ADVERTISEMENT

ಕೆಎಸ್‌ಒಯು: ದಯಾಮರಣ ಕೋರಿ ಸಹಿ ಚಳವಳಿ

ವಿದ್ಯಾರ್ಥಿಗಳಿಂದ ರಾಷ್ಟ್ರಪತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 12:52 IST
Last Updated 11 ಫೆಬ್ರುವರಿ 2018, 12:52 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ (ಕೆಎಸ್‌ಒಯು) ಮಾನ್ಯತೆ ನೀಡದ ಕೇಂದ್ರ ಸರ್ಕಾರದ ಧೋರಣೆಗೆ ಬೇಸತ್ತಿರುವ ವಿದ್ಯಾರ್ಥಿಗಳು ದಯಾಮರಣ ಕೋರಿ ಸಹಿ ಸಂಗ್ರಹ ಚಳವಳಿ ಆರಂಭಿಸಿದ್ದಾರೆ.

‘ಸತತ ಮನವಿಯ ನಂತರವೂ ವಿ.ವಿ.ಗೆ ಮಾನ್ಯತೆ ದೊರಕಿಸಿಕೊಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ಪದವಿಯೂ ಇಲ್ಲದೇ, ಉದ್ಯೋಗವೂ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಹಾಗಾಗಿ, ನಮಗೆಲ್ಲಾ ದಯಾಮರಣ ನೀಡಬೇಕು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿ ಆರಂಭಿಸಿದ್ದಾರೆ.

‘2013ರಿಂದ ವಿ.ವಿ.ಗೆ ಮಾನ್ಯತೆ ಇಲ್ಲ. ಇದನ್ನೇ ನಂಬಿ ಬಂದ ನಮಗೆ ಅನ್ಯಾಯವಾಗಿದೆ. ಯಾರೋ ಮಾಡಿದ ತಪ್ಪಿಗೆ ನಾವೇಕೆ ಶಿಕ್ಷೆ ಅನುಭವಿಸಬೇಕು’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ADVERTISEMENT

‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹೆಸರನ್ನು ನೋಡಿ ನೋಂದಣಿ ಪಡೆದೆವು. ವಿ.ವಿ.ಯಲ್ಲಿ ಆಗುತ್ತಿದ್ದ ಅವ್ಯವಹಾರಗಳು ನಮಗೇನು ಗೊತ್ತು? ಮುಗ್ಧರಾದ ನಮ್ಮ ಮೇಲೇಕೆ ಗದಾಪ್ರಹಾರ ನಡೆಸಬೇಕು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಕೊಡಲಿ’ ಎಂದು ವಿದ್ಯಾರ್ಥಿ ಮುಖಂಡ ಪ್ರಶಾಂತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಇದೇ ಕಾರಣಕ್ಕೆ ನಾವು ಹಳದಿ ಬಣ್ಣದ ಅರ್ಜಿ ತಯಾರಿಸಿದ್ದೇವೆ. ಅದರಲ್ಲಿ ವಿದ್ಯಾರ್ಥಿಯ ಹೆಸರು, ನೋಂದಣಿ ಸಂಖ್ಯೆ, ನೋಂದಣಿ ವರ್ಷದ ಮಾಹಿತಿಯನ್ನು ತುಂಬಬೇಕು.

ಸಾಧ್ಯವಾದಷ್ಟು ವಿದ್ಯಾರ್ಥಿಗಳಿಂದ ಅರ್ಜಿ ಸಂಗ್ರಹಿಸಿ ರಾಷ್ಟ್ರಪತಿಗೆ ನೋಂದಾಯಿತ ಅಂಚೆ ಮೂಲಕ ಕಳುಹಿಸುತ್ತೇವೆ. ಅವರು ನಮಗೆ ನ್ಯಾಯ ದೊರಕಿಸಿಕೊಡಲಿ, ಇಲ್ಲವೇ ನೆಮ್ಮದಿಯ ಸಾವನ್ನಾದರೂ ಕೊಡಲಿ’ ಎಂದರು.

ಬಿಜೆಪಿ ಹುನ್ನಾರ: ‘ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳ ಮೂಲಕ ಕೆಎಸ್‌ಒಯು ಕೋರ್ಸ್‌ ನಡೆಸುತಿತ್ತು. ಆ ಖಾಸಗಿ ಸಂಸ್ಥೆಗಳಲ್ಲಿ ಬಹುತೇಕವು ಬಿಜೆಪಿ ನಾಯಕರ ಒಡೆತನದಲ್ಲಿವೆ. ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಿರುವ ಈ ಸಂಸ್ಥೆಗಳು ಪದವಿಯನ್ನೂ ಕೊಟ್ಟಿಲ್ಲ. ಕೆಎಸ್‌ಒಯುಗೆ ಮಾನ್ಯತೆ ಸಿಕ್ಕಿದರೆ, ಮತ್ತೆ ಕೋರ್ಸ್‌ ನಡೆಸಬೇಕಾಗುತ್ತದೆ. ಹಾಗಾಗಿ, ಮಾನ್ಯತೆ ದೊರಕದಂತೆ ಬಿಜೆಪಿಯ ಈ ರಾಜಕಾರಣಿ– ಉದ್ಯಮಿಗಳು ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಅವರ ಮೇಲೆ ಒತ್ತಡ ಹೇರಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.