ADVERTISEMENT

ಸ್ವದೇಶಿ ಚಿಂತನೆಯ ಕೇಂದ್ರ ‘ಸ್ವಾಭಿಮಾನ’

ಸಾವಯವ, ಖಾದಿ, ಗೋವಿನ ಉತ್ಪನ್ನಗಳ ಭಂಡಾರ

ಚಂದ್ರಶೇಖರ ಆರ್‌.
Published 15 ಮೇ 2017, 5:29 IST
Last Updated 15 ಮೇ 2017, 5:29 IST
ಸ್ವದೇಶಿ ಚಿಂತನೆಯ ಕೇಂದ್ರ ‘ಸ್ವಾಭಿಮಾನ’
ಸ್ವದೇಶಿ ಚಿಂತನೆಯ ಕೇಂದ್ರ ‘ಸ್ವಾಭಿಮಾನ’   
ಕಲಬುರ್ಗಿ: ನೈಸರ್ಗಿಕವಾಗಿ ದೊರೆಯುವ ಸಾವಯವ ಉತ್ಪನ್ನಗಳನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ. ಹಿಂದಿನಿಂದಲೂ ಹಿರಿಯರು ಹೆಚ್ಚು ಹೆಚ್ಚು ನೈಸರ್ಗಿಕ ವಸ್ತುಗಳನ್ನು ಬಳಸುವಂತೆ ಸಲಹೆ ನೀಡುತ್ತಲೇ ಬಂದಿದ್ದಾರೆ. ಆದರೆ ಆಧುನಿಕತೆಗೆ ಮಾರುಹೋಗಿರುವ ಇಂದಿನ ಪೀಳಿಗೆ ನೈಸರ್ಗಿಕ ವಸ್ತುಗಳನ್ನು ಮೂಲೆಗುಂಪು ಮಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಸ್ವದೇಶಿ ಚಳವಳಿ ಹುಟ್ಟಿಕೊಂಡಿದೆ. 
 
ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ಪ್ರೇರೇಪಿಸುವುದು ಈ ಚಳವಳಿಯ ಉದ್ದೇಶ. ಸದ್ಯ ಸ್ವದೇಶಿ ಉತ್ಪನ್ನಗಳು ವ್ಯಾಪಕ ಪ್ರಚಾರದಲ್ಲಿವೆ. ಎಲ್ಲೆಡೆ ಸಾವಯವ ಉತ್ಪನ್ನಗಳು, ಗೋವಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. 
 
ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಪ್ರೇರೇಪಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದೆ ನಗರದ ‘ಸ್ವಾಭಿಮಾನಿ ಸ್ವದೇಶಿ ಕೇಂದ್ರ’. ಇಲ್ಲಿನ ನೂತನ ವಿದ್ಯಾಲಯದ ಬಳಿ ಸಣ್ಣ ಮಳಿಗೆಯೊಂದರಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. 
 
ಸ್ವದೇಶಿ ಚಿಂತನೆಯ ಫಲವಾಗಿ ಸಮಾನ ಮನಸ್ಕ ಮೂವರು ಸೇರಿ ಈ ‘ಸ್ವದೇಶಿ ಕೇಂದ್ರ’ ಆರಂಭಿಸಿದ್ದಾರೆ. ಇಲ್ಲಿ ಗೋವಿನ ಉತ್ಪನ್ನಗಳು, ಪಂಚಗವ್ಯ, ವಿಭೂತಿ, ಖಾದಿ ಉತ್ಪನ್ನಗಳು, ಸಾವಯವ ಸಿರಿಧಾನ್ಯಗಳು ಲಭ್ಯ. 
 
‘ದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ದೇಶದ ವಿವಿಧೆಡೆಯ ಗೋಶಾಲೆಗಳಿಂದ ಗೋವಿನ ಉತ್ಪನ್ನಗಳು ಬರುತ್ತವೆ. ಉತ್ಪನ್ನಗಳನ್ನು ರಾಜ್ಯದ ವಿವಿಧೆಡೆ ಸೇರಿದಂತೆ ಮಹಾರಾಷ್ಟ್ರದ ಜಿಲ್ಲೆಗಳಿಗೆ ಮಾರಾಟ ಮಾಡಲಾಗುತ್ತದೆ’ ಎನ್ನುತ್ತಾರೆ ಕೇಂದ್ರದ ಮಾಲೀಕರಲ್ಲೊಬ್ಬರಾದ ಪ್ರಭು ಪಾಟೀಲ.
 
‘ದೇಶಿ ಚಳವಳಿಯ ಭಾಗವಾಗಿ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು, ಹೆಚ್ಚು ಉತ್ಪಾದಿಸಿ, ವ್ಯಾಪಕವಾಗಿ ಬಳಸುವಂತೆ ಉತ್ತೇಜನ ನೀಡುವುದು ಇದರ ಗುರಿ. ಇಲ್ಲಿ ಗೋಮೂತ್ರ ಸಂಬಂಧಿ ಉತ್ಪನ್ನಗಳು, ರಾಸಾಯನಿಕ ಬಳಸದೆ ಉತ್ಪಾದಿಸಿದ ಬೆಲ್ಲ,  ನೋವು ನಿವಾರಕ ಆಯುರ್ವೇದ ಔಷಧಗಳು, ಸಿರಿಧಾನ್ಯಗಳು ಸಿಗುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ದೇಶಿ ಉತ್ಪನ್ನಗಳನ್ನು ಬಳಸಿ ಆರೋಗ್ಯಕರ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯ’ ಎನ್ನುತ್ತಾರೆ ಅವರು.
****
‘ನಿರಾಮಯ’ ಆರೋಗ್ಯ ಶಿಬಿರ
ಕೇಂದ್ರದಿಂದ ತಿಂಗಳ 3ನೇ ಭಾನುವಾರ ‘ನಿರಾಮಯ’ ಎಂಬ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠದ ಸಹಯೋಗದಲ್ಲಿ ಶಿಬಿರ ಏರ್ಪಡಿಸಲಾಗುತ್ತದೆ. ಇಲ್ಲಿ ಮಧುಮೇಹ, ರಕ್ತದೊತ್ತಡ, ಉದರ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್‌ ಸೇರಿದಂತೆ ವಿವಿಧ ರೀತಿಯ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಪಂಚಗವ್ಯ, ಗೋಮೂತ್ರದ ಉತ್ಪನ್ನಗಳನ್ನು ಬಳಸಿ ಹಲವು ರೋಗಗಳನ್ನು ಗುಣಪಡಿಸಬಹುದು ಎಂಬ ಬಗ್ಗೆ ರಾಮಚಂದ್ರಾಪುರ ಮಠದ ತಜ್ಞರಿಂದ ಮಾಹಿತಿ ಮತ್ತು ಚಿಕಿತ್ಸೆ ನೀಡಲಾಗುತ್ತದೆ.
****
ಗೋವಿನ ಉತ್ಪನ್ನಗಳಿಗೆ ಒತ್ತು
ಗೋಶಾಲೆಗಳಿಗೆ ಪುನರ್ಜನ್ಮ ನೀಡುವ ಗುರಿಯೊಂದಿಗೆ ಗೋವಿನ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಉತ್ತೇಜನ ನೀಡಲಾಗುತ್ತದೆ. ಕುಸನೂರು, ಕಾಳಗಿ, ನ್ಯೂ ರಾಘವೇಂದ್ರ ಕಾಲೊನಿ ಸೇರಿದಂತೆ ಮಹಾರಾಷ್ಟ್ರ, ರಾಜಸ್ತಾನದ ಪ್ರಮುಖ ಗೋವಿನ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಸ್ವದೇಶಿ ಚಿಂತನೆಯ ಪುಸ್ತಕಗಳು, ಬೇವಿನ ಮರದ ಬಾಚಣಿಗೆ, ಖಾದಿ ಬಟ್ಟೆ, ದೇಹಕ್ಕೆ ತಂಪು ನೀಡಬಲ್ಲ ಲಾವಂಚ ಬೇರಿನಿಂದ ತಯಾರಿಸಲಾದ ಟೊಪ್ಪಿಗೆ, ಚಪ್ಪಲಿ ಸೇರಿದಂತೆ ವಿವಿಧ ಬಗೆಯ ನಾರಿನ ಉತ್ಪನ್ನಗಳೂ ಲಭ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.