ADVERTISEMENT

ಕಾಂಗ್ರೆಸ್‌ ತೆಕ್ಕೆಗೆ ಬಾಗಲಕೋಟೆ ಜಿ.ಪಂ.ಗದ್ದುಗೆ

ಅಧ್ಯಕ್ಷರಾಗಿ ಬಸವಂತಪ್ಪ ಮೇಟಿ, ಉಪಾಧ್ಯಕ್ಷರಾಗಿ ಮಂಜುಳಾ ರಾಠೋಡ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 8:46 IST
Last Updated 25 ಜುಲೈ 2014, 8:46 IST

ಬಾಗಲಕೋಟೆ: ನಿರೀಕ್ಷೆಯಂತೆ ಬಾಗಲಕೋಟೆ ಜಿಲ್ಲಾ ಪಂಚಾ­ಯ್ತಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಬಸವಂತಪ್ಪ ಮೇಟಿ ಮತ್ತು ಉಪಾಧ್ಯಕ್ಷರಾಗಿ ಮಂಜುಳಾ ರಾಠೋಡ ಆಯ್ಕೆಯಾದರು.

ನವನಗರದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್‌ 17 ಮತಗಳನ್ನು ಗಳಿಸುವ ಮೂಲಕ ಜಿಲ್ಲಾ ಪಂಚಾಯ್ತಿ ಗದ್ದುಗೆಯನ್ನು ಆಡಳಿತರೂಢ ಬಿಜೆಪಿಯಿಂದ ಕಿತ್ತುಕೊಂಡಿತು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಸವಂತಪ್ಪ ಮೇಟಿ ಮತ್ತು ಬಿಜೆಪಿಯಿಂದ ಶೋಭಾ ತೋಟಿಗೇರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಂಜುಳಾ ರಾಠೋಡ ಮತ್ತು ಬಿಜೆಪಿಯಿಂದ ಸೀತವ್ವ ಕಾಳೆ ಕಣಕ್ಕಿಳಿದಿದ್ದರು.

ಬಸವಂತಪ್ಪ ಮೇಟಿ ಮತ್ತು ಮಂಜುಳಾ ರಾಠೋಡ ಅವರ ಪರ ತಲಾ 17 ಮತ್ತು ವಿರುದ್ಧ 14 ಮತಗಳು ಹಾಗೂ ಬಿಜೆಪಿಯ ಶೋಭಾ ತೋಟಿಗೇರ ಪರ ತಲಾ14 ಮತ್ತು ವಿರುದ್ಧವಾಗಿ 17 ಮತಗಳು ಚಲಾವಣೆಯಾದವು.

ಕೈಕೊಟ್ಟ ಸದಸ್ಯರು: ಒಟ್ಟು 32 ಸದಸ್ಯರನ್ನು ಒಳಗೊಂಡಿರುವ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ 17 ಮತ್ತು ಕಾಂಗ್ರೆಸ್‌ 15 ಸದಸ್ಯ ಬಲಹೊಂದಿದೆ. ಬಿಜೆಪಿಗೆ ಬಹುಮತವಿದ್ದರೂ ಸಹ ಸದಸ್ಯರಾದ ಸರೋಜಿನಿ ಅಂಗಡಿ ಮತ್ತು ಮಹಾದೇವಿ ಮೂಲಿ­ಮನಿ ಕಾಂಗ್ರೆಸ್‌ ಪರ ಮತ ಚಲಾಯಿಸಿದ ಪರಿಣಾಮ ಹಾಗೂ ಈ ಹಿಂದಿನ ಅಧ್ಯಕ್ಷೆ ಬಿಜೆಪಿಯ ಶಾಂತವ್ವ ಭೂಷಣ್ಣವರ ಗೈರು ಹಾಜರಾಗುವ ಮೂಲಕ ಕಾಂಗ್ರೆಸ್‌ ಗೆಲುವಿಗೆ ಪರೋಕ್ಷವಾಗಿ ಸಹಕರಿಸಿದರು.

ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟ ಬೆಳಗಾವಿ ಪ್ರಾದೇಶಿಕ ಆಯುಕ್ತ ವಿ.ಬಿ.ಪಾಟೀಲ, ನೂತನವಾಗಿ ಆಯ್ಕೆ­ಯಾದ ಅಧ್ಯಕ್ಷ, ಉಪಾಧ್ಯ­ಕ್ಷ­ರಿಗೆ ಹೂಗುಚ್ಛನೀಡಿ ಅಭಿನಂದಿಸಿದರು.

ಜನಪರ ಆಡಳಿತಕ್ಕೆ ಸಿಕ್ಕ ಮನ್ನಣೆ: ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರದ ಜನಪರ ಆಡಳಿತಕ್ಕೆ ಸಿಕ್ಕ ಜಯ ಇದಾಗಿದೆ ಎಂದು ಬಣ್ಣಿಸಿದರು.

ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವಂತಹ ಯೋಜನೆಯನ್ನು ಜಾರಿಗೊಳಿಸಿರುವ ಕಾಂಗ್ರೆಸ್‌ ಸರ್ಕಾರದ ಕಾರ್ಯವೈಕರಿಯನ್ನು ಒಪ್ಪಿಕೊಂಡ ಬಿಜೆಪಿ ಸದಸ್ಯರು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಮುಂದಿನ 19 ತಿಂಗಳ ಅಧಿಕಾರವಧಿಯಲ್ಲಿ ಉತ್ತಮ ಆಡಳಿತ ನೀಡಲಾಗುವುದು ಎಂದು ಹೇಳಿದರು.

ಕಾನೂನು ಕ್ರಮ: ಚುನಾವಣೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಶೀಲವಂತ, ಕಾಂಗ್ರೆಸ್ ‘ಕುದುರೆ ವ್ಯಾಪಾರ’ ನಡೆದ ಪರಿಣಾಮ ಬಿಜೆಪಿಯ ಮೂರು ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದು ಖಂಡನೀಯ ಎಂದರು.

ಪಕ್ಷ ವಿರೋಧಿಯಾಗಿ ನಡೆದುಕೊಂಡಿರುವ ಮೂವರನ್ನು ಪಕ್ಷದಿಂದ ಉಚ್ಛಾಟಿಸುವ ಸಂಬಂಧ ಈಗಾಗಲೇ ರಾಜ್ಯ ಘಟಕದ ಅಧ್ಯಕ್ಷರು ಮತ್ತು ವರಿಷ್ಠರಿಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಕ್ಷ ವಿರೋಧಿ ಚಟುವಟಿಕೆ ನಡೆಸದಂತೆ ಪ್ರತಿ ಸದಸ್ಯರಿಗೂ ಎಚ್ಚರಿಕೆ ನೀಡಲಾಗಿತ್ತು, ವಿಪ್‌ ಕೂಡ ಜಾರಿ ಮಾಡಲಾಗಿತ್ತು ಇಷ್ಟಿದ್ದರೂ ಸಹ ಹಣದ ಆಸೆಗೆ ಬಿಜೆಪಿ ಸದಸ್ಯರು ಮಾರುಹೋಗಿದ್ದಾರೆ ಎಂದು ದೂರಿದರು.

‘ಸರೋಜಿನಿ ಅಂಗಡಿ, ಶಾಂತವ್ವ ಭೂಷಣ್ಣವರ ಅವರಿಗೆ ತಲಾ ₨ 30 ಲಕ್ಷ ಹಾಗೂ ಮಹಾದೇವಿ ಮೂಲಿಮನಿ ಅವರಿಗೆ ₨ 20 ಲಕ್ಷ ಹಣವನ್ನು ಕಾಂಗ್ರೆಸ್‌ ನೀಡಿರುವ ಬಗ್ಗೆ ಮಾಹಿತಿ ಇದೆ’ ಎಂದು ಅವರು ಆರೋಪಿಸಿದರು. ಬಿಜೆಪಿಯ ಮೂವರು ಸದಸ್ಯೆಯರಿಗೆ ಕಾಂಗ್ರೆಸ್‌ ಬೆಂಬಲಿಸುಂತೆ ಅವರ­ವರ  ಮನೆಯವರು ತೀವ್ರ ಒತ್ತಡ ಹೇರಿದ್ದಾರೆ. ಕಿರುಕುಳ ಸಹ ನೀಡಿರುವುದಾಗಿ ತಿಳಿದುಬಂದಿದೆ ಎಂದು ಹೇಳಿದರು.

ವಿಜಯೋತ್ಸವ: ಜಿಲ್ಲಾ ಪಂಚಾಯ್ತಿ ಗದ್ದುಗೆ ಕಾಂಗ್ರೆಸ್‌ ವಶವಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ್‌ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷೆಯನ್ನು ಕಾರಿನಲ್ಲಿ ಕೂರಿಸಿ ವಿಜಯೋತ್ಸವ ಆಚರಿಸಿದರು.

ಬಿಗಿ ಭದ್ರತೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.