ADVERTISEMENT

ಧೂಮಕೇತುವಿನ ಮೇಲೆ ಕುಂಟಬಂಟನ ಸಾಹಸ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 10:07 IST
Last Updated 16 ಜೂನ್ 2018, 10:07 IST

ಬಾಹ್ಯಾಕಾಶದಲ್ಲಿ ಇಂಥ ಸರ್ಕಸ್ ಸಾಧನೆ ಹಿಂದೆಂದೂ ನಡೆದಿರಲಿಲ್ಲ. ‘ಚೂರಿ’ ಹೆಸರಿನ ಧೂಮಕೇತುವನ್ನು   ‘ರೊಸೆಟ್ಟಾ’ ಎಂಬ ಗಗನನೌಕೆಯೊಂದು ಬೆನ್ನ­ಟ್ಟಿತ್ತು. ಕಳೆದ ವಾರ ಈ ನೌಕೆ ತನ್ನ ಹೊಟ್ಟೆ­ಯಿಂದ ‘ಫೈಲೀ’ ಎಂಬ ಪುಟ್ಟ ಯಂತ್ರವನ್ನು ಚೂರಿಯ ಮೇಲೆ ಇಳಿಸಿದೆ. ಫೈಲಿ ತಾನು ನಿಂತ ಧೂಮ­ಕೇತುವಿನಲ್ಲಿ ಏನೇನಿದೆ ಎಂಬುದನ್ನು ವರದಿ ಮಾಡಿದೆ. ಮಾಡುತ್ತಲೇ ತನ್ನ ಕಾಲ ಕೆಳಗೆ ಚಿಕ್ಕ ರಂಧ್ರವನ್ನು ಕೊರೆಯಲು ಯತ್ನಿಸಿದೆ.

ಧೂಮ­ಕೇತು­ವಿನ ಶರೀರ ತುಂಬಾ ಗಟ್ಟಿ ಇದ್ದುದ­ರಿಂದ ಫೈಲೀ ತನಗೆ ಇನ್ನಷ್ಟು ಶಕ್ತಿ ಬೇಕೆಂದು ಬಿಸಿಲಿಗಾಗಿ ಕಾದು ಕೂತಿದೆ. ಭೂಮಿಯಿಂದ ೭೦ ಕೋಟಿ ಕಿಲೊಮೀಟರ್ ಆಚೆ ನಡೆಯುತ್ತಿರುವ ಈ ನಾಟಕವನ್ನು ಕಳೆದ ಆರೇಳು ದಿನಗಳಿಂದ ಖಗೋಲ­ಪ್ರಿಯರು ಭಾರೀ ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. ಧೂಮಕೇತು ಎಂದರೆ ಅನಿಷ್ಟ ಎಂದೇ ಹಿಂದಿ­ನವರು ಭಾವಿಸಿದ್ದರು. ಆಕಾಶದಲ್ಲಿ ಧೂಮಕೇತು ಕಂಡಿತು ಎಂದರೆ ರಾಜರಿಗೆ ಹಾಗೂ ಪ್ರಜೆಗಳಿಗೆ ಆ ಇಡೀ ವರ್ಷ ಅದೇನೇನೊ ರೋಗರುಜಿನೆ ಮತ್ತು ನೈಸರ್ಗಿಕ ವಿಪತ್ತು ಬರುತ್ತದೆಂಬ ಪ್ರತೀತಿ ಇತ್ತು.

ಪೊರಕೆಯಂತೆ ಉದ್ದನ್ನ ಬಾಲ ಬೀಸುತ್ತ ಅದು ಸೂರ್ಯನ ಪ್ರದಕ್ಷಿಣೆಗೆ  ಧಾವಿಸುತ್ತಿದ್ದರೆ ಇತ್ತ ಭೂಮಿಯ ಮೇಲೆ ಭಯ ಆಪತ್ತುಗಳ ನಿವಾ­ರಣೆಗೆ ಏನೆಲ್ಲ ಪರಿಹಾರ, ಪರಿಷ್ಕಾರ ದೇಗುಲಗಳ ಪ್ರದಕ್ಷಿಣೆ ನಡೆಯುತ್ತಿತ್ತು. ಕಂಟಕ ನಿರೋಧಕ ಮದ್ದುಗುಳಿಗೆಗಳೂ ಯುರೋಪಿನಲ್ಲಿ ಮಾರಾ­ಟಕ್ಕೆ ಬರುತ್ತಿದ್ದವು. ಈಗ ಧೂಮಕೇತುಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಕ್ಕಿವೆ. ಸೌರಮಂಡಲದ ಅತ್ಯಂತ ಹೊರಗಿನ ಘೋರಚಳಿಯ ಕರಾಳ ಕತ್ತಲಿನ ವೃತ್ತದಲ್ಲಿ ಚಿಕ್ಕದೊಡ್ಡ ಕೋಟ್ಯಂತರ ಬಂಡೆಗಳು ಸುತ್ತುತ್ತಿವೆ. ಅವುಗಳ ಮಧ್ಯದಿಂದ ಕೆಲವು ಬಂಡೆಗಳು ಯಾರೋ ಖೋ ಕೊಟ್ಟಂತೆ ಮೇಲೆದ್ದು ಧಾವಿಸುತ್ತ ಸೂರ್ಯನ ಪ್ರದಕ್ಷಿಣೆ ಹಾಕಿ ಹಿಂದಿರುಗಿ ಹೋಗುತ್ತವೆ. ಕೆಲವು ಧೂಮ­ಕೇತುಗಳು ನಿಗದಿತ ಅವಧಿಗೊಮ್ಮೆ ಕರಾರು­ವಾಕ್ಕಾಗಿ ಹೀಗೆ ಬಂದು ಹಾಗೆ ಹೋಗು­ತ್ತವೆ.

ಸೂರ್ಯನ ಬಳಿ ಸಮೀಪಿಸಿದಂತೆಲ್ಲ, ಹಿಮದ ಚೆಂಡಿನಂತಿರುವ ಅವುಗಳ ಶರೀರದಿಂದ ನಾನಾ ಬಗೆಯ ದ್ರವ್ಯಗಳು ಆವಿಯಾಗಿ ಹೊಮ್ಮಿ ಉದ್ದ ಬಾಲದಂತೆ ಬಿಸಿಲಿಗೆ ಹೊಳೆಯುತ್ತವೆ. ಕಳೆದ ಎರಡು ದಶಕಗಳಲ್ಲಿ ನಾಲ್ಕಾರು ಗಗನನೌಕೆಗಳು ಬೇರೆ ಬೇರೆ ಧೂಮಕೇತುಗಳನ್ನು ಸಮೀಪಿಸಿ, ಚಿತ್ರ ತೆಗೆದು, ಅವುಗಳ ಬಾಲದೊಳಕ್ಕೆ ಹೊಕ್ಕು ಆವಿರೂಪದ ಕೆಮಿಕಲ್‌ಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿವೆ. ನೆತ್ತಿಯ ಮೇಲೆ ನೇರವಾಗಿ ಇಳಿದು ನೋಡಬೇಕೆಂದು ಐರೋಪ್ಯ ಬಾಹ್ಯಾ­ಕಾಶ ಸಂಘ ೨೧ ವರ್ಷಗಳ ಹಿಂದೆಯೇ ಯೋಜನೆ ರೂಪಿಸಿತ್ತು. ರಷ್ಯದ ವಿಜ್ಞಾನಿಗಳಿಬ್ಬರು ಈ ಮೊದಲೇ ಗುರುತಿಸಿಟ್ಟ ‘೬೭ಪಿ/ ಚೂರ್ಯುಮೊವ್-– ಜಿರಾಸಿಮೆಂಕೊ’ ಹೆಸರಿನ ಧೂಮಕೇತುವನ್ನು ಅದಕ್ಕೆಂದು ಆಯ್ಕೆ ಮಾಡಿತ್ತು.

ಪ್ರತಿ ೬.೬ ವರ್ಷಗಳಿಗೆ ಒಂದು ಬಾರಿ ಸೂರ್ಯನನ್ನು ಸುತ್ತಿ ಹೋಗುವ ಅದಕ್ಕೆ ಚಿಕ್ಕದಾಗಿ ‘ಚೂರಿ’ ಎಂದು ಪ್ರೀತಿಯ ಹೆಸರಿಡ­ಲಾಯಿತು. ಅನೇಕರು ಅದನ್ನು ‘೬೭ಪಿ’ ಎಂತಲೇ ಕರೆಯುತ್ತಾರೆ. ಗಂಟೆಗೆ ಸುಮಾರು ಒಂದೂವರೆ ಲಕ್ಷ ಕಿಲೊಮೀಟರ್ ವೇಗದಲ್ಲಿ ಧಾವಿಸುತ್ತಿರುವ ಚಿಕ್ಕ ಧೂಮಕೇತು ಅದು. ಬರೀ ನಾಲ್ಕು ಕಿಲೊ­ಮೀಟರ್ ಅಗಲದ ಒರಟು ಬಂಡೆ. ಆಲೂಗಡ್ಡೆಯಂಥದ್ದು. ಅದನ್ನು ಬೆನ್ನಟ್ಟಲೆಂದು ಹತ್ತು ವರ್ಷಗಳ ಹಿಂದೆ ‘ರೊಸೆಟ್ಟಾ’ ಹೆಸರಿನ ನೌಕೆಯನ್ನು ಐರೋಪ್ಯ ಸಂಘ ಹಾರಿಬಿಟ್ಟಿತ್ತು. ಸೌರ ಮಂಡಲದ ಆ ಅಂಚಿನವರೆಗೆ ಹೋಗಬೇಕಾದ ನೌಕೆ ಅಲ್ಲಿನ ಕ್ಷೀಣ ಬೆಳಕಿನಲ್ಲಿ ಆದಷ್ಟೂ ಹೆಚ್ಚು ಶಕ್ತಿಯನ್ನು ಹೀರಿಕೊಳ್ಳಲೆಂದು ಅತ್ಯಂತ ವಿಶಾಲ­ವಾದ ಸೌರರೆಕ್ಕೆಗಳನ್ನು ಅದಕ್ಕೆ ಜೋಡಿಸ­ಲಾಗಿತ್ತು.

ಅಪಾರ ವೇಗದಲ್ಲಿ ಧಾವಿಸುವ ಧೂಮಕೇತುವನ್ನು ಬೆನ್ನಟ್ಟಬೇಕೆಂದರೆ ಭಾರೀ ವೇಗೋತ್ಕರ್ಷ ಬೇಕು. ಸುತ್ತಿ ಸುತ್ತಿ ಬೀಸಿ ಹಾರಿಸುವ ಕವಣೆಯಂತೆ ರೊಸೆಟ್ಟಾವನ್ನು ಒಮ್ಮೆ ಮಂಗಳನ ಪ್ರದಕ್ಷಿಣೆ ಮಾಡಿಸಿ, ಅದು ಅತಿ ವೇಗದಲ್ಲಿ ಭೂಮಿಯತ್ತ ಬಂದು ಮತ್ತೆ ಭಾರೀ ವೇಗದಲ್ಲಿ ಗುರುಗ್ರಹದ ದಿಕ್ಕಿನಲ್ಲಿ ಚಿಮ್ಮುವಂತೆ ಮಾಡಿ ಅದಕ್ಕೆ ಗಂಟೆಗೆ ೫೦ ಸಾವಿರ ಕಿಲೊ­ಮೀಟರ್ ವೇಗವನ್ನು ಕೊಟ್ಟಿದ್ದೇ ಒಂದು ಮಹಾನ್ ಸಾಧನೆಯಾಗಿತ್ತು.

ಎಂಟು ವರ್ಷಗಳ ಅಷ್ಟು ದೂರದ ಪಯಣ­ದಲ್ಲಿ ಇಂಧನ ತೀರಿ ಹೋಗಬಾರದಲ್ಲ? ಅದಕ್ಕೇ ಕೊನೆಯ ಮೂರು ವರ್ಷಗಳ ಕಾಲ ರೊಸೆಟ್ಟಾದ ಬ್ಯಾಟರಿಗಳನ್ನೆಲ್ಲ ಬಂದ್ ಮಾಡಿ ಅದು ನಿದ್ರಾಸ್ಥಿತಿ­ಯಲ್ಲೇ ಸಾಗುವಂತೆ ಮಾಡಿ, ಕಳೆದ ಜನವರಿ­ಯಲ್ಲಿ ಅದನ್ನು ಮತ್ತೆ ಎಬ್ಬಿಸಿದ್ದೂ ಒಂದು ರೋಚಕ ಅಧ್ಯಾಯವೇ ಆಗಿತ್ತು. ಅದರ ವಿವರ­ಗಳನ್ನು ಜನವರಿ ೩೧ರ ಇದೇ ಅಂಕಣದಲ್ಲಿ ದಾಖಲಿಸಲಾಗಿದೆ. ಒಂದು ಕಾರಿನಷ್ಟು ದೊಡ್ಡ­ದಾದ ರೊಸೆಟ್ಟಾ ನೌಕೆ ಬಾಣದಂತೆ ಸಾಗುತ್ತಿ­ರುವ ಚೂರಿಯನ್ನು ಅಟ್ಟಿಸಿಕೊಂಡು ಹೊರ­ಟಿದ್ದು, ಚೂರಿಯನ್ನು ಸಮೀಪಿಸಿ ಅದರ ಸುತ್ತ ಪ್ರದಕ್ಷಿಣೆ ಹೊಡೆಯುತ್ತ, ತನ್ನ ಉದರದಲ್ಲಿರುವ ವಾಷಿಂಗ್ ಮಷಿನ್ ಗಾತ್ರದ ‘ಫೈಲೀ’ಯನ್ನು ಇಳಿಸಲು ಸಿದ್ಧತೆ ನಡೆಸಿದ್ದು ಎಲ್ಲವೂ ಕಳೆದ ಎರಡು ತಿಂಗಳಿನಿಂದ ವರದಿಯಾಗುತ್ತ ಕೊನೆಯ ಕ್ಷಣ­ಕ್ಕಾಗಿ ಎಲ್ಲರೂ ಕಾದು ಕೂತಿರುವಂಥ ಕಾತರತೆ­ಯನ್ನು ಉಂಟು ಮಾಡಿತ್ತು.

ಅಂತರ­ಜಾಲ­­ದಲ್ಲಿ ಅದರ ನೇರ ಪ್ರಸಾರವನ್ನು ನೋಡಲು ವ್ಯವಸ್ಥೆ ಮಾಡಲಾಯಿತು. ರೊಸೆಟ್ಟಾ ಇನ್ನೇನು ಹತ್ತಿರ ಬಂದಾಗ ಧೂಮಕೇತುವಿನಿಂದ ದುರ್ವಾಸನೆ ಬರುತ್ತಿದೆ ಎಂಬ ವರದಿ ಬಂತು. ತೀರಾ ಅಂದರೆ ತೀರಾ ಅಲ್ಪ ಪ್ರಮಾಣದಲ್ಲಿ ಬೆಕ್ಕಿನುಚ್ಚೆ, ಬೆಳ್ಳುಳ್ಳಿ ಮತ್ತು ಕೊಳೆತ ಮೊಟ್ಟೆಯ ಮಿಶ್ರಿತ ವಾಸನೆ ಹೊಮ್ಮುತ್ತಿದೆ ಎಂದು ಕೇಳಿ ಹಲವರು ಆನಂದತುಂದಿಲರಾದರು. ಅದು ಜೀವಿಗಳಿದ್ದಲ್ಲಿ ಹೊಮ್ಮುವ ವಾಸನೆ ತಾನೆ? ಅಂತೂ ಫೈಲೀಯ ಧೂ–-ಸ್ಪರ್ಶಕ್ಕೆ ಭೂಮಿ ಕಾದಿತ್ತು. ಫೈಲೀ ಇನ್ನೇನು ಮೆಲ್ಲಗೆ ಧೂಮಕೇತುವಿನ ಮೇಲೆ ಇಳಿಯಬೇಕು. ಉದ್ದನ್ನ ಕೊಕ್ಕೆಯ ಮೂಲಕ ಅದನ್ನು ಇಳಿಬಿಡುವ ಯೋಜನೆ ಇತ್ತು. ಆದರೆ ಎಷ್ಟೇ ಯತ್ನಿಸಿದರೂ ಕೊಕ್ಕೆ ಹೊರಕ್ಕೆ ಚಾಚಿಕೊಳ್ಳಲಿಲ್ಲ. ಎರಡನೆಯ ಉಪಾಯವಾಗಿ ಫೈಲೀಯನ್ನು ಹಾಗೇ ಕಳಚಿ ಧುಮುಕಿಸಬೇಕು.

ನಿಧಾನ ಬೀಳುವಂತೆ ಅದರ ಬೆನ್ನಿಗೆ ರಾಕೆಟ್ ಉರಿಯಬೇಕಿತ್ತು. ಅದೂ ಹೊತ್ತಿಕೊಳ್ಳಲಿಲ್ಲ.  ಬೀಳಿಸುವುದೇ ಅಂತಿಮ ಉಪಾಯವಾದಾಗ ಬಿದ್ದರೆ ಆಘಾತವಾಗದ ಹಾಗೆ ಮೂರು ಕಾಲು­ಗಳನ್ನು ಜೋಡಿಸಲಾಗಿತ್ತು. ಏಕೆಂದರೆ ಗಾಳಿಯೇ ಇಲ್ಲದ ತಾಣದಲ್ಲಿ ನೇರ ಧುಮುಕಿದರೆ ಇಡೀ ಯಂತ್ರ ಅಪ್ಪಚ್ಚಿ ಆಗುವ ಸಂಭವ ಇರುತ್ತದೆ. ಸದ್ಯ, ಫೈಲೀ ಕಾಲುಗಳು ಮುಂಚಾಚಿಕೊಂಡವು. ಅದು ಕೆಳಕ್ಕೆ ಧುಮುಕಿತು. ಧುಮುಕಿ ಕುಪ್ಪಳಿಸಿತು. ಇತ್ತ ಜರ್ಮನಿ ಮತ್ತು ಫ್ರಾನ್ಸ್‌­ಗಳಲ್ಲಿದ್ದ ನಿಯಂತ್ರಣ ಕೇಂದ್ರಗಳಲ್ಲಿ ಕಾದು ಕೂತಿದ್ದ ತಜ್ಞರೂ ಕುಪ್ಪಳಿಸಿ ಕುಣಿದರು. ಎಲ್ಲೆಲ್ಲೂ ಭಾರೀ ಚಪ್ಪಾಳೆ. ಸಂಭ್ರಮದ ಟ್ವೀಟ್‌­ಗಳು ಜಗತ್ತಿಗೆಲ್ಲ ಪಸರಿಸಿದವು. ಫೇಸ್‌ಬುಕ್‌ನಲ್ಲಿ ಅಭಿನಂದನೆಗಳ ಸುರಿಮಳೆ. ಚರ್ಚೆಯ ಜಡಿಮಳೆ.

ಮುಂದಿನ ವರದಿ ಬಂದಾಗ ಫೈಲೀಯ ಒಂದು ಕಾಲು ಮುರಿದಿರುವುದು ಗೊತ್ತಾಯಿತು. ಸುರಕ್ಷಿತ­­ವಾಗಿ ಇಳಿದಿದ್ದೇನೊ ನಿಜ. ಆದರೆ ಅಲ್ಲೊಂದು ತಮಾಷೆ ನಡೆಯಿತು. ನೆಲವನ್ನು ಮುಟ್ಟಿದ ಫೈಲೀಯನ್ನು ಅಲ್ಲೇ ಕಚ್ಚಿ ಹಿಡಿಯು­ವಷ್ಟು ಗುರುತ್ವ ಶಕ್ತಿ ಚೂರಿಗೆ ಇರಲಿಲ್ಲ. ಹಾಗಾಗಿ ಕೆಳಕ್ಕೆ ಬಿದ್ದ ಫೈಲೀ ಮತ್ತೆ ಮೇಲಕ್ಕೆ ನೆಗೆಯಿತು. ಬಲೂನಿನ ಮೇಲೆ ಅಕ್ಕಿಕಾಳು ಬಿದ್ದು ಮೇಲಕ್ಕೆ ಚಿಮ್ಮಿದ ಹಾಗೆ. ಅಲ್ಲಿನ ಗುರುತ್ವ ಬಲ ಅದೆಷ್ಟು ದುರ್ಬಲ ಅಂದರೆ, ಮನುಷ್ಯನೇ­ನಾ­ದರೂ ಚೂರಿಯ ಮೇಲೆ ನಿಂತು ಜೋರಾಗಿ ಮೇಲಕ್ಕೆ ನೆಗೆದರೆ ಆತ ಬಾಹ್ಯಾಕಾಶಕ್ಕೇ ಏರಿ­ಬಿಡುತ್ತಾನೆ. ಮೇಲಕ್ಕೆ ಚಿಮ್ಮಿದ ಫೈಲೀ ಎರಡು ಗಂಟೆಗಳ ನಂತರ ಮೆಲ್ಲಗೆ ಎರಡನೆಯ ಬಾರಿ ಕೆಳಕ್ಕೆ ಬರುವಷ್ಟರಲ್ಲಿ ಧೂಮಕೇತು ತನ್ನ ಮಗ್ಗುಲನ್ನು ಬದಲಿಸಿತ್ತು.

ಅದು ಮಗುಚಿದ್ದ­ರಿಂದ ಫೈಲೀ ನಿಗದಿತ ತಾಣಕ್ಕಿಂತ ಅರ್ಧ ಕಿ.ಮೀ. ಆಚೆ ಹೋಗಿ ಬಿತ್ತು. ಮತ್ತೆ ಮೇಲಕ್ಕೆ ನೆಗೆಯಿತು. ಅಂತೂ ಕಪ್ಪೆಯಂತೆ ಕುಪ್ಪಳಿಸುತ್ತ ಮೂರನೇ ಬಾರಿ ಲ್ಯಾಂಡಿಂಗ್ ಆದಾಗ ಕೆಳಕ್ಕಿನ ‘ನೆಲ’ ಇನ್ನಷ್ಟು ಆಚೆ ಸರಿದಿತ್ತು. ಫೈಲೀ ಈ ಬಾರಿ ಕಮರಿಯ ಪಕ್ಕದ ಬಂಡೆಯೊಂದಕ್ಕೆ ವಾಲಿ­ಕೊಂಡು ನಿಂತಿತು. ಅಂದಹಾಗೆ, ಧೂಮಕೇತು­ಗಳ ಮೇಲೂ ಕಮರಿ ಇರುತ್ತದೆ. ನಮ್ಮ ಇಷ್ಟಗಲದ ಚಾರ್ಮಾಡಿ ರಸ್ತೆಯ ಮಧ್ಯದಲ್ಲೇ ಇಲ್ಲವೆ ಆಳ ಹೊಂಡಗಳು? ಕೊಕ್ಕೆಯಿಂದ ಆ ಫೈಲೀಯನ್ನು ಇಳಿಸಿದ್ದಿದ್ದರೆ ಕುಪ್ಪಳಿಕೆಯನ್ನು ತಡೆಯಬಹುದಿತ್ತು. ನಿಗದಿತ ತಾಣದಲ್ಲೇ ಸ್ಥಿರವಾಗಿ ನಿಲ್ಲುವಂತೆ ಹಿಡಿದಿಡ­ಬಹುದಿತ್ತು.

ಇಂಥ ಭಾನಗಡಿಗೆ ಅವಕಾಶ ಇರುತ್ತಿರಲಿಲ್ಲ. ಅದೃಷ್ಟವಶಾತ್ ಆ ಫೈಲೀ ಪೆಟ್ಟಿಗೆಯೊಳಗಿನ ಹತ್ತು ಸಲಕರಣೆಗಳಲ್ಲಿ ಎಂಟು ಸುಸ್ಥಿತಿಯಲ್ಲಿದ್ದವು. ಎಲ್ಲವೂ ಸರಸರ ಕೆಲಸ ಆರಂಭಿಸಿದವು. ಸೌರ ಫಲಕವೂ ಬಿಚ್ಚಿಕೊಂಡಿತು. ಆದರೆ ಕಮರಿಯ ಆ ಭಾಗದಲ್ಲಿ ಬಿಸಿಲು ಬೀಳುವ ಸಮಯ ತೀರ ಕಮ್ಮಿ. ದಿನಕ್ಕೆ ಒಂದೂವರೆ ಗಂಟೆ ಅಷ್ಟೆ. ಫೈಲೀ ತನ್ನೊಳಗಿನ ಶಕ್ತಿ ಪೂರ್ತಿ ಉಡುಗಿ ಹೋಗುವ ಮೊದಲೇ ಎಲ್ಲ ಕೆಲಸಗಳನ್ನೂ ಮಾಡಿ ಮುಗಿಸಬೇಕು. ಪಾಪ ಅದು ಮಾಡುತ್ತಲೇ ಹೋಯಿತು. ಧೂಮಕೇತು­ವಿನ ನೆಲದ ಫೋಟೊ ತೆಗೆಯಿತು, ಗುರುತ್ವವನ್ನು ಅಳೆಯಿತು. ಕಾಂತಶಕ್ತಿಯನ್ನು ಅಳೆಯಿತು.

ತನ್ನ ಪಾದಧೂಲಿಯ  ಸಾಂದ್ರತೆ, ತಾಪಮಾನ, ನುಣುಪುತನವನ್ನೂ ಅಳೆಯಿತು. ಮೂಗರಳಿಸಿ ಅಲ್ಲಿನ ಕಾರ್ಬನ್, ಜಲಜನಕವೇ ಮುಂತಾದ ಸಾವಯವ ಕಣಗಳನ್ನು ಅಳೆಯಿತು. ಸೂಕ್ಷ್ಮ­ದರ್ಶಕ­ವನ್ನು ಬಿಡಿಸಿ, ಮರಳಿನ ಕಣಗಳ ಚಿತ್ರಣ ತೆಗೆಯಿತು. ಡ್ರಿಲ್ಲಿಂಗ್ ಮೂತಿಯನ್ನು ನೆಲಕ್ಕೆ ಒತ್ತಿ ಒಮ್ಮೆ ತಿರುವಿ ನಿಂತಿತು. ಲೆಕ್ಕಾಚಾರದ ಪ್ರಕಾರ ೨೩ ಸೆಂಟಿಮೀಟರ್ ಆಳಕ್ಕೆ ಕೊರೆಯಬೇಕಿತ್ತು. ಆದರೆ ಇಲ್ಲ, ಸಾಧ್ಯವಾಗುತ್ತಿಲ್ಲ; ಶಕ್ತಿ ಉಡುಗು­ತ್ತಿದೆ. ತಾನು ನಿಂತ ಬಂಡೆ ಆ ಭೂಮಿಯ ಮೇಲಿನ ಮರಳುಶಿಲೆಯಷ್ಟು (ಕೆಂಪುಕೋಟೆಯ ಕಲ್ಲಿನಷ್ಟು) ಗಟ್ಟಿ ಇದೆ. ಜೋರಾಗಿ ತಿರುವಿದರೆ ತಾನೇ ಸ್ವತಃ ಗಿರಗಿರ ಅನ್ನಬೇಕಾದೀತು. ‘ಸುಸ್ತಾಗಿದೆ ವಿರಮಿಸಲೆ?’ ಕೇಳಿತು.
ಎರಡು ದಿನಗಳ ಸತತ ಕಾರ್ಯಾಚರಣೆ ನಡೆಸಿ ಜರ್ಮನಿಯ ಡಾರ್ಮ್‌ಸ್ಟಾಟ್‌ನ ನಿಯಂತ್ರಣ ಕೊಠಡಿಯ ತಜ್ಞರೂ ಸುಸ್ತಾಗಿ­ದ್ದರು. ಆದರೂ ಸಂತಸದ ಹೊಗರಿನಲ್ಲಿ ಮಿಂದೆದ್ದಂತಿದ್ದರು.

ಅವರ ಉದ್ದೇಶ ಬಹುಪಾಲು ಯಶಸ್ವಿಯಾಗಿತ್ತು. ಹೆಚ್ಚೆಂದರೆ ಎರಡು ದಿನಗಳ ಕಾಲ ಫೈಲೀಯನ್ನು ದುಡಿಸಿಕೊಳ್ಳುವ ಇರಾದೆ ಅವರದಾಗಿತ್ತು. ಈಗ ಅಂಥ ನಿರಾಸೆಯೇನಿಲ್ಲ. ಫೈಲೀಯಲ್ಲಿ ಇನ್ನೂ ತುಸು ಶಕ್ತಿ ಉಳಿದಿದ್ದರೆ ಇನ್ನಷ್ಟು ಮಾಹಿತಿಗಳನ್ನು ಹೊರಕ್ಕೆಳೆಯ­ಬಹುದಿತ್ತು. ಮುಖ್ಯವಾಗಿ ಧೂಮಕೇತುವಿನಲ್ಲಿ ಜೀವಿಗಳ ಬೀಜಾಂಕುರಕ್ಕೆ ಬೇಕಾದ ಅಮೈನೊ ಆಮ್ಲ ಇದೆಯೇ ಎಂದು ನೋಡಬೇಕಿತ್ತು. ಬಿಸಿಲು ಬೀಳುವ ತಾಣಕ್ಕೆ ಆ ಕುಂಟಬಂಟನನ್ನು ಚಿಮ್ಮಿಸಲು ಸಾಧ್ಯವೆ? ಅಥವಾ ತಾನಾಗಿ ಬಿಸಿಲು ಬರುವವರೆಗೆ ಕಾದು ನೋಡೋಣವೆ? ಅಥವಾ ಶೋ ಮುಗಿಯಿತೆ?  ಮುಗಿದಿಲ್ಲ. ಸೂರ್ಯನತ್ತ ಚೂರಿ ಧಾವಿಸುತ್ತಲೇ ಇದೆ.

ಅದರ ಸುತ್ತ ಪ್ರದಕ್ಷಿಣೆ ಹಾಕುತ್ತ ಅದರೊಟ್ಟಿಗೆ ರೊಸೆಟ್ಟಾ ನೌಕೆಯೂ ಧಾವಿಸುತ್ತಿದೆ. ಸೂರ್ಯನ ಸಮೀಪ ಬಂದ ಹಾಗೆ ಧೂಮಕೇತುವಿನಿಂದ ಧೂಮ ಹೇಗೆ ಹೊರಡು­ತ್ತದೆ, ಆ ಆವಿಯಲ್ಲಿ ಏನೇನು ಕೆಮಿಕಲ್ ಇವೆ ಎಂಬುದನ್ನು ನೋಡುತ್ತ ಮೂಸುತ್ತ ಮುಂದಿನ ಆಗಸ್ಟ್‌ವರೆಗೂ ಅದು ವರದಿ ಮಾಡುತ್ತಲೇ ಇರುತ್ತದೆ. ಬಿಸಿ ಧೂಮಕೇತುವಿನ ಮೇಲೆ ತನ್ನ ಮುರುಕು ಕಾಲಿನ ಮೇಲೆ ನಿಂತ ಫೈಲೀಯ ಒಳಗಿನ ಸೂಕ್ಷ್ಮ ಸಲಕರಣೆಗಳೆಲ್ಲ ಕ್ರಮೇಣ ಕರಗುತ್ತವೆ. ಆಮೇಲೂ ಫೈಲೀ ಖಾಲಿ ಡಬ್ಬವಾಗಿ ಅಲ್ಲೇ ಒರಗಿರುತ್ತದೆ. ಅನಂತಕಾಲದವರೆಗೆ. ಧೂಮಕೇತುವಿನ ರಹಸ್ಯವನ್ನು ಭೂಮಿಗೆ ರವಾನಿಸಬೇಕಿದ್ದ ಫೈಲೀ ಭೂಮಿಯ ತುಣುಕು­ಗಳನ್ನು ಸೌರಲೋಕದ ಅಂಚಿಗೆ ಕೊಂಡೊಯ್ದು ನಿಲ್ಲಿಸುತ್ತದೆ.    

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.