ADVERTISEMENT

ಅನ್ಯಾಯವಾದಾಗ ಧ್ವನಿ ಎತ್ತಲು ಹಿಂದೇಟು: ಬೇಸರ

ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗೆ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 9:51 IST
Last Updated 20 ಜುಲೈ 2017, 9:51 IST
ಹುಬ್ಬಳ್ಳಿಯಲ್ಲಿ ಬುಧವಾರ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯ ಪೀಠಾರೋಹಣದ 15ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಗುರುವಂದನೆ ಕಾರ್ಯಕ್ರಮವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸಸಿಗೆ ನೀರು ಹಾಕಿ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಆರ್.ಬಿ. ತಿಮ್ಮಾಪೂರ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಶಾಸಕ ಗೋವಿಂದ ಕಾರಜೋಳ ಇದ್ದರು
ಹುಬ್ಬಳ್ಳಿಯಲ್ಲಿ ಬುಧವಾರ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯ ಪೀಠಾರೋಹಣದ 15ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಗುರುವಂದನೆ ಕಾರ್ಯಕ್ರಮವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸಸಿಗೆ ನೀರು ಹಾಕಿ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಆರ್.ಬಿ. ತಿಮ್ಮಾಪೂರ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಶಾಸಕ ಗೋವಿಂದ ಕಾರಜೋಳ ಇದ್ದರು   

ಹುಬ್ಬಳ್ಳಿ: ‘ರಾಜ್ಯದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಬೇಕಾದ ಸಂದರ್ಭದಲ್ಲಿ ನಮ್ಮ ಸಮಾಜದ ಬಾಂಧವರಿಗೆ ಅನೇಕ ಸಲ ಅನ್ಯಾಯವಾಗಿದೆ. ಆಗ ನಮ್ಮವರೇ ಧ್ವನಿ ಎತ್ತುವುದಿಲ್ಲ’ ಎಂದು ಚಿತ್ರದುರ್ಗದ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಸ್ವಾಮೀಜಿಯ ಪೀಠಾರೋಹಣದ 15ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ನಗರದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ರಾಜಕೀಯವಾಗಿ ನಮ್ಮ ಸಮಾಜದವರು ಮುಂದೆ ಬಂದರೆ ಹೆಚ್ಚು ಸ್ಥಾನಮಾನ ಪಡೆಯಲು ಸಾಧ್ಯ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಮಾದಾರ ಸಮಾಜದ ಕನಿಷ್ಠ 15 ಜನರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕು’ ಎಂದು ಅವರು ಕರೆ ನೀಡಿದರು.

ಮಾಂಸ ಸೇವನೆಗೆ ವಿರೋಧವಿಲ್ಲ:  ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ಮಾತನಾಡಿ ‘ಮಾಂಸಹಾರ ಸೇವನೆ ಮಾಡುವವರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ. ಜನರ ಆಹಾರ ಸೇವನೆ ಬಗ್ಗೆ ಮಠಾಧೀಶರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಆಗ ಪ್ರತಿಕ್ರಿಯಿಸಿದ ಮಾದಾರ ಚನ್ನಯ್ಯ ಸ್ವಾಮೀಜಿ ‘ಮಾಂಸ ಸೇವನೆ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಇದರ ಬಗ್ಗೆ ಅವರವರೇ ನಿರ್ಧರಿಸಬೇಕು. ಪ್ರಾಣಿ ಹಿಂಸೆಯನ್ನು ಆದಷ್ಟು ಕಡಿಮೆ ಮಾಡಿ’ ಎಂದರು.

ಅಧಿವೇಶನಕ್ಕೆ ಆಗ್ರಹ: ‘ರಾಜ್ಯದಲ್ಲಿ ಹಲವಾರು ವಿಷಯಗಳಿಗೆ ಹಿಂದೆ ಜಂಟಿ ಅಧಿವೇಶನ ನಡೆದಿವೆ. ಅದೇ ರೀತಿ ಈಗ ಮಾದಾರ ಸಮಾಜಕ್ಕೆ ಒಳ ಮೀಸಲಾತಿ ನೀಡುವ ಕುರಿತು ಚರ್ಚಿಸಲು ಜಂಟಿ ಅಧಿವೇಶನ ನಡೆಸಿ ನಿರ್ಧಾರಕ್ಕೆ ಬರಬೇಕಾದ ಅನಿವಾರ್ಯತೆಯಿದೆ. ಮೀಸಲಾತಿ ಕುರಿತು ಮಾಧ್ಯಮಗಳಲ್ಲಿಯೂ ಹೆಚ್ಚು ಚರ್ಚೆ ನಡೆದಿಲ್ಲ.

ದಾಶಿವ ಆಯೋಗದ ಶಿಫಾರಸಿನಂತೆ ಈ ಸಮಾಜಕ್ಕೆ ಸಮಾನತೆ ಸಿಕ್ಕಿಲ್ಲ’ ಎಂದು ಕರ್ನಾಟಕ ಸಾಮರಸ್ಯ ವೇದಿಕೆಯ ಪದಾಧಿಕಾರಿ ವಾದಿರಾಜ ಬೇಸರ ವ್ಯಕ್ತಪಡಿಸಿದರು.
ಗ್ರಂಥ ಬಿಡುಗಡೆ: ಬಸವಮೂರ್ತಿ ಮಾದಾರ ಚನ್ನಯ್ಯ ಅವರ ಕುರಿತಾದ ಲೇಖನಗಳ ಸಂಗ್ರಹ ‘ಮೈತ್ರಿ ಭಾವದ ಬೆಳಕು’ ಗ್ರಂಥವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ಎಚ್‌. ಲಿಂಗಪ್ಪ ಅವರು ಗ್ರಂಥ ಸಂಪಾದನೆ ಮಾಡಿದ್ದಾರೆ. ಮಾಜಿ ಶಾಸಕ ಆಲ್ಕೋಡ್‌ ಹನುಮಂತಪ್ಪ , ಶಾಸಕ ದುರ್ಯೋಧನ ಐಹೊಳೆ, ಮಾಹಿತಿ ಆಯೋಗದ ಆಯುಕ್ತ ಕೃಷ್ಣಮೂರ್ತಿ, ಕೆ.ಪಿ.ಎಸ್‌.ಸಿ. ಮಾಜಿ ಅಧ್ಯಕ್ಷ ಗೋನಾಳ್‌ ಭೀಮಪ್ಪ, ದಲಿತ ಮುಖಂಡ ಎಂ. ಜಯಣ್ಣ ವಿವಿಧ ಜಿಲ್ಲೆಗಳ ಸಮಾಜದರು ಇದ್ದರು.

**

ಜಾತಿಗಣತಿ ವರದಿ ಸಿದ್ಧಮಾಡಲು ರಾಜ್ಯ ಸರ್ಕಾರ ₹ 180 ಕೋಟಿ ಖರ್ಚು ಮಾಡಿದೆ. ಆದರೆ ಅದನ್ನು ಬಿಡುಗಡೆ ಮಾಡಲು ಹಿಂದೇಟು ಏಕೆ?
ಜಗದೀಶ ಶೆಟ್ಟರ್‌
ವಿರೋಧ ಪಕ್ಷದ ನಾಯಕ

**

ಬಸವಣ್ಣನವರು ಸ್ಥಾಪಿಸಿದ ಧರ್ಮವೇ ಲಿಂಗಾಯತ ಧರ್ಮ. 33 ಕೋಟಿ ದೇವರನ್ನು ಪೂಜಿ ಸುವುದು ವೀರಶೈವರು. ಲಿಂಗಾಯ ತರು ಲಿಂಗ ಪೂಜೆ ಮಾತ್ರ ಮಾಡುತ್ತಾರೆ

ಗೋವಿಂದ ಕಾರಜೋಳ
ಶಾಸಕ, ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.