ADVERTISEMENT

ಬುದ್ಧನ ತತ್ವ ಎಲ್ಲರೂ ಪಾಲಿಸಲಿ: ಖರ್ಗೆ

ಶಹಾಪುರದ ದಮ್ಮಯಾತ್ರೆಯ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 11 ಮೇ 2017, 6:24 IST
Last Updated 11 ಮೇ 2017, 6:24 IST
ಬುದ್ಧನ ತತ್ವ ಎಲ್ಲರೂ ಪಾಲಿಸಲಿ: ಖರ್ಗೆ
ಬುದ್ಧನ ತತ್ವ ಎಲ್ಲರೂ ಪಾಲಿಸಲಿ: ಖರ್ಗೆ   
ಶಹಾಪುರ: ‘ಬುದ್ಧನ ಅನುಯಾಯಿಗಳಾದ ನಾವು ಒಗ್ಗಟ್ಟಿನ ತಾಕತ್ತು ಪ್ರದರ್ಶಿಸಬೇಕು. ಸಮಾಜವನ್ನು ಒಗ್ಗೂಡಿಸಿಕೊಂಡು ಅನ್ಯ ಸಮುದಾಯಗಳೊಂದಿಗೆ ಹೊಂದಾಣಿಕೆಯ ಜೀವನ ನಡೆಸುವುದು ಮುಖ್ಯ. ನಮ್ಮಲ್ಲಿರುವ ಸಣ್ಣತನ ಬದಿಗೊತ್ತಿ ಉದಾತ್ತ ಗುಣ ಅಳವಡಿಸಿಕೊಳ್ಳಬೇಕು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
 
ಇಲ್ಲಿನ ದಮ್ಮಗಿರಿಯ ಬುದ್ಧ ವಿಹಾರದಲ್ಲಿ ಬುಧವಾರ ಡಾ.ಬಿ.ಆರ್. ಅಂಬೇಡ್ಕರ್‌ ಅವರ 126ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿ ಕೊಂಡಿದ್ದ ದಮ್ಮಯಾತ್ರೆಯ ಸಮಾ ರೋಪ ಸಮಾರಂಭ ಹಾಗೂ  ಬುದ್ಧ ಪೂರ್ಣಿಮಾ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.
 
‘ಬುದ್ಧ ಪೂರ್ಣಿಮೆಯ ದಿನದಂದು ಉಚಿತ ಸಾಮಾಹಿಕ ವಿವಾಹ ಹಮ್ಮಿಕೊಂಡಿದ್ದು ಹೊಸ ಬೆಳಣಿಗೆಗೆ ನಾಂದಿಯಾಗಿದೆ.  ಅನವಶ್ಯಕವಾಗಿ ಅದ್ಧೂರಿ ಮದುವೆಯ ಹೆಸರಿನಲ್ಲಿ ಹಣ ವೆಚ್ಚಮಾಡಿ ಸಾಲಕ್ಕೆ ಗುರಿಯಾಗುವುದು ಬೇಡ. ನವ ದಂಪತಿ ಬಾಳ ಬಂಡಿ ಉತ್ತಮವಾಗಿ ಸಾಗಲಿ. ಮಕ್ಕಳಿಗೆ ಸಂಸ್ಕಾರ ನೀಡುವುದು ಮುಖ್ಯ’ ಎಂದರು.
 
‘ಬುದ್ಧ ಹಾಗೂ ಅಂಬೇಡ್ಕರ್‌ ಅವರ ಸಂದೇಶಗಳು ಹೆಚ್ಚು ಪ್ರಚಲಿತವಾಗಿರುವುದು ಸಮಧಾನ ತಂದಿದೆ. ದೇಶದ ಪ್ರಧಾನ ಮಂತ್ರಿಯವರು ವಿದೇಶದಲ್ಲಿ ನಮೋ ಬುದ್ಧ ಹಾಗೂ ಭೀಮಾಜೀ ಎನ್ನುತ್ತಿರುವುದು ತಡವಾಗಿಯಾದರೂ ಬೆಳಕಿಗೆ ಬಂದಿದೆ’ ಎಂದರು
 
ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ‘ಡಾ.ಅಂಬೇಡ್ಕರ್‌ ಅವರ ನ್ನು ದಲಿತ ಸಮುದಾಯಕ್ಕೆ ಸೀಮಿತ ಗೊಳಿಸಬಾರದು. ಅವರು ವಿಶ್ವ ನಾಯಕ ಹಾಗೂ ಮನುಕುಲದ ಅರಿವಿನ ಬೆಳಕನ್ನು ವಿಸ್ತರಿಸಿದ ದಾರ್ಶನಿಕರಾಗಿದ್ದಾರೆ. 
 
ಶೋಷಿತ ಸಮುದಾಯ ಮೂಢ ನಂಬಿಕೆ ಹಾಗೂ ಅಂಧಶ್ರದ್ಧೆಯಿಂದ ಹೊರಬರಬೇಕು. ಮಹಿಳೆಯರು ದೇವ ಸ್ಥಾನದ ಮುಂದೆ ಸಾಲುಗಟ್ಟಿ ನಿಲ್ಲುವಂತೆ ಗ್ರಂಥಾಲಯದ ಮುಂದೆ ಸಾಲಗಟ್ಟಿ ನಿಲ್ಲುವ ಶೈಕ್ಷಣಿಕ ಕ್ರಾಂತಿ ನಡೆಯಲಿ. ದಮ್ಮಯಾತ್ರೆ ಕೇವಲ ಯಾದಗಿರಿ ಜಿಲ್ಲೆಗೆ ಸೀಮಿತಗೊಳ್ಳದೆ ಇಡೀ ರಾಜ್ಯದ ಉದ್ದಗ ಲಕ್ಕೂ ಬುದ್ಧನ ಸಂದೇಶ ಸಾರಬೇಕು’ ಎಂದರು.
 
ಡಾ.ಅಂಬೇಡ್ಕರ್‌ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಾಬುರಾವ ಭೂತಾಳೆ, ಕೃಷ್ಣಾ ‘ಕಾಡಾ’ ಅಧ್ಯಕ್ಷ ಜಕ್ಕಪ್ಪ ಯಡವೆ, ಎಸ್‌ಎಎಸ್‌ಡಿಪಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟಸ್ವಾಮಿ, ಡಾ. ರಂಗರಾಜ ವನದುರ್ಗ, ರವಿ ಪಾಟೀಲ, ಮರಿಗೌಡ ಹುಲಕಲ್, ವೈ.ಪಿ. ಚಿಪ್ಪಾರ, ಭೀಮಬಾಯಿ ಮಲ್ಲಿರ್ಜುನ ಪೂಜಾರಿ, ಗಿರೆಪ್ಪಗೌಡ ಬಾಣತಿಹಾಳ, ಹುನುಮೇ ಗೌಡ ಬಿರಣಕಲ್, ಆರ್.ಚೆನ್ನಬಸು ವನದುರ್ಗ, ಇಬ್ರಾಹಿಂ ಶಿರವಾಳ,  ದೇವಿಂದ್ರಪ್ಪ ಗೌಡಗೇರಿ, ಹನುಮೇಗೌಡ ಮರಕಲ್, ಮಲ್ಲಣ್ಣ ಕಟ್ಟಿಮನಿ ಇದ್ದರು.
****
ಲಕ್ಷ್ಮಿಪುತ್ರ  ಜಾರಕಿಹೊಳಿ
ಶಹಾಪುರ:
‘ಗಟ್ಟಿ ಮನಸ್ಸಿನ ದೃಢ ನಿರ್ಧಾರದ ಲಕ್ಷ್ಮಿ ಪುತ್ರ ಸತೀಶ ಜಾರಕಿಹೊಳಿ ವೈಚಾರಿಕ ಹಾಗೂ ವೈಜ್ಞಾನಿಕವಾಗಿ ಚಿಂತನೆ ಮಾಡುವ ವ್ಯಕ್ತಿ. ಮೂಢ ನಂಬಿಕೆಯ ವಿರುದ್ಧ ಸಮರ ಸಾರಿದ್ದಾರೆ.
 
ರಾಹು, ಕೇತು ಕಾಲವನ್ನು ಬದಿಗೊತ್ತಿ  ಎಲ್ಲವೂ ಒಳ್ಳೆಯ ದಿನ  ಎನ್ನುವುದರ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಮೆಚ್ಚುಗೆ ತಂದಿದೆ. ಅಮಾವಾಸ್ಯೆ ಯ ದಿನ ಮಸಣದಲ್ಲಿ ಮಲಗಿದ್ದಾರೆ.

ಲಕ್ಷ್ಮಿ ಅವರನ್ನು ಬಿಟ್ಟು ಹೋಗಿದ್ದಾಳೆಯೇ?’ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.