ADVERTISEMENT

ಸಂಕ್ರಾಂತಿ ಆಚರಣೆ: ಸುಗ್ಗಿ ಸಂಭ್ರಮ ಮತ್ತೆ ಯಾವಾಗ?

ಜಿ.ಕೃಷ್ಣ ಪ್ರಸಾದ್
Published 9 ಜನವರಿ 2022, 2:24 IST
Last Updated 9 ಜನವರಿ 2022, 2:24 IST
ಸುಗ್ಗಿ ಸಂಭ್ರಮ
ಸುಗ್ಗಿ ಸಂಭ್ರಮ   

ಸಂಕ್ರಾಂತಿ ಮುಖ್ಯವಾಗಿ ಸುಗ್ಗಿ ಸಂಭ್ರಮದ ಆಚರಣೆ. ವರ್ಷಪೂರ ಕಾಳುಕೊಟ್ಟ ನಿಸರ್ಗಕ್ಕೆ ಕೃತಜ್ಞತೆ ಹೇಳುವ ಸಂದರ್ಭ. ಇತ್ತೀಚಿನ ವರ್ಷಗಳಲ್ಲಿ ಸಂಕ್ರಾಂತಿ ಆಚರಣೆ ಕೊನೆಯಾಗಿ, ಹಬ್ಬವಾಗಿ ಮಾರ್ಪಡುತ್ತಿದೆ. ಹಳ್ಳಿಗಳಲ್ಲೂ ಸಂಕ್ರಾಂತಿ ಎಳ್ಳು ಬೆಲ್ಲಕ್ಕಷ್ಟೆ ಸೀಮಿತವಾಗುತ್ತಿದೆ.

***

ಮು ಕ್ತವಾಯಿತು ಮಾಘಮಾಸದ ಕೊರೆವ ಶೀತಲ ಶಾಪವು
ತೀವ್ರತಪದಲಿ ಕೊಚ್ಚಿ ಹೋಯಿತು ಹಳೆಯ
ಜಡತೆಯ ಪಾಪವು
ಯೌವನೋದಯವಾಯಿತಿರಿಗೋ
ಕಣ್ಣು ತುಂಬುವ ರೂಪವು
ನೂರು ತರುವಿನ ತಳಿರ ಕೈಯಲಿ
ನೂರು ಹೂವಿನ ದೀಪವು

ADVERTISEMENT

ಈ ವರ್ಷದ ಮೈ ಕೊರೆವ ಚಳಿಗೆ ವಿದಾಯ ಹೇಳಿ, ಬೇಸಿಗೆಯ ಬರಮಾಡಿಕೊಳ್ಳುವ ಹೊತ್ತಲ್ಲಿ ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲುಗಳು ನೆನಪಾಗುತ್ತವೆ. ಸಂಕ್ರಾಂತಿ ಮುಖ್ಯವಾಗಿ ಸುಗ್ಗಿ ಸಂಭ್ರಮದ ಆಚರಣೆ. ವರ್ಷಪೂರ ಕಾಳುಕೊಟ್ಟ ನಿಸರ್ಗಕ್ಕೆ ಕೃತಜ್ಞತೆ ಹೇಳುವ ಸಂದರ್ಭ. ಇತ್ತೀಚಿನ ವರ್ಷಗಳಲ್ಲಿ ಸಂಕ್ರಾಂತಿ ಆಚರಣೆ ಕೊನೆಯಾಗಿ, ಹಬ್ಬವಾಗಿ ಮಾರ್ಪಡುತ್ತಿದೆ. ಹಳ್ಳಿಗಳಲ್ಲೂ ಸಂಕ್ರಾಂತಿ ಎಳ್ಳು ಬೆಲ್ಲಕ್ಕಷ್ಟೆ ಸೀಮಿತವಾಗುತ್ತಿದೆ.

ಸಂಕ್ರಾಂತಿ ಸುಗ್ಗಿ ಸಂಭ್ರಮದ ಹಬ್ಬ ಅರ್ಥಾತ್ ಕೃಷಿ ಆಚರಣೆ. ನಾಡಿನಾದ್ಯಂತ ಹತ್ತು ಹಲವು ತೆರನಾದ ಸುಗ್ಗಿ ಆಚರಣೆಗಳನ್ನು ಕಾಣಬಹುದು. ರಾಗಿ ಕಣದಲ್ಲಿ ನಡೆಯುವ ಸುಗ್ಗಿ ಸಂಭ್ರಮ ಒಂದು ಬಗೆಯಾದರೆ, ಉತ್ತರ ಕರ್ನಾಟಕದ ಜೋಳದ ಹೊಲದ ಸುಗ್ಗಿಯ ಸಿರಿಯೇ ಮತ್ತೊಂದು ತೆರನಾದದ್ದು. ಮಲೆನಾಡಿಗರ ಭತ್ತದ ಸುಗ್ಗಿ ಸೊಗಸೇ ಬೇರೆ.

ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಹೊಲಗದ್ದೆಗಳು ಸಂಕ್ರಾಂತಿಯ ಹೊತ್ತಿಗೆ ಬಟಾ ಬಯಲಾಗಿರುತ್ತವೆ. ಕುಯಿಲಾದ ಬೆಳೆ ಮೆದೆಯ ರೂಪ ತಾಳಿ ಸುಗ್ಗಿಗೆ ಸಿದ್ಧವಾಗಿರುತ್ತದೆ. ರೈತರು ನಿರಾಳವಾಗಿ ಸಂತೋಷಿಸುವ ಕಾಲವಿದು. ಅದಕ್ಕೆ ಕಾರಣವಾದ ಬಸವಣ್ಣನಿಗೆ ಕೃತಜ್ಞತೆ ಅರ್ಪಿಸಲು ರೈತ ಸಮುದಾಯ ಕಾತರದಿಂದ ಸಂಕ್ರಾಂತಿಗಾಗಿ‌ ಕಾಯುತ್ತದೆ.

ಸಂಕ್ರಾಂತಿ ಪ್ರಕೃತಿಯ ಮನ್ವಂತರ ಪ್ರತಿನಿಧಿಸುವ ಹಬ್ಬ ಕೂಡ. ಸೂರ್ಯ ಕರ್ಕಾಟಕ ರಾಶಿಯಿಂದ ಉತ್ತರಾಯಣದ ಮಕರ ರಾಶಿಯತ್ತ ತನ್ನ ದಿಕ್ಕು ಬದಲಿಸುವ ಪರಿವರ್ತನಾ ಕಾಲ. ಸಂಕ್ರಾಂತಿಯ ನಂತರ ಹಗಲಿನ ಕಾಲಾವಧಿ ಹೆಚ್ಚುತ್ತದೆ. ಶೂನ್ಯ ಮಾಸದಲ್ಲಿ, ಕೊರೆವ ಚಳಿಯಲ್ಲಿ ಜಡವಾಗಿದ್ದ ಮರಗಿಡಗಳಲ್ಲಿ ಎಲೆ ಉದುರಿ, ಹೊಸ ಚಿಗುರು ಬರಲಾರಂಭಿಸುತ್ತದೆ. ಶಿಶಿರ ಖುತುವಿನ ಆರಂಭ ಕೂಡ.

ಸಂಕ್ರಾಂತಿ ಅಪ್ಪಟ ಹಳ್ಳಿಗರ ಹಬ್ಬ. ಪ್ರದೇಶದಿಂದ ಪ್ರದೇಶಕ್ಕೆ ಸಂಕ್ರಾಂತಿಯ ಆಚರಣೆಯ ವಿಧಾನಗಳು ಬದಲಾಗುತ್ತಾ ಹೋಗುತ್ತವೆ. ಸಂಕ್ರಾಂತಿಗಿಂತ ಮುನ್ನವೇ ಕೊಡಗಿನ ಹುತ್ತರಿ ಹಬ್ಬ ಬರುತ್ತದೆ. ಹೊಸ ಭತ್ತವನ್ನು ಗದ್ದೆಯಿಂದ ತಂದು ಮನೆ ತುಂಬಿಸಿಕೊಳ್ಳುವ, ಮಳೆದೇವ ಇಗ್ಗುತಪ್ಪನಿಗೆ ಭಕ್ತಿಯಿಂದ ನಮಸ್ಕರಿಸುವ ಆಚರಣೆ.

ದಕ್ಷಿಣ ಕರ್ನಾಟಕದಲ್ಲಿ ಸಂಕ್ರಾಂತಿ ಸಂದರ್ಭದಲ್ಲಿ ದನಕರುಗಳ ಮೈ ತೊಳೆದು, ಮೈ ಮೇಲೆ ಅರಿಷಿಣ, ಕುಂಕುಮದಿಂದ ಚಿತ್ರ ಬರೆದು, ಕೊಂಬಿಗೆ ಬಣ್ಣ ಹಚ್ಚಿ, ರಂಗು ರಂಗಿನ ಬಲೂನು, ನವಿಲುಗರಿ ಕಟ್ಟಿ ಶೃಂಗರಿಸುತ್ತಾರೆ. ದೇವಲೋಕದ ಕಾಮಧೇನು ಭೂಮಿಗೆ ಇಳಿದಂತೆ ಭಾಸವಾಗುತ್ತದೆ.

ಇಳಿಸಂಜೆಗೆ ಊರ ಹೊರಗಿನ ರಸ್ತೆಯಲ್ಲಿ ಹುಲ್ಲು ಹರಡಿ, ಬೆಂಕಿ ಹಾಕಿ ದನಗಳನ್ನು ‘ಕಿಚ್ಚು’ ಹಾಯಿಸುತ್ತಾರೆ. ಹಳ್ಳಿಕಾರ್ ಹೋರಿಗಳು ಮೊದಲು ಬೆಂಕಿ ಹಾಯುತ್ತವೆ. ಬೆಂಕಿಯ ಕೆನ್ನಾಲಿಗೆಯ ನಡುವೆ ಜಿಗಿದು ಹೋಗುವ ಹೋರಿ ಮತ್ತು‌ ಅದರ ಮಾಲೀಕರಿಗೆ ಚಪ್ಪಾಳೆ, ಕೇಕೆಗಳ ಪುರಸ್ಕಾರ.

ನಂತರದ ಸರದಿ ಎತ್ತು ಮತ್ತು ಹಸುಗಳದು. ಕೊನೆಗೆ ಬರುವುದು ಕುರಿಗಳು! ಬೆಂಕಿ ನಂದಿದ ಕಿಚ್ಚನ್ನು ಹಾದು ದೂಳೆಬ್ಬಿಸುವ ಕುರಿಗಳು ನೆರೆದವರಲ್ಲಿ ನಗು ಉಕ್ಕಿಸುತ್ತವೆ. ದನ ಹಾಯ್ದ ಕಿಚ್ಚಿನ‌ ಬೂದಿಯನ್ನು ಸಂಗ್ರಹಿಸಿಕೊಂಡು ಹೋಗಿ ಕೊಟ್ಟಿಗೆಯಲ್ಲಿ ಚೆಲ್ಲಲಾಗುತ್ತದೆ.

ಮನೆಗೆ ಹಿಂತಿರುಗುವ ದನಕರುಗಳಿಗೆ ಮಂಗಳಾರತಿ ಮಾಡಿ, ಅವುಗಳ ಕಾಲು ಮುಟ್ಟಿ ನಮಸ್ಕರಿಸಿ ‘ಈ ವರ್ಷವೂ ನಮಗೆ ಹೆಗಲು ಕೊಡು ಬಸವಣ್ಣ’ ಎಂದು ಪ್ರಾರ್ಥಿಸುತ್ತಾರೆ. ಹಬ್ಬದ ತಿಂಡಿ ತಿನ್ನಿಸುತ್ತಾರೆ.

ಬೆಂಗಳೂರಿನ ಜಾಲಹಳ್ಳಿ, ಮೈಸೂರಿನ ಪಡುವಾರಹಳ್ಳಿಯಂಥ ನಗರದ ನಡುವೆ ಸಿಕ್ಕಿ ಬಿದ್ದ ಮೆಟ್ರೊ ಹಳ್ಳಿಗಳಲ್ಲಿ ಸಂಕ್ರಾಂತಿ ಆಚರಣೆ ಇವತ್ತಿಗೂ ಉಳಿದು ಬಂದಿದೆ. ಸಿಟಿಯ ಹೈಬ್ರಿಡ್ ಹಸುಗಳು, ತಮ್ಮ ಗುಡಾಣದಂತ ಹೊಟ್ಟೆ ಹೊತ್ತು ಬೆಂಕಿ ಹಾಯುವ ದೃಶ್ಯ ಕಾಮಿಡಿ ಟೈಮ್ಸ್‌ನ ನೆನಪು ತರಿಸುತ್ತದೆ.

ರಾಮನಗರ ಮತ್ತು ಮಂಡ್ಯದ ಕೆಲವು ಪ್ರದೇಶಗಳಲ್ಲಿ ಕಾಟುಮರಾಯನ ಪೂಜಿಸುವ ಸಂಪ್ರದಾಯವಿದೆ.‌ ಊರಿನ ಕೆರೆ, ಕುಂಟೆಯ ಬಳಿ ಹಸಿ ಜೇಡಿಮಣ್ಣಿನಿಂದ ಗೋಪುರದ ಆಕಾರದಲ್ಲಿ ಕಾಟುಮರಾಯನ ಮೂರ್ತಿ ಮಾಡುತ್ತಾರೆ. ಇದಕ್ಕೆ ಅರಿಷಿಣ- ಕುಂಕುಮ ಬಳಿದು ಕಾರೆಗಿಡದ ಮುಳ್ಳಿನ ಕೊಂಬೆ ನೆಟ್ಟು, ಮುಳ್ಳಿನ ತುದಿಗೆ ಉಗುನಿ ಹೂ ಸಿಕ್ಕಿಸುತ್ತಾರೆ. ಮಣ್ಣಿನ ಮೂರ್ತಿಯ ತಳಭಾಗದಲ್ಲಿ ಗೂಡು ಮಾಡಿ ದೀಪ ಹಚ್ಚಿಡುತ್ತಾರೆ. ಕಾಟುಮರಾಯನಿಗೆ ಪೂಜೆ ಮಾಡಿದ ನಂತರ ದನಗಳ ಮೆರವಣಿಗೆ ಆರಂಭವಾಗುತ್ತದೆ.

ಸಂಕ್ರಾಂತಿ ದಿನ ಸಗಣಿಯಿಂದ ಮಾಡಿದ ಪಿಳ್ಳೇರಾಯನಿಗೆ ತುಂಬೆ, ಉಗುನಿ, ಅಣ್ಣೆ ಹೂಗಳನ್ನು ಚುಚ್ಚಿ ಬಾಗಿಲಿನ ಎರಡೂ ಬದಿ ಅಂಟಿಸುವುದು ವಿಶೇಷ. ಜನಪದರ ದೃಷ್ಟಿಯಲ್ಲಿ ಬೆಳೆ-ಕಳೆ ಎಂಬುದರಲ್ಲಿ ಬೇಧ ಭಾವ ಇಲ್ಲ. ಇವರ ದೃಷ್ಟಿಯಲ್ಲಿ ಬೆಳೆಯಷ್ಟೇ ಕಳೆಗಳೂ ಪವಿತ್ರ. ನೆಲದ ಫಲವತ್ತತೆಯನ್ನು ಕಳೆಗಳು ಪ್ರತಿನಿಧಿಸುವುದರಿಂದ ಸಂಕ್ರಾಂತಿಯ ಆಚರಣೆಯಲ್ಲಿ ಅಣ್ಣೆ ಹೂವು ಮತ್ತು ಉಗನಿ ಹೂವಿಗೆ ವಿಷೇಷ ಪ್ರಾಶಸ್ತ್ಯ. ರೌಂಡ್ ಅಪ್ ಸುರಿದು ಕಳೆಗಳನ್ನು ನಾಮಾವಶೇಷ ಮಾಡುತ್ತಿರುವ ಹೊಸ ಪೀಳಿಗೆಯ ಕೃಷಿಕರಿಗೆ ಅಣ್ಣೆ ಹೂವು ಸಿಗುವುದು ದುರ್ಲಭವೇ!

ಸಂಕ್ರಾಂತಿಯ ದಿನದ ಅಡುಗೆ ಕೂಡ ವಿಶೇಷವೇ. ಅವರೆಕಾಯಿ, ಹಸಿ ಕಡಲೆಕಾಯಿ ಮತ್ತು ಗೆಣಸನ್ನು ಜೊತೆ ಸೇರಿಸಿ ಬೇಯಿಸಲಾಗುತ್ತದೆ. ದನಕರುಗಳಿಗೆ ಮೊದಲು ತಿನ್ನಿಸಿದ ನಂತರವೇ ಮನೆಯವರಿಗೆ ತಿನ್ನಲು ಸಿಗುತ್ತದೆ.

ಸಂಕ್ರಾಂತಿಯ ಸಂಭ್ರಮ ಒಂದೇ ದಿನಕ್ಕೆ ಮುಗಿಯುವುದಿಲ್ಲ. ಹಬ್ಬದ ನಂತರ ಹದಿನೈದು ದಿನಗಳ ಕಾಲ ಒಂದಲ್ಲ ಒಂದು ಊರಿನಲ್ಲಿ ‘ದನ ಓಡಿಸುವ’ ಆಚರಣೆ ಇರುತ್ತದೆ. ಊರಿನ ಪ್ರಮುಖ ಬೀದಿಯಲ್ಲಿ ದನಗಳನ್ನು ಓಡಿಸಲಾಗುತ್ತದೆ. ಬೀದಿಯ ಎರಡೂ ಬದಿ, ಸುತ್ತಲಿನ ಹತ್ತಾರು ಹಳ್ಳಿಗಳ‌ ಜನಸ್ತೋಮ ನೆರೆದಿರುತ್ತದೆ. ಮರಗಳ ಮೇಲೆ, ಮನೆಗಳ ಮಾಳಿಗೆಯ ಮೇಲೆ ಯುವಕರು ದಂಡು ನೆರೆಯುತ್ತದೆ.

ಸರದಿಯ ಪ್ರಕಾರ ದನಗಳನ್ನು ಬಿಡಲಾಗುತ್ತದೆ. ಇಕ್ಕಟ್ಟಾದ, ಅಂಕುಡೊಂಕಿನ‌ ಬೀದಿಯ ಕೊನೆಗೆ ನುಗ್ಗಿಬರುವ ದನವನ್ನು ಹಿಡಿಯಲು ಕಟ್ಟು ಮಸ್ತಾದ ಯುವಕರು ಕಾದು ನಿಂತಿರುತ್ತಾರೆ. ತಮಟೆ ಸದ್ದಿಗೆ, ಜನರ ಕೇಕೆ, ಗದ್ದಲಕ್ಕೆ ಬೆದರಿ ದಿಕ್ಕಾಪಾಲಾಗಿ ಓಡಿ ಬರುವ ದನದ ಕೊರಳಿಗೆ ಜೋತು ಬಿದ್ದು, ಮೂಗುದಾರ ಹಿಡಿದು ನಿಲ್ಲಿಸುವ ಕ್ಷಣಗಳನ್ನು ನೋಡುವುದೇ ಒಂದು ರೋಮಾಂಚನ. ಪ್ರತಿಷ್ಠೆ, ಹಣ ಕಟ್ಟುವ ಬಾಜಿ ಈ ಆಚರಣೆಯ ಭಾಗವಾಗಿರುವುದರಿಂದ ಹೊಡೆದಾಟಗಳೂ ಸಾಮಾನ್ಯ.

ಉತ್ತರ ಕರ್ನಾಟಕದ ಸಂಕ್ರಾಂತಿಯ ಸಂಭ್ರಮ ವಿಶಿಷ್ಟ ವಾದದ್ದು. ಹಬ್ಬದ ದಿನ ಮನೆ ಸ್ವಚ್ಛ ಮಾಡಿ, ಬಾಗಿಲಿಗೆ ಜೋಳದ ದಂಟು ಮತ್ತು ಮಾವಿನ ಎಲೆಗಳ ತೋರಣ ಕಟ್ಟಲಾಗುತ್ತದೆ. ಮನೆ ಮುಂದೆ ರಂಗೋಲಿ ಹಾಕಿ, ಅದರ ನಡುವೆ ಸಗಣಿಯ ಉಂಡೆ ಇಟ್ಟು ಹೂವಿನಿಂದ ಸಿಂಗರಿಸುತ್ತಾರೆ. ಸಿಹಿ ಅಡುಗೆ, ಎಳ್ಳು ರೊಟ್ಟಿ, ಪುಂಡಿ ಪಲ್ಲೆ ಅಡುಗೆ ಮಾಡುತ್ತಾರೆ. ದನಕರುಗಳಿಗೆ ಮೈತೊಳೆದು ಸಿಂಗರಿಸುತ್ತಾರೆ. ಅವುಗಳೊಟ್ಟಿಗೆ ಹೊಲಕ್ಕೆ ಹೋಗಿ, ಹಿಂಗಾರಿನ ಫಸಲಿಗೆ ಪೂಜೆ ಮಾಡುತ್ತಾರೆ. ಹೊಲದಲ್ಲೇ ಊಟ ಮಾಡುತ್ತಾರೆ. ಸಂಜೆ ಮನೆಗೆ ಬರುವಾಗ ಹೊಲದಿಂದ ಎಳ್ಳಿನ ಕಡ್ಡಿಗಳ ತರುತ್ತಾರೆ. ಅವನ್ನು ಮನೆಯ ಮುಂದೆ ಹರಡಿ, ಬೆಂಕಿ ಹಾಕುತ್ತಾರೆ. ದನಕರುಗಳನ್ನು ಬೆಂಕಿಯಲ್ಲಿ ಹಾಯಿಸಿ ಮನೆಗೆ ಬರಮಾಡಿಕೊಳ್ಳುತ್ತಾರೆ.

ದನಕರು ಇಲ್ಲದವರು ಹೊಳೆಗೆ ಹೋಗಿ, ಜಳಕ ಮಾಡಿ, ಮನೆಯಿಂದ ತಂದ ಬುತ್ತಿ ತಿಂದು, ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ಬರುತ್ತಾರೆ.

ಮರೆಯಾಗುತ್ತಿರುವ ಸೊಬಗುಸಂಕ್ರಾಂತಿಯ ಸೊಬಗು ಮೆಲ್ಲಗೆ ಕರಗುತ್ತಿದೆ‌‌. ಆಂಗಡಿಯ ಕೊಂಡು ತರುವ ಬಣ್ಣದ ಸಕ್ಕರೆ ಅಚ್ಚು, ಎಳ್ಳು ಬೆಲ್ಲದ ಪ್ಯಾಕೆಟ್, ಕಬ್ಬಿನ ತುಂಡು ನೆರೆಹೊರೆಯವರಿಗೆ ನೀಡುವುದೇ ಸಂಕ್ರಾಂತಿ ಎಂಬಂತಾಗಿದೆ. ವೈಭೋಗದ ಪ್ರದರ್ಶನವೇ ಸಂಕ್ರಾಂತಿಯ ಆಚರಣೆಯಾಗುತ್ತಿದೆ. ‘ಎಳ್ಳು ಬೆಲ್ಲ ತಿಂದು ಒಳ್ಳೆಯವರಾಗೋಣ’ ಎಂಬ ಸೂತ್ರಕ್ಕೆ ಮಾಧ್ಯಮಗಳು ಜೋತು ಬಿದ್ದಿರುವುದರಿಂದ, ಇಡೀ ದಿನ ಕಿರುತೆರೆಯಲ್ಲಿ ಹೊಸ ಸೀರೆ ಉಟ್ಟು ಸಂಭ್ರಮಿಸುವ ಸೀರಿಯಲ್ ನಾಯಕಿಯರು, ಪಂಚೆ, ಬಿಳಿ ಷರಟು ತೊಟ್ಟ ನಟರು ಕಾಣಸಿಗುತ್ತಾರೆ. ಪೊಂಗಲ್, ಎಳ್ಳು, ಬೆಲ್ಲದ ಅಚ್ಚು, ಕಬ್ಬು ಮಾತ್ರ ಇವರಿಗೆ ಸಂಕ್ರಾಂತಿಯ ಸಂಕೇತಗಳು. ಪ್ರಕೃತಿಯನ್ನು ಪ್ರತಿನಿಧಿಸುವ ಕಾಟುಮರಾಯ, ಪಿಳ್ಳೇರಾಯ, ಅಣ್ಣೆ ಸೊಪ್ಪು, ಪುಂಡೀಪಲ್ಲೆ ಇವರ ಕಣ್ಣಿಗೆ ಬೀಳುವುದಿಲ್ಲ.

ಸಂಕ್ರಾಂತಿ ಗ್ರಾಮೀಣರ ಹಬ್ಬ. ನಿಸರ್ಗ ಮತ್ತು ಜಾನುವಾರುಗಳ ಆರಾಧಿಸುವ ಹಲವಾರು ಬಗೆಯ ಆಚರಣೆಗಳು ಕನ್ನಡ ನಾಡಿನ ಉದ್ದಕ್ಕೂ ಚಾಲ್ತಿಯಲ್ಲಿವೆ. ಇವುಗಳ ಬದಲು ನಗರ ಸಂಸ್ಕೃತಿಯ ಎಳ್ಳು ಬೆಲ್ಲ ಸಂಕ್ರಾಂತಿಯ ಸಂಕೇತವಾಗುತ್ತಿರುವುದು ವಿಷಾದಕರ. ಈ ವರ್ಷ ವಾರಗಟ್ಟಲೆ ಬಿಡದೆ ಸುರಿದ ಮಳೆ ಕೃಷಿಕರನ್ನು ಕೆಂಗೆಡಿಸಿದೆ. ಹತ್ತಿ, ಶೇಂಗಾ, ಸೂರ್ಯಕಾಂತಿಯಂಥ ವಾಣಿಜ್ಯ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ರಾಗಿ, ಸಾವೆ, ಭತ್ತ ಮನೆ ಬಳಕೆಗೆ ಆದರೆ ಹೆಚ್ಚು ಎಂಬಂತಹ ಸ್ಥಿತಿ ಇದೆ. ಸುಗ್ಗಿಯ ಸಂಭ್ರಮವೇ ಕಾಣುತ್ತಿಲ್ಲ. ಈ ನಡುವೆ ಓಮೈಕ್ರಾನ್ ಅವಾಂತರ ಶುರುವಾಗಿದೆ.

ಸಂಕ್ರಾಂತಿ ಸಂಭ್ರಮವೂ ಇಲ್ಲ; ಬದುಕು ಕಟ್ಟಿಕೊಳ್ಳುವ ಭರವಸೆಯೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.