ADVERTISEMENT

ಚಿನ್ನದ ನಗೆ ಬೀರಿದ ಹಳ್ಳಿ ಹುಡುಗಿ ನಾಗವೇಣಿ

ಮಧುಸೂದನ ಮದ್ದೂರು
Published 1 ಜೂನ್ 2017, 6:12 IST
Last Updated 1 ಜೂನ್ 2017, 6:12 IST
ಚಿನ್ನದ ನಗೆ ಬೀರಿದ ಹಳ್ಳಿ ಹುಡುಗಿ ನಾಗವೇಣಿ
ಚಿನ್ನದ ನಗೆ ಬೀರಿದ ಹಳ್ಳಿ ಹುಡುಗಿ ನಾಗವೇಣಿ   
ಮದ್ದೂರು: ಪ್ರತಿಭೆಗೆ ಗ್ರಾಮೀಣ- ನಗರ ಎಂಬ ತಾರತಮ್ಯವಿಲ್ಲ. ಸಾಧಿಸಬೇಕೆಂಬ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಗ್ರಾಮೀಣ ಪ್ರದೇಶದ ಈ ಹುಡುಗಿಯೇ ಸಾಕ್ಷಿ.
 
14 ವರ್ಷ ವಯಸ್ಸಿನ ನಾಗವೇಣಿ ಈಚೆಗೆ ನಡೆದ ರಾಷ್ಟ್ರಮಟ್ಟದ ಕೊಕ್ಕೊ  ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ತಾಲ್ಲೂಕಿನ ಗಡಿಯಂಚಿನ ಕೊಕ್ಕರೆಬೆಳ್ಳೂರು ಗ್ರಾಮ ವಿಶ್ವ ಪ್ರಸಿದ್ಧ ಪಕ್ಷಿಧಾಮವಾಗಿಯೂ ಹೆಸರು ಪಡೆದಿದೆ. ಇದೀಗ ಈ ಗ್ರಾಮದ ಖ್ಯಾತಿ ಕ್ರೀಡಾ ಚಟುವಟಿಕೆಯಲ್ಲೂ ಮಿನುಗಿದೆ.
 
ಎ.ಎಸ್.ನಾಗವೇಣಿ ಕೊಕ್ಕರೆಬೆಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭಾರತೀಯ ಕೊಕ್ಕೊ ಫೆಡರೇಷನ್ ಆಯೋಜಿಸಿದ್ದ  ರಾಷ್ಟ್ರೀಯ ಸಬ್ ಜೂನಿಯರ್ ಕೊಕ್ಕೊ ಟೂರ್ನಿಯಲ್ಲಿ ಕರ್ನಾಟಕ ಪ್ರತಿನಿಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
 
ಕಳೆದ 30ವರ್ಷಗಳಿಂದ ಚಾಂಪಿಯನ್ ಪಾರಮ್ಯ ಮೆರೆದಿದ್ದ, ಮಹಾರಾಷ್ಟ್ರಕ್ಕೆ ಈ ಬಾರಿ ನಾಗವೇಣಿ ಸೋಲಿನ ರುಚಿ ತೋರಿಸಿದ್ದಾರೆ.  ಫೈನಲ್ಸ್ ಪಂದ್ಯದ ಕೊನೆಯ ಅವಧಿಯಲ್ಲಿ 1.5 ನಿಮಿಷಗಳವರೆಗೆ ಎದುರಾಳಿಗೆ ಚಳ್ಳೆಹಣ್ಣು ತಿನ್ನಿಸಿ ಗೆಲುವಿನ ನಗೆ ಬೀರಿದ್ದಾರೆ. 
 
ಕೊಕ್ಕರೆಬೆಳ್ಳೂರು ಸಮೀಪದ ಅರೆಕಾಲ್‌ದೊಡ್ಡಿ ಗ್ರಾಮದ ಕೃಷಿಕ ಶಂಕರ್  ಹಾಗೂ ಭಾಗ್ಯಮ್ಮ ದಂಪತಿಯ ಪುತ್ರಿಯಾದ ನಾಗವೇಣಿ, ಬಾಲ್ಯದಿಂದಲೂ ಆಟೋಟದಲ್ಲಿ ಸದಾ ಮುಂದು. ರಾಜ್ಯಮಟ್ಟದ ವಿವಿಧ ಕೊಕ್ಕೊ ಟೂರ್ನಿಗಳಲ್ಲಿ ಪ್ರಾಥಮಿಕ ಶಾಲಾ ವಿಭಾಗದಿಂದ ಜಿಲ್ಲೆಯನ್ನು 8ಕ್ಕೂ ಹೆಚ್ಚು ಬಾರಿ ಪ್ರತಿನಿಧಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿರುವುದು ಈಕೆಯ ಸಾಧನೆ. ಅಲ್ಲದೇ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಈಕೆ 600ಮೀ ಓಟದಲ್ಲಿ ಚಿನ್ನದ ಪದಕ ಪಡೆದಿರುವುದು ಇವರ ಇನ್ನೊಂದು ಸಾಧನೆ
 
ಕ್ರೀಡಾ ಕುಟುಂಬ:  ಅಚ್ಚರಿಯ ಸಂಗತಿಯೆಂದರೆ ಈಕೆಯ ಸಹೋದರಿ ಎ.ಎಸ್.ಶಾಲಿನಿ 8 ಬಾರಿ ರಾಷ್ಟ್ರೀಯ ಕೊಕ್ಕೊ ಟೂರ್ನಿಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಪಡೆದಿದ್ದಾರೆ. ಶಾಲಿನ ಇದೀಗ ಪ್ರಥಮ ಪಿಯುಸಿ ವ್ಯಾಸಂಗ ಮುಂದುವರಿಸಿದ್ದು, ಅಲ್ಲಿಯೂ ಅವರ ಕ್ರೀಡಾ  ಯಾತ್ರೆ ಮುಂದುವರಿದಿದೆ. 
 
‘ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್‌.ಟಿ.ಬಾಲಸುಬ್ರಹ್ಮಣ್ಯ ಅವರು ನಮಗೆ ಕೊಕ್ಕೊ ಆಟದಲ್ಲಿ ಉತ್ತಮ ತರಬೇತಿ ನೀಡಿದ್ದೇ ಈ ಸಾಧನೆಗೆ ಕಾರಣ.  ಅಕ್ಕ ಶಾಲಿನಿಯಂತೆ  ನಾನೂ ಕೊಕ್ಕೊದಲ್ಲಿ ಸಾಧನೆ ಮಾಡಬೇಕೆಂದು ಆಸೆ ಇತ್ತು. ಇದೀಗ ಆ  ಆಸೆ ಈಡೇರಿದೆ' ಎಂದು ನಾಗವೇಣಿ ತಮ್ಮ ಸಂತಸ ಹಂಚಿಕೊಂಡರು. 
 
ಮುಂದೆಯು ತನ್ನ ಕ್ರೀಡಾ ಸಾಧನೆ ಮುಂದುವರಿಸಬೇಕೆಂಬ ಹಂಬಲ ಹೊತ್ತಿರುವ ನಾಗವೇಣಿ ತನ್ನ ಕ್ರೀಡಾ ಸಾಧನೆ ಮೂಲಕ ಬೆಳ್ಳೂರಿನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಮಧುಸೂದನ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.