ಸಂಕೀರ್ಣ ಕೆಲಸ ಎಂಬುದು ಕೂಡ ತಪ್ಪು ಕಲ್ಪನೆ. ವೃತ್ತಿಪರರ ನೆರವು ಪಡೆದು ಉಯಿಲು ಬರೆಯಬಹುದು, ಜೀವನದಲ್ಲಿ ಪರಿಸ್ಥಿತಿ ಬದಲಾದಂತೆಲ್ಲ ಉಯಿಲಿನಲ್ಲಿಯೂ ಬದಲಾವಣೆ ತರಬಹುದು.

ಉಯಿಲಯನ್ನು ಬರೆಯುವುದು ಬಹಳ ಸವಾಲಿನ ಕೆಲಸ ಎಂದು ಅನ್ನಿಸಬಹುದು. ಆದರೆ ನಿಮ್ಮ ಆಸ್ತಿಗಳನ್ನು ಗುರುತಿಸಿ, ಅದನ್ನು ಸರಿಯಾಗಿ ಹಂಚಿಕೆ ಮಾಡಬೇಕಾದ ವ್ಯಕ್ತಿಯನ್ನು ಗುರುತಿಸಿ, ಕಾನೂನು ತಜ್ಞರ ನೆರವು ಪಡೆದು, ಉಯಿಲನ್ನು ಕಾಲಕಾಲಕ್ಕೆ ಪರಿಶೀಲಿಸುತ್ತ ಇದ್ದರೆ ಇಡೀ ಪ್ರಕ್ರಿಯೆಯು ಸರಳಗೊಳ್ಳಬಹುದು.

– ಲೇಖಕ ಆಸಾನ್‌ವಿಲ್‌ ಕಂಪನಿಯ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.