ADVERTISEMENT

ಹಾಡಿಯ ಮಕ್ಕಳು ಶಾಲೆಯಿಂದ ವಂಚಿತ

ಮೈಸೂರು ಜಿಲ್ಲೆಯ 16 ಹಾಡಿಗಳಲ್ಲಿ 105 ಮಕ್ಕಳು ಶಾಲೆಯಿಂದ ಹೊರಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‌ ಅವರ ತವರು ಮೈಸೂರು ಜಿಲ್ಲೆಯ ಗಿರಿಜನ ಹಾಡಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಶಾಲಾ ವಂಚಿತ ಮಕ್ಕಳ ಸಮೀಕ್ಷೆ ನಡೆಸಿದ ಹುಣಸೂರಿನ ‘ಶಿಕ್ಷಣ ಮುಖೇನ ಪ್ರಗತಿ ಸಂಸ್ಥೆ’ಯು (ಡೀಡ್‌) ಅದರ ವರದಿಯನ್ನು ಮುಖ್ಯಮಂತ್ರಿ, ಶಿಕ್ಷಣ ಸಚಿವ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದೆ.

‘ಹುಣಸೂರು ತಾಲ್ಲೂಕಿನಲ್ಲಿ 50 ಹಾಡಿಗಳಿವೆ. ಈ ಪೈಕಿ 15 ಮತ್ತು ಎಚ್‌.ಡಿ. ಕೋಟೆ, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ತಲಾ ಒಂದು ಹಾಡಿಯಲ್ಲಿ ಸಮೀಕ್ಷೆ ನಡೆಸಿದಾಗ 105 ಮಕ್ಕಳು ಶಾಲೆಯಿಂದ ವಂಚಿತ ಆಗಿರುವುದು ಪತ್ತೆಯಾಗಿದೆ’ ಎಂದು ವರದಿಯಲ್ಲಿ  ಹೇಳಿದೆ.

ADVERTISEMENT

‘ಮೈಸೂರು ಜಿಲ್ಲೆಯಲ್ಲಿ ಒಟ್ಟಾರೆ 215 ಹಾಡಿಗಳಿವೆ. ಎಲ್ಲ ಹಾಡಿಗಳಲ್ಲಿ ಸಮೀಕ್ಷೆ ನಡೆಸಿದರೆ  ಹೆಚ್ಚಿನ ಮಕ್ಕಳು ಶಿಕ್ಷಣದಿಂದ ವಂಚಿತ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಸಮಗ್ರ ಸಮೀಕ್ಷೆ ನಡೆಸಿ, ಈ ವರ್ಷದಿಂದಲೇ ಮಕ್ಕಳಿಗೆ ಶಿಕ್ಷಣ ಒದಗಿಸ ಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದೆ.

‘ಹಾಡಿಯಲ್ಲಿರುವ ಆರು ವರ್ಷದೊಳಗಿನ ಮಕ್ಕಳು ಶಾಲೆ ಮೆಟ್ಟಿಲು ಹತ್ತುತ್ತಿಲ್ಲ. ಈಗಾಗಲೇ ಕೆಲ ವರ್ಷ ಶಾಲೆಗೆ ಹೋದ ಮಕ್ಕಳು ಈ ವರ್ಷ ಶಾಲೆಯಿಂದ ದೂರ ಉಳಿದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಹಲವು ದಿನಗಳಿಂದ ಮನವಿ ಮಾಡಲಾಗುತ್ತಿದೆ’ ಎಂದು ಡೀಡ್‌ ಸಂಸ್ಥೆ ಕಾರ್ಯದರ್ಶಿ ಎಸ್‌. ಶ್ರೀಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹುಣಸೂರು ತಾಲ್ಲೂಕಿನ ಮಂಗಳೂರು ಮಾಳ ಹಾಡಿಯಲ್ಲಿ 20 ಮತ್ತು ಮಹದೇವಪುರ ಹಾಡಿಯಲ್ಲಿ 12 ಮಕ್ಕಳು ಇದ್ದಾರೆ. ಆದರೆ, ಅಲ್ಲಿ ಶಾಲೆಯೇ ಇಲ್ಲ. ದೂರದ ಶಾಲೆಗಳಿಗೆ ಹೋಗಲು ಮಕ್ಕಳು ಹಿಂದೇಟು ಹಾಕುತ್ತಾರೆ. ಹಾಡಿ ಮಕ್ಕಳ ಭಾಷೆಯೂ ಭಿನ್ನವಾಗಿರುತ್ತದೆ. ಸಾಮಾನ್ಯ ಮಕ್ಕಳ ಜೊತೆ ಸೇರಿದಾಗ ಮುಜುಗರ ಅನುಭವಿಸುತ್ತಾರೆ. ಇದರಿಂದ ಅನೇಕ ಮಕ್ಕಳು ಶಾಲೆಗೆ ಹೋಗುತ್ತಿಲ್ಲ’ ಎಂದರು.

‘ಶಾಲೆಗೆ ಹೋಗದ ಮಕ್ಕಳನ್ನು ದನ ಕಾಯುವುದಕ್ಕೆ, ಕೃಷಿ ಕೆಲಸಕ್ಕೆ ಕಳುಹಿಸಲಾಗುತ್ತಿದೆ. ಹೀಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಬಾಲ ಕಾರ್ಮಿಕರು ಎಂದು ಗುರುತಿಸುವಂತೆ ಕಾರ್ಮಿಕ ಇಲಾಖೆಗೆ ಮನವಿ ಮಾಡಿದರೆ ಅವರು ಒಪ್ಪುತ್ತಿಲ್ಲ. ಈ ಮಕ್ಕಳು ಶಿಕ್ಷಣದ ಜೊತೆಗೆ ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ, ಸೈಕಲ್‌ನಂತಹ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದಾರೆ’ ಎಂದು ಶ್ರೀಕಾಂತ್ ಬೇಸರ ವ್ಯಕ್ತಪಡಿಸಿದರು.

***

ವಿಶೇಷ ಶಾಲೆ ಆರಂಭಿಸಿ
‘ಹಾಡಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದಾದರೆ ಪ್ರತಿ ಹತ್ತು ಮಕ್ಕಳಿಗೆ ಒಂದು ವಿಶೇಷ ಶಾಲೆ ಆರಂಭಿಸಬೇಕು. ಅಲ್ಲಿ ಶಿಕ್ಷಕರನ್ನು ನಿಯೋಜಿಸಿ ಎಲ್ಲ ಸೌಲಭ್ಯಗಳ ಸಮೇತ ಶಿಕ್ಷಣ ಒದಗಿಸುವ ಕೆಲಸ ಸರ್ಕಾರದಿಂದ ಆಗಬೇಕು’ ಎಂದು ಶ್ರೀಕಾಂತ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.