ADVERTISEMENT

ಏ.22ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ

ಸಮ್ಮೇಳನಾಧ್ಯಕ್ಷರಾಗಿ ಡಾ.ಶಂಭು ಬಳಿಗಾರ ಆಯ್ಕೆ: ಕಸಾಪ ವತಿಯಿಂದ ಅಧಿಕೃತ ಆಮಂತ್ರಣ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 8:56 IST
Last Updated 27 ಮಾರ್ಚ್ 2017, 8:56 IST
ಬಾಗಲಕೋಟೆ: ಎರಡು ದಿನಗಳ ಕಾಲ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನವನಗರದ ಕಲಾಭವನದಲ್ಲಿ ಏಪ್ರಿಲ್‌ 22, 23ರಂದು ಆಯೋಜಿಸಲು ಜಿಲ್ಲಾ ಕಸಾಪ ಭವನದಲ್ಲಿ ಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. 
 
ಈ  ಎರಡು ದಿನದ ಅಕ್ಷರ ಜಾತ್ರೆಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಕೆಲವು ಪುಸ್ತಕ ಪ್ರಕಟಿಸಲು ನಿರ್ಣಯ ಕೈಗೊಳ್ಳಲಾಯಿತು ಎಂದು ಜಿಲ್ಲಾ ಘಟಕ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ತಿಳಿಸಿದರು.
 
ಪುಸ್ತಕ ಪ್ರಕಟಣೆ, ಸ್ವಾಗತ ಸಮಿತಿ, ಗೋಷ್ಠಿ ಸೇರಿದಂತೆ ವಿವಿಧ ಸಮಿತಿ ರಚಿಸಲಾಗುವುದು. ಕೇಂದ್ರ ಪರಿಷತ್‌ನಿಂದ ₹ 5 ಲಕ್ಷ ಅನುದಾನ ಬಿಡುಗಡೆ ಆಗಲಿದೆ. ಅದರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
 
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಎಸ್.ಜಿ. ಕೋಟಿ, ವಿಶ್ವನಾಥ ವಂಶಾಕೃತಮಠ ಮಾತನಾಡಿ, ಸಮ್ಮೇಳನದಲ್ಲಿ ಸಮಾನಾಂತರ ವೇದಿಕೆಗಳು ನಿರ್ಮಿಸಿ. ಗೋಷ್ಠಿಗಳಲ್ಲಿ ಹೆಚ್ಚು ಸಾಹಿತಿಗಳಿಂದ ಉಪನ್ಯಾಸ ಕೊಡಿಸಲು ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
 
ಜಿಲ್ಲಾ ಗೌರವ ಕಾರ್ಯದರ್ಶಿ ವೆಂಕಟೇಶ ಇನಾಮದಾರ, ಎಸ್.ಕೆ. ಕೊನೆಸಾಗರ ಮಾತನಾಡಿ, ಸಮ್ಮೇಳನಕ್ಕೆ ಈಗಾಗಲೇ ಸಿದ್ಧತೆ ನಡೆದಿವೆ. ಕೂಡಲೇ ಸ್ವಾಗತ ಸಮಿತಿ ರಚನೆ ಮಾಡುವಂತೆ ಹಾಗೂ ಈ ಮೂಲಕ ಅಕ್ಷರ ಜಾತ್ರೆ ಜಿಲ್ಲೆಯ ಕನ್ನಡಿಗರಿಗೆ ಅರ್ಪಿಸಲು ತಿಳಿಸಿದರು.
 
ಡಾ.ಪ್ರಕಾಶ ಖಾಡೆ, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದ್ನೂರ, ಜಾಕಿರ್ ಹುಸೇನ ತಾಳಿಕೋಟಿ, ಆರ್.ಸಿ. ಚಿತ್ತವಾಡಗಿ, ಗುರುರಾಜ ಲೂತಿ, ಬಸವರಾಜ ಮುಕ್ಕುಪಿ, ಪಿ.ವಿ. ದೇಸಾಯಿ, ಸಂಗಣ್ಣ ಗದ್ದಿ ಮಾತನಾಡಿದರು.
 
ಮಹಾದೇವ ಕಂಬಾಗಿ, ಜ್ಯೋತಿಬಾ ಅವತಾಡೆ, ರಾ. ನರಸಿಂಹಮೂರ್ತಿ, ಕಿರಣ ಬಾಳಾಗೋಳ, ಮಹಾಂತೇಶ ಹಳ್ಳೂರ, ಸಂಗಮೇಶ ನೀಲಗುಂದ, ವಿನೋದ ಯಡಹಳ್ಳಿ, ಜಳಕಿ, ಸೋಮಲಿಂಗ ಬೇಡರ, ಪ್ರಕಾಶ ಬಾಳಕ್ಕನವರ, ಶ್ರೀಮತಿ ಹೇಮಾ ದೇಸಾಯಿ, ಬಸಮ್ಮ ನರಸಾಪುರ, ರವಿ ಕಂಗಳ, ಎಸ್.ಆರ್. ಪಟ್ಟಣಶೆಟ್ಟಿ, ಡಾ.ಸಿದ್ದರಾಮ ಬಂಗಾರಿ ಮುಂತಾದವರು ಇದ್ದರು.
 
ಜಾನಪದ ಗಾರುಡಿಗನಿಗೆ ಅಧ್ಯಕ್ಷ ಪಟ್ಟ
ಜಿಲ್ಲಾ ಕಸಾಪ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಜಿಲ್ಲೆಯ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಇಳಕಲ್‌ನ ಜಾನಪದ ಗಾರುಡಿಗ, ಹಿರಿಯ ವಿದ್ವಾಂಸ ಡಾ.ಶಂಭು ಬಳಿಗಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನಂತರ ಅವರ ಮನೆಗೆ ತೆರಳಿ ಬಳಿಗಾರ ದಂಪತಿಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸನ್ಮಾನಿಸಿ, ಸರ್ವಾಧ್ಯಕ್ಷತೆ ವಹಿಸಬೇಕು ಎಂದು ಕೋರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.