ADVERTISEMENT

ಸೂಚ್ಯಂಕ 219 ಅಂಶ ಇಳಿಕೆ

ಹೆಚ್ಚಿದ ಜಾಗತಿಕ ವಾಣಿಜ್ಯ ಸಮರದ ಆತಂಕ

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 6:27 IST
Last Updated 26 ಜೂನ್ 2018, 6:27 IST

ಮುಂಬೈ (ಪಿಟಿಐ): ಅಮೆರಿಕ ಮತ್ತು ಚೀನಾ ಮಧ್ಯೆ ಮೂಡಿರುವ ವಾಣಿಜ್ಯ ಬಿಕ್ಕಟ್ಟಿನ ಪರಿಣಾಮದಿಂದಾಗಿ ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿದೆ.

ಅಮೆರಿಕದಲ್ಲಿನ ಚೀನಾದ ಸಂಸ್ಥೆಗಳ ಹೂಡಿಕೆಗೆ ನಿರ್ಬಂಧ ವಿಧಿಸಲು ಅಮೆರಿಕ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನುವ ವರದಿಗಳು ಸದ್ಯ ಉಭಯ ದೇಶಗಳ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಏಷ್ಯಾದ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟಿಗೆ ಕಾರಣವಾಯಿತು.

ದೇಶಿ ಮಾರುಕಟ್ಟೆಯಲ್ಲಿ ಲಾಭ ಗಳಿಕೆ ಉದ್ದೇಶದ ವಹಿವಾಟು ಮತ್ತು ವಿದೇಶಿ ಬಂಡವಾಳ ಹೊರಹರಿವು ಸೂಚ್ಯಂಕವನ್ನು ಇಳಿಕೆ ಕಾಣುವಂತೆ ಮಾಡಿದೆ ಎಂದು ದಲ್ಲಾಳಿಗಳು ಹೇಳದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸೋಮವಾರ 219 ಅಂಶ ಇಳಿಕೆ ಕಂಡು 35,470 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 59 ಅಂಶ ಇಳಿಕೆಯಾಗಿ 10,762 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

‘ಕಚ್ಚಾ ತೈಲ ಉತ್ಪಾದನೆ ಹೆಚ್ಚಳದಿಂದ ದರದಲ್ಲಿ ಇಳಿಕೆಯಾಗಲಿದ್ದು, ಭಾರತದ ಮಾರುಕಟ್ಟೆಗೆ ತುಸು ನಿರಾಳತೆ ಮೂಡಿಸಲಿದೆ. ಆದರೆ ವಾಣಿಜ್ಯ ಸಮರ ತೀವ್ರ ಸ್ವರೂಪ ಪಡೆದುಕೊಂಡಲ್ಲಿ ವಿದೇಶಿ ಬಂಡವಾಳ ಹೊರಹರಿವು ಹೆಚ್ಚಾಗಿ ರೂಪಾಯಿ ಮತ್ತು ವಿತ್ತೀಯ ಶಿಸ್ತಿನ ಮೇಲೆ ಒತ್ತಡ ಎದುರಾಗುವ ಸಾಧ್ಯತೆ ಇದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಪಿ–ನೋಟ್ಸ್‌: ಪಾರ್ಟಿಸಿಪೇಟರಿ ನೋಟ್ಸ್‌ ಮೂಲಕ ಹೂಡಿಕೆಯು 9 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮೇ ತಿಂಗಳ ಅಂತ್ಯಕ್ಕೆ ₹ 93 ಸಾವಿರ ಕೋಟಿ ಹೂಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.