ADVERTISEMENT

ಅತ್ಯಾಧುನಿಕ ಸೌಕರ್ಯ, ‘ಸುಭದ್ರ’ ನೆಲೆ!

ವೆಂಕಟೇಶ್ ಜಿ.ಎಚ್
Published 11 ಜನವರಿ 2017, 9:02 IST
Last Updated 11 ಜನವರಿ 2017, 9:02 IST
ಕಂಪ್ಯೂಟರ್ ಕೊಠಡಿಯಲ್ಲಿ ವಿದ್ಯಾರ್ಥಿನಿಯರು
ಕಂಪ್ಯೂಟರ್ ಕೊಠಡಿಯಲ್ಲಿ ವಿದ್ಯಾರ್ಥಿನಿಯರು   

ಬಾಗಲಕೋಟೆ: ಕಟ್ಟಡ ಪ್ರವೇಶಿಸುತ್ತಿದ್ದಂತೆಯೇ ಕೆಂಪು ಹಾಸಿನ ಸ್ವಾಗತ, ದಿನದ 24 ಗಂಟೆ ಬಿಸಿ ನೀರು, ಗುಣಮಟ್ಟದ ಊಟ, ಶುದ್ಧ ನೀರು, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಪ್ರೊಜೆಕ್ಟರ್‌ ಹಾಲ್‌, ಸೌರದೀಪದ ವ್ಯವಸ್ಥೆ, ಪ್ರತಿ ಕೊಠಡಿಗೆ ಎರಡು ಫ್ಯಾನ್‌, ಅಚ್ಚುಕಟ್ಟಾದ ಊಟದ ಕೋಣೆ, ಕಿಟಕಿಗಳಿಗೆ ಸೊಳ್ಳೆ ನಿಯಂತ್ರಣ ಪರದೆ, ಕ್ಯಾಂಪಸ್‌ಗೆ ಸಿ.ಸಿ ಟಿ.ವಿ ಕ್ಯಾಮೆರಾದ ಕಣ್ಗಾವಲು...

ಇದು ಇಲ್ಲಿನ ನವನಗರದ 46ನೇ ಸೆಕ್ಟರ್‌ನಲ್ಲಿರುವ  ಪರಿಶಿಷ್ಟ ಜಾತಿ ಮತ್ತು ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನ ಚಿತ್ರಣ.
ಸರ್ಕಾರಿ ಹಾಸ್ಟೆಲ್‌ಗಳೆಂದರೆ ಕೊರತೆಗಳ ಆಗರ ಎಂಬ ಕೂಗಿಗೆ ವ್ಯತಿರಿಕ್ತವಾಗಿ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವುದು ಇಲ್ಲಿನ ವೈಶಿಷ್ಟ್ಯ. ಸಮಾಜ ಕಲ್ಯಾಣ ಇಲಾಖೆ ಆಶ್ರಯದ ಈ ಹಾಸ್ಟೆಲ್‌ನಲ್ಲಿ ಸದ್ಯ 220 ವಿದ್ಯಾರ್ಥಿನಿಯರು ಇದ್ದಾರೆ. ಪಕ್ಕದ ಬೆಳಗಾವಿ, ರಾಯಚೂರು, ಕೊಪ್ಪಳ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ  ಪಡೆದಿದ್ದು, ಪಿಯುಸಿ, ಪಾಲಿಟೆಕ್ನಿಕ್‌, ನರ್ಸಿಂಗ್, ಪದವಿ, ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.

ಗುಣಮಟ್ಟಕ್ಕೆ ಒತ್ತು: ಹಾಸ್ಟೆಲ್‌ನ ಕಾರಿಡಾರ್‌ನಲ್ಲಿ ದೂಳು ಸಂಗ್ರಹವಾಗದಿರಲಿ ಎಂದು ಕೆಂಪು ಬಣ್ಣದ ಕಾರ್ಪೆಟ್‌ (ನೆಲಹಾಸು) ಹಾಸಲಾಗಿದೆ. ಅಡುಗೆ ಮನೆ, ಉಗ್ರಾಣ, ಸ್ನಾನಗೃಹ, ಶೌಚಾಲಯ ಹೀಗೆ ಎಲ್ಲಾ ಕಡೆ ಸ್ವಚ್ಛತೆಗೆ ಆದ್ಯತೆ. ಅಡುಗೆ ಕೋಣೆ ಹಾಗೂ ಹಾಸ್ಟೆಲ್‌ನ ಸ್ವಚ್ಛತೆಯ ಹೊಣೆಯನ್ನು ಆರು ಮಂದಿ ಮುಖ್ಯ ಅಡುಗೆಯವರು ಹಾಗೂ ಐವರು ಸಹಾಯಕರು ಸೇರಿ 11 ಮಂದಿಗೆ ವಹಿಸಲಾಗಿದೆ.

ನಿರಂತರ ಕಾಳಜಿ: ಹಾಸ್ಟೆಲ್‌ಗೆ ಇಬ್ಬರು ವಾರ್ಡನ್‌ ಇದ್ದು, ವಿದ್ಯಾರ್ಥಿನಿಯರ ಬಗ್ಗೆ ಕಾಳಜಿ ವಹಿಸುತ್ತಾರೆ. ಆಗಾಗ ತಜ್ಞರನ್ನು ಕರೆಸಿ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ಕೊಡಿಸುವ ಜೊತೆಗೆ ವರ್ಷಕ್ಕೆರಡು ಬಾರಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಗುತ್ತಿಗೆ ಆಧಾರದ ಮೇಲೆ ಶಿಕ್ಷಕಿಯೊಬ್ಬರನ್ನು ನೇಮಿಸಿ ಕಂಪ್ಯೂಟರ್ ತರಬೇತಿ ಕೊಡಿಸಲಾಗುತ್ತಿದೆ.

ಬಿಗಿ ಭದ್ರತೆ:  ಆರು ವರ್ಷಗಳ ಹಿಂದೆ ಈ ಹಾಸ್ಟೆಲ್ ನಿರ್ಮಿಸಲಾಗಿದೆ. ಬಾಲಕಿಯರ ಹಾಸ್ಟೆಲ್ ಆಗಿರುವ ಕಾರಣ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಸುಮಾರು ಆರು ಎಕರೆ ವಿಸ್ತೀರ್ಣವಿರುವ ಹಾಸ್ಟೆಲ್‌ ಕ್ಯಾಂಪಸ್‌ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಅದಕ್ಕೆ ಕಬ್ಬಿಣದ ಬೇಲಿಯ ರಕ್ಷಣೆ ನೀಡಲಾಗಿದೆ. ಪ್ರವೇಶ ದ್ವಾರದಲ್ಲಿ ಕಾವಲುಗಾರರ ಕೊಠಡಿ ಇದ್ದು, ದಿನದ 24 ಗಂಟೆ ಎರಡು ಪಾಳಿಯಲ್ಲಿ ನಾಲ್ವರು ಕಾವಲು ಕಾಯುತ್ತಾರೆ. ಜೊತೆಗೆ ನಿಷೇಧಿತ ಪ್ರದೇಶ ಎಂದು ಘೋಷಿಸಿದ ಫಲಕವನ್ನು ಕ್ಯಾಂಪಸ್ ಸುತ್ತಲೂ ಹಾಕಲಾಗಿದೆ.

ವಿದ್ಯಾರ್ಥಿನಿಯರು ಹೊರಗೆ ಹೋಗುವಾಗ, ಬರುವಾಗ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. ಜೊತೆಗೆ ಪ್ರತಿ ತಿಂಗಳು ಕಾಲೇಜಿನಿಂದ ಹಾಜರಾತಿ ಮತ್ತು ಪ್ರಗತಿ ವಿವರವನ್ನೂ ತರಿಸಿಕೊಳ್ಳಲಾಗುತ್ತದೆ. ಊರಿಗೆ ತೆರಳಬೇಕಾದರೆ ಪೋಷಕರಿಂದ ಪತ್ರ ಕೊಡಿಸಬೇಕು. ಅನುಮತಿ ಪಡೆಯದೇ ಹಾಸ್ಟೆಲ್‌ನಿಂದ ಹೊರಗೆ ಹೋಗಿ ತೊಂದರೆಯಾದಲ್ಲಿ ಅದಕ್ಕೆ ಹಾಸ್ಟೆಲ್ ಆಡಳಿತ ಹೊಣೆ ಅಲ್ಲ ಎಂದು ಪ್ರವೇಶ ನೀಡುವಾಗಲೇ ಪೋಷಕರಿಂದ ಮುಚ್ಚಳಿಕೆಪತ್ರ ಬರೆಸಿಕೊಳ್ಳಲಾಗುತ್ತದೆ. ಸಿಬ್ಬಂದಿಗೂ ಬಯೊ ಮೆಟ್ರಿಕ್ ಹಾಜರಾತಿ ವ್ಯವಸ್ಥೆ ಇದೆ. ಹಾಸ್ಟೆಲ್ ಕ್ಯಾಂಪಸ್, ಅಡುಗೆ ಕೋಣೆ, ಕಂಪ್ಯೂಟರ್ ಕೊಠಡಿ, ವಾಚನಾಲಯ ಹಾಗೂ ಕಾರಿಡಾರ್‌ನಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

‘ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಚಪಾತಿ ಊಟ ಹಾಗೂ ರಾತ್ರಿ ರೊಟ್ಟಿ ಊಟದ ವ್ಯವಸ್ಥೆ ಮಾಡುತ್ತಾರೆ. ವಾರಕ್ಕೊಮ್ಮೆ ಸಿಹಿ ಊಟ, ತಲಾ ಎರಡು ಬಾರಿ ಬಾಳೆಹಣ್ಣು ಹಾಗೂ ಮೊಟ್ಟೆ ನೀಡಲಾಗುತ್ತದೆ. ತಿಂಗಳಿಗೊಮ್ಮೆ ಮಾಂಸಾಹಾರದ ವ್ಯವಸ್ಥೆ ಇದೆ’ ಎಂದು ಹಾಸ್ಟೆಲ್‌ನ ಮುಖ್ಯ ವಾರ್ಡನ್ ಶರೀಫಾ ಶೆರೇಗಾರ ಹೇಳುತ್ತಾರೆ.

‘ತಿಂಗಳಿಗೊಮ್ಮೆ ಮಕ್ಕಳಿಗೆ ಸೋಪು, ಪೌಡರ್‌, ಪೇಸ್ಟ್, ಕೊಬ್ಬರಿ ಎಣ್ಣೆ ಒಳಗೊಂಡ ಕಿಟ್ ವಿತರಿಸಲಾಗುತ್ತಿದೆ. ಜೊತೆಗೆ ಆರೋಗ್ಯ ಇಲಾಖೆ ಸ್ಯಾನಿಟರಿ ನ್ಯಾಪ್‌ಕಿನ್ ಪೂರೈಸುತ್ತಿದೆ’ ಎಂದು ಮಾಹಿತಿ ನೀಡಿದರು. ‘ಊಟ, ವಸತಿ ಅಚ್ಚುಕಟ್ಟಾಗಿದೆ. ಇಲ್ಲಿ ಮನೆಯ ವಾತಾವರಣ ಇದೆ’ ಎಂದು ಬಿಎ ವಿದ್ಯಾರ್ಥಿನಿ ಸುಷ್ಮಾ ನಾಯಕ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.