ADVERTISEMENT

ಜೆಡಿಎಸ್, ಬಿಜೆಪಿ ಪ್ರತಿಭಟನೆ

ಸಾಯಿಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ನ ಕ್ಯಾಲೆಂಡರ್‌ ವಿತರಣೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 8:44 IST
Last Updated 28 ಮಾರ್ಚ್ 2017, 8:44 IST
ಚಿಕ್ಕಬಳ್ಳಾಪುರ: ಶಾಸಕ ಡಾ.ಕೆ.ಸುಧಾಕರ್ ಅವರು ಮ್ಯಾನೇಜಿಂಗ್‌ ಟ್ರಸ್ಟಿ ಆಗಿರುವ ಸಾಯಿಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಹೊರತಂದಿರುವ ಹೊಸ ವರ್ಷದ ಕ್ಯಾಲೆಂಡರ್‌ನಲ್ಲಿ ಸರ್ಕಾರಿ ಯೋಜನೆಗಳನ್ನು ತಮ್ಮ ಸಾಧನೆಗಳು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದು, ಆ ಕ್ಯಾಲೆಂಡರ್‌ಗಳನ್ನು ನಗರಸಭೆ ಕಾರ್ಯಾಲಯದಲ್ಲಿ ಅಕ್ರಮವಾಗಿ ಹಂಚಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸೋಮವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
 
ಈ ವೇಳೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ‘ಈ ಹಿಂದಿನ ಸರ್ಕಾರಗಳ ಆಡಳಿತಾವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಶಾಸಕರು ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
 
ಇಂತಹ ಸುಳ್ಳು ಪ್ರಚಾರದ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ. ಸರ್ಕಾರಿ ಯೋಜನೆಗಳು ತಮ್ಮ ಖಾಸಗಿ ಟ್ರಸ್ಟ್‌ ಸಾಧನೆ ಎನ್ನುವಂತೆ ತೋರಿಸಿಕೊಳ್ಳುವ ಜತೆಗೆ ಅದರ ಪ್ರಸಾರಕ್ಕೆ ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು. 
 
ಜೆಡಿಎಸ್ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್‌ ಮಾತನಾಡಿ, ‘ಸಾರ್ವಜನಿಕರ ಸ್ವತ್ತಾಗಿರುವ ನಗರಸಭೆ ಕಾರ್ಯಾಲಯವನ್ನು ಶಾಸಕರ ಕಚೇರಿ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಾಸಕರ ಸುಳ್ಳುಗಳನ್ನು ಪ್ರಚಾರ ಮಾಡುವ ಕ್ಯಾಲೆಂಡರ್‌ಗಳನ್ನು ಹಂಚಿದ ಅಧಿಕಾರಿಗಳನ್ನು ಈ ಕೂಡಲೆ ಅಮಾನತು ಮಾಡಬೇಕು’ ಎಂದರು. 
 
ಕ್ಯಾಲೆಂಡರ್ ಹಂಚಿದ ಅಧಿಕಾರಿಗಳಿಗೆ ಈ ಕೂಡಲೇ ನಮ್ಮ ಎದುರೇ ನೋಟಿಸ್‌ ನೀಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ನಗರಸಭೆ ಆಯುಕ್ತ ಉಮಾಕಾಂತ್ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.