ADVERTISEMENT

ದುಶ್ಚಟಗಳಿಂದ ದೂರವಿರಿ– ಯುವಕರಿಗೆ ಸಲಹೆ

ಮೆರವಣಿಗೆ ಮೂಲಕ ಜಾಗೃತಿ l ವಿದ್ಯಾರ್ಥಿಗಳಿಂದ ಜಾಥಾ l ಕಾನೂನು ನೆರವು ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 6:08 IST
Last Updated 1 ಜೂನ್ 2017, 6:08 IST
ದುಶ್ಚಟಗಳಿಂದ ದೂರವಿರಿ– ಯುವಕರಿಗೆ ಸಲಹೆ
ದುಶ್ಚಟಗಳಿಂದ ದೂರವಿರಿ– ಯುವಕರಿಗೆ ಸಲಹೆ   

ಮಂಡ್ಯ: ‘ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯಪೂರ್ಣ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ ಸಲಹೆ ನೀಡಿದರು.

ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ವಿಶ್ವ ತಂಬಾಕು ರಹಿತ ದಿನದ ಆಚರಣೆ ಅಂಗವಾಗಿ ಬುಧವಾರ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಂಬಾಕು ಸೇವನೆಯಿಂದ ದೂರ ಇರಬೇಕು. ಅದು ಮನುಷ್ಯನ ಜೀನವನವನ್ನೇ ಸರ್ವನಾಶ ಮಾಡುತ್ತದೆ. ತಂಬಾಕು ಸೇನೆಯಿಂದ ಮಾರಕ ರೋಗಗಳು ಕಾಡುತ್ತವೆ. ಇದಿರಿಂದ  ಕುಟುಂಬದ ನೆಮ್ಮದಿ ಹಾಳಾಗುವುದು. ಅಲ್ಲದೇ ವ್ಯಕ್ತಿಯ ಗೌರವಕ್ಕೂ ಧಕ್ಕೆ ಉಂಟಾಗುತ್ತದೆ ಎಂದರು.

ಧೂಮಪಾನ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಅಪಾಯದ ಬೆಳವಣಿಗೆಯಾಗಿದೆ. ಕ್ಷಯ ರೋಗದಿಂದ ಶೇ 38, ಕ್ಯಾನ್ಸರ್‌ನಿಂದ ಶೇ 32, ಶ್ವಾಸಕೋಶ ಸಮಸ್ಯೆಯಿಂದ ಶೇ 31, ಹೃದಯಾಘಾತ ಹಾಗೂ ಶೇ 20 ಜನರು ಸಾವನ್ನಪ್ಪುತ್ತಿದ್ದಾರೆ. ಎಲ್ಲರೂ ಇದರ ಬಗ್ಗೆ ಅರಿವು ಹೊಂದಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಲೆಗಳ 100 ಮೀಟರ್ ಸುತ್ತಳತೆಯೊಳಗೆ ಯಾವುದೇ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂಬ ನಿಯಮ ಇದೆ. ಜೊತೆಗೆ ತಂಬಾಕು ಸೇವನೆಗೆ ಯಾವುದೇ ತೆರನಾದ ಪ್ರಚೋದನೆ ನೀಡುವ, ಜಾಹೀರಾತು ಮೂಲಕ ತಪ್ಪು ದಾರಿಗೆ ಎಳೆಯುವುದನ್ನು ನಿಷೇಧಿಸಲಾಗಿದೆ. ಸರ್ಕಾರದ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.

ಧೂಪಪಾನದ ಅಪಾಯ ಕುರಿತು  ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಂಘ– ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಬೇಕು. ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ತಂಬಾಕು ಸೇವನೆಯಿಂದ ದೂರ ಇರುವಂತೆ ಸಮಾಜಕ್ಕೆ ಸಂದೇಶ ಸಾರಬೇಕು ಎಂದು ಹೇಳಿದರು.

ADVERTISEMENT

ತಾಲ್ಲೂಕು ವೈದ್ಯಾಧಿಕಾರಿ ಜಿ.ಶಶಿಧರ್‌ ಬಸವರಾಜ್‌ ಮಾತನಾಡಿ ‘ಶಾಲಾ ಆವರಣ, ಧಾರ್ಮಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಹಾಗೂ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದನ್ನು ನಿರ್ಲಕ್ಷಿಸಿದರೆ ದಂಡ ಹಾಕಲಾಗುತ್ತಿದೆ.

ಧೂಮಪಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಲುಪಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಡಾ.ಬಿ.ಎಸ್.ಬಾಲಕೃಷ್ಣ, ಡಾ.ಎಂ.ಸಿ.ರೋಚನಾ, ಕೆ.ಶಿವಾನಂದ್ ಇದ್ದರು.
****
‘ಪ್ರತಿ 7 ಸೆಕೆಂಡಿಗೆ ಸಾವಿರ ಸಾವು ’
ಮದ್ದೂರು:
ತಂಬಾಕುಯುಕ್ತ ಉತ್ಪನ್ನಗಳ ಸೇವನೆಯಿಂದ ವಿಶ್ವದಲ್ಲಿ ಪ್ರತಿ 7 ಸೆಕೆಂಡಿಗೆ ಒಂದು ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಪಿ.ಗೌಡ ಆತಂಕ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಆಯೋಜಿಸಿದ್ದ ‘ವಿಶ್ವ ತಂಬಾಕು ವಿರೋಧಿ ದಿನಾಚರಣೆ’ ಮತ್ತು ಕಾನೂನು ನೆರವು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲೂ ಪ್ರತಿ ವರ್ಷ ತಂಬಾಕು ಪದಾರ್ಥಗಳ ಸೇವನೆಯಿಂದಾಗಿ ದಿನವೊಂದಕ್ಕೆ 2200 ಮಂದಿ ಸಾವನ್ನಪ್ಪುತ್ತಿದ್ದಾರೆ. ಮೊದಲು ಫ್ಯಾಷನ್‌ಗಾಗಿ ಆರಂಭಗೊಳ್ಳುವ ಸಿಗರೇಟು, ಗುಟ್ಕಾ ಇನ್ನಿತರ ತಂಬಾಕು ಪದಾರ್ಥಗಳ ಸೇವನೆ, ಬಳಿಕ ಚಟವಾಗಿ ಯುವಜನರನ್ನು ಕಾಡುತ್ತದೆ. ತಂಬಾಕುಯುಕ್ತ ಪದಾರ್ಥಗಳ ಸೇವನೆ ತ್ಯಜಿಸಿ ಆರೋಗ್ಯಯುಕ್ತ ಜೀವನ ನಡೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಸಿ.ಅಶೋಕ್‌ಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಬಿ.ವರದರಾಜು, ಸೋಮನಾಥ್, ಅಮುಲ್ ಜಯಕುಮಾರ್ ಹಿರೇಕುಡೆ ಮಾತನಾಡಿದರು.

ಸರ್ಕಾರಿ ಅಭಿಯೋಜಕರಾದ ಡಿ.ವೆಂಕಟಲಕ್ಷ್ಮಮ್ಮ, ಅನುಪಮಾ, ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಪುಟ್ಟಸ್ವಾಮಿ ಇದ್ದರು.

****
ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯ 

ಕೆರಗೋಡು: ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾರಕ ಕಾಯಿಲೆಗಳಿಗೆ ಬಲಿಯಾಗಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದು ಶಿಕ್ಷಕ ಲಕ್ಷ್ಮಣ್ ಬಹದ್ದೂರ್ ಹೇಳಿದರು.

ಸಮೀಪದ ಶಿವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ತಂಬಾಕಿನ ಉತ್ಪನ್ನಗಳಲ್ಲಿ ಸಾವಿರಾರು ವಿಷಕಾರಕ ರಾಸಾಯನಿಕಗಳಿದ್ದು, ದೇಹಕ್ಕೆ ಮಾರಕವಾಗಿವೆ. ದುಶ್ಚಟಗಳನ್ನು ತ್ಯಜಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಉಮಾಶಂಕರ್, ಪ್ರಭಾರ ಮುಖ್ಯಶಿಕ್ಷಕ ಎಸ್.ವಿಜಯಕುಮಾರ್, ಶಿಕ್ಷಕರಾದ ಡಿ.ಆರ್.ಈರಪ್ಪ, ಕೆ.ಆರ್.ಶಶಿಧರ, ಹನುಮಂತ ಪೂಜಾರ್, ರಾಘವೇಂದ್ರ, ದಯಾನಂದ ಇದ್ದರು.

ತಂಬಾಕಿನ ದುಷ್ಪರಿಣಾಮ; ಜಾಗೃತಿ ಜಾಥಾ
ಕೆರಗೋಡು:
ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ಆರೋಗ್ಯ ಶಾಸ್ತ್ರದ ವೈದ್ಯಕೀಯ ತರಬೇತಿ ವಿದ್ಯಾರ್ಥಿಗಳು ಬುಧವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಂಬಾಕು ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಜಾಥಾ ನಡೆಸಿದರು.

ಗ್ರಾಮದ ಬೀದಿಗಳಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ, ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳ ಬಗೆಗಿನ ಕರಪತ್ರವನ್ನು
ಹಂಚಿದರು.

ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ಹರೀಶ್, ಸಹ ಪ್ರಾಧ್ಯಾಪಕರಾದ ಡಾ.ವಿನಯ್, ಡಾ.ಸುಧೀರ್, ಡಾ.ಬಿಂದಿಯಾ, ಡಾ.ಸುಭಾಷ್ ಮತ್ತು ನಾಗರಾಜಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.