ADVERTISEMENT

ಬೈಸಿಕಲ್‌ನಲ್ಲಿ ದೇಶ ಪರ್ಯಟನೆ !

ಎಂ.ರವಿ
Published 17 ಏಪ್ರಿಲ್ 2017, 6:00 IST
Last Updated 17 ಏಪ್ರಿಲ್ 2017, 6:00 IST
ಪಶ್ಚಿಮ ಬಂಗಾಳದ ಜಯದೇವ್‌ ರಾಹುತ್‌ ರಾಯ್‌ ಹುಬ್ಬಳ್ಳಿಯ ಸರ್ಕಿಟ್‌ ಹೌಸ್‌ ಆವರಣದಲ್ಲಿ ಭಾನುವಾರ ಕಂಡದ್ದು ಹೀಗೆ...
ಪಶ್ಚಿಮ ಬಂಗಾಳದ ಜಯದೇವ್‌ ರಾಹುತ್‌ ರಾಯ್‌ ಹುಬ್ಬಳ್ಳಿಯ ಸರ್ಕಿಟ್‌ ಹೌಸ್‌ ಆವರಣದಲ್ಲಿ ಭಾನುವಾರ ಕಂಡದ್ದು ಹೀಗೆ...   

ಹುಬ್ಬಳ್ಳಿ:  ಪ್ರಧಾನಿ ನರೇಂದ್ರ ಮೋದಿಯ ‘ಸ್ವಚ್ಛ ಭಾರತ ಅಭಿಯಾನ ಸಂದೇಶ’ದೊಂದಿಗೆ ದೇಶ ಪರ್ಯಟಣೆ ಮಾಡುತ್ತಿರುವ ಪಶ್ಚಿಮ ಬಂಗಾಳದ ಜಯದೇವ್‌ ರಾಹುತ್‌ ರಾಯ್‌ ಎಲ್ಲ ರಾಜ್ಯಗಳನ್ನು ಸುತ್ತುವ ಆಸೆ. ಈಗಾಗಲೇ 3,000 ಕಿ.ಮೀ. ಕ್ರಮಿಸಿರುವ ಅವರು ಒಟ್ಟು 20,000 ಕಿ.ಮೀ. ಕ್ರಮಿಸುವ ಗುರಿ ಹೊಂದಿದ್ದಾರೆ.ಹೂಗ್ಲಿ ಜಿಲ್ಲೆಯ ಚಂಪುದಾನಿ ನಗರದಲ್ಲಿ ಜೂಟ್‌ ಮಿಲ್‌ನಲ್ಲಿ ಕೆಲಸ ಮಾಡುವ 47ರ ಹರೆಯದ ಜಯದೇವ್‌ ರಾವುತ್‌ ರಾಯ್‌ ಅವರು ನರೇಂದ್ರ ಮೋದಿಯ ಸ್ವಚ್ಛ ಭಾರತ ಅಭಿಯಾನದಿಂದ ಪ್ರಭಾವಿತರಾದವರು. ಸೈಕಲ್‌ ತುಳಿಯುತ್ತಲೇ ಎಲ್ಲ ರಾಜ್ಯಗಳ ರಾಜಧಾನಿ ಮತ್ತು ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುತ್ತಿರುವ ಇವರು ಅಲ್ಲಿ ತಂಗುವ ಜೊತೆಗೆ ಸ್ಥಳೀಯರಿಗೆ ಸ್ವಚ್ಛತೆ ಪಾಠ ಹೇಳುತ್ತಿದ್ದಾರೆ.

‘ಬಹುತೇಕ ಮಂದಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ದೇಶದಲ್ಲಿ ಜನಿಸಿದ ಪ್ರತಿಯೊಬ್ಬರೂ ನೆಲ, ಜಲ ಎಲ್ಲವನ್ನು ಬಳಸಿಕೊಳ್ಳುತ್ತೇವೆ.   ಆದರೆ, ದೇಶಕ್ಕೆ ಮಾತ್ರ ಏನೂ ಕೊಡುಗೆ ನೀಡುವುದಿಲ್ಲ. ಪ್ರತಿ ಓಣಿ, ಮೊಹಲ್ಲಾ, ನಗರ ಗ್ರಾಮಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದೇ ಆದಲ್ಲಿ ದೇಶ ಸ್ವಚ್ಛಗೊಳ್ಳುವುದರಲ್ಲಿ ಸಂದೇಹ ಇಲ್ಲ. ಸ್ವಚ್ಛತೆ ಬಗ್ಗೆ ಅರಿವಿದ್ದರೂ ಅದನ್ನು ಅನುಷ್ಠಾನಗೊಳಿಸುತ್ತಿಲ್ಲ. ಸ್ವಚ್ಛತಾ ಸಂದೇಶ ಸಾರುವ ಸಲುವಾಗಿ ಸೈಕಲ್‌ ತುಳಿಯುತ್ತಿದ್ದೇನೆ’ ಎಂದು ಜಯದೇವ್‌ ರಾಹುತ್‌ ರಾಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಯೊಂದು ನಗರ ತಲುಪಿದಾಗ ಸರ್ಕಿಟ್‌ ಹೌಸ್‌ ಇಲ್ಲವೇ ಬಿಜೆಪಿ ಕಚೇರಿಯಲ್ಲಿ ತಂಗುತ್ತೇನೆ. ಬೆಳಿಗ್ಗೆ 8 ಗಂಟೆಗೆ ಸೈಕಲ್‌ ಏರಿದರೆ ಸಂಜೆ 5.30ರವರೆಗೂ ತುಳಿಯುತ್ತೇನೆ. ಚಹಾ ಮತ್ತು ನೀರು ಕುಡಿಯಲು ಆಗಾಗ್ಗೆ ನಿಲ್ಲಿಸುತ್ತೇನೆ. ಜೊತೆಗೆ ಜನನಿಬಿಡ ಪ್ರದೇಶಗಳಲ್ಲಿ ಬೈಸಿಕಲ್‌ ನಿಲ್ಲಿಸಿ ಸ್ವಚ್ಛತೆ ಬಗ್ಗೆ ತಿಳಿವಳಿಕೆ ನೀಡುತ್ತೇನೆ. ಫೆ. 26ರಂದು ಹೂಗ್ಲಿಯನ್ನು ಬಿಟ್ಟಿದ್ದೇನೆ. ಈಗಾಗಲೇ ಒಡಿಶ್ಸಾ, ಆಂಧ್ರಪ್ರದೇಶ, ತಮಿಳುನಾಡು ಪೂರ್ಣಗೊಳಿಸಿ ಕರ್ನಾಟಕ ರಾಜಧಾನಿ ಸುತ್ತಿ ಹುಬ್ಬಳ್ಳಿಗೆ ಬಂದಿದ್ದೇನೆ. ಮುಂದೆ ಗೋವಾ, ಮಹಾರಾಷ್ಟ್ರ, ಗುಜರಾತ್‌, ರಾಜಸ್ತಾನ, ಹರಿಯಾಣ ಸುತ್ತಿ ಅಕ್ಟೋಬರ್‌ಗೆ ನನ್ನೂರನ್ನು ಮುಟ್ಟುತ್ತೇನೆ’ ಎನ್ನುತ್ತಾರೆ ಅವರು.

ADVERTISEMENT

ಟ್ರ್ಯಾಕ್‌ ಸೂಟ್‌, ಟೀ ಶರ್ಟ್‌, ಟೋಪಿ, ಸಾದಾ ಕನ್ನಡಕ ಧರಿಸಿರುವ ಅವರು ಸಾಮಾನ್ಯ ಬೈಸಿಕಲ್‌ನಲ್ಲಿ ಪರ್ಯಟನೆ ಮಾಡುತ್ತಾರೆ. ಸೈಕಲ್‌ನ ಹಿಂಬದಿಗೆ ಎರಡು ಜೊತೆ ಬಟ್ಟೆ, ಅತ್ಯವಶ್ಯಕ ವಸ್ತುಗಳು ಇರುವ ಬ್ಯಾಗ್‌ ಬಿಟ್ಟರೆ, ಗಾಳಿ ತುಂಬುವ ಪಂಪ್‌ ಇದೆ. ಇವರ ದೇಶ ಸೇವೆಯನ್ನು ಮೆಚ್ಚಿ ಕೆಲವರು ನೀಡುವ ಹಣದಿಂದಲೇ ಊಟ–ತಿಂಡಿ ಹಾಗೂ ದಿನದ ಖರ್ಚನ್ನು ನಿಭಾಯಿಸುತ್ತಿದ್ದಾರೆ.

‘ಊರು ಬಿಟ್ಟು ಬಂದಾಗ ಅನೇಕ ತೊಂದರೆಗಳು ಎದುರಾಗುತ್ತವೆ. ಆದರೆ, ಗುರಿ ಬಿಟ್ಟು ಹೋಗುವುದಿಲ್ಲ. ನನ್ನ ಬಳಿ ಬ್ಯಾಂಕ್‌ ಖಾತೆ ಇದ್ದರೂ ಅದರಲ್ಲಿ ಹಣ, ಎಟಿಎಂ ಕಾರ್ಡ್‌ ಇಲ್ಲ. ಸಾರ್ವಜನಿಕರು ನೀಡುವ ಸಹಾಯಧನ ಬಳಸಿಕೊಂಡು ಗುರಿಯತ್ತ ಹೆಜ್ಜೆ ಹಾಕುತ್ತಿದ್ದೇನೆ’ ಎಂದು ರಾಹುತ್‌ ವಿವರಿಸಿದರು.ವಾಣಿಜ್ಯ ನಗರಿ ಹುಬ್ಬಳ್ಳಿಗೆ ಭಾನುವಾರ ಬಂದ ಅವರು ಬಿಜೆಪಿ ಕಾರ್ಯಕರ್ತ ರಾಮ್‌ ಪಾರೀಕ್‌ ಅವರನ್ನು ಸಂಪರ್ಕಿಸಿದರು. ಬಳಿಕ ಬಿಜೆಪಿ ಕಚೇರಿಗೆ ತೆರಳಿದ ಅವರಿಗೆ ಮೇಯರ್‌ ಡಿ.ಕೆ. ಚವ್ಹಾಣ, ಹುಬ್ಬಳ್ಳಿ–ಧಾರವಾಡ ಬಿಜೆಪಿ ಮಹಾನಗರ ಅಧ್ಯಕ್ಷ ನಾಗೇಶ ಕಲಬುರ್ಗಿ ಸೇರಿದಂತೆ ಹಲವರು ಅವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.