ADVERTISEMENT

ಕಾಡಾ ಅವ್ಯವಹಾರ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಮೇ 2017, 8:46 IST
Last Updated 22 ಮೇ 2017, 8:46 IST

ಬಾಗಲಕೋಟೆ: ಭೀಮರಾಯನಗುಡಿ ಯಲ್ಲಿರುವ ಕೃಷ್ಣಾ ಮತ್ತು ಬೆಳಗಾವಿ ಯಲ್ಲಿನ ಮಲಪ್ರಭಾ–-ಘಟಪ್ರಭಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳಿಗೆ (ಕಾಡಾ)  ಹಂಚಿಕೆಯಾದ ಅನುದಾನ ದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ. ಆ ಬಗ್ಗೆ ಸಮಗ್ರ ತನಿಖೆ ನಡೆಸು ವಂತೆ ಸರ್ಕಾರಕ್ಕೆ ನಿರ್ದೇಶನ ನೀಡು ವಂತೆ ಇಳಕಲ್‌ನ ಜನಜಾಗೃತಿ ವೇದಿಕೆ ಪ್ರಧಾನ ಕಾರ್ಯದರ್ಶಿ ನಾಗರಾಜ ಹೊಂಗಲ್ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿನ ಆರು ಕಾಡಾ ಸಮಿತಿಗಳಿಗೆ ₹ 1982.17 ಕೋಟಿ ಅನುದಾನ  ನೀಡಲಾಗಿದೆ. ಆದರೆ ಅದರಲ್ಲಿ ಕೇವಲ ₹ 931.44 ಕೋಟಿ ಮಾತ್ರ ಬಳಸಿಕೊಳ್ಳಲಾಗಿದೆ. ಇದರಿಂದ ಶೇ. 52ಕ್ಕೂ ಹೆಚ್ಚು ಅನುದಾನ ಬಳಸಿಕೊಳ್ಳುವಲ್ಲಿ ವಿಫಲ ವಾಗಿರುವುದು ಗೊತ್ತಾಗುತ್ತದೆ.

ನೀರಾವರಿ ಯೋಜನೆ ಕಾಲುವೆಗಳ ಅಕ್ಕಪಕ್ಕದ ಅಚ್ಚುಕಟ್ಟು ರಸ್ತೆಗಳು, ಹೊಲಗಾಲುವೆ, ಬಸಿಗಾಲುವೆ ನಿರ್ಮಾಣ ಕಾಡಾಗಳ ಮುಖ್ಯ ಕರ್ತವ್ಯ. ಈ ಅಚ್ಚುಕಟ್ಟು ಪ್ರದೇಶ ಗಳನ್ನು ಸಂಚರಿಸಿದಾಗ ಕಾಡಾಗಳು ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗುತ್ತದೆ ಎಂದು ಹೊಂಗಲ್‌ ಪತ್ರದಲ್ಲಿ ತಿಳಿಸಿದ್ದಾರೆ. 

ADVERTISEMENT

ಈ ಅವಧಿಯಲ್ಲಿ ಕೃಷ್ಣಾ ಕಾಡಾಗೆ ₹ 418.36 ಕೋಟಿ ಹಂಚಿಕೆಯಾಗಿದ್ದರೂ ಕೇವಲ ₹ 198.71 ಕೋಟಿ  ಮಾತ್ರ ಬಳಕೆಯಾಗಿದೆ. ಮಲಪ್ರಭಾ ಕಾಡಾಗೆ ನೀಡಲಾದ ₹ 431.30 ಕೋಟಿಯಲ್ಲಿ ₹ 150.43 ಕೋಟಿ ಮಾತ್ರ ಬಳಕೆ ಮಾಡಿ ಕೊಳ್ಳಲಾಗಿದೆ. ಆದರೆ ಬಳಕೆಯಾದ ಅನುದಾನಲ್ಲೂ ಸಮರ್ಪಕ ಕಾಮಗಾರಿ ಮಾತ್ರ ನಡೆದಿರುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಹಣ ಬಳಸಿ ಸಮರ್ಪಕವಾಗಿ ಕಾಮಗಾರಿ ಕೂಡ ಕೈಗೊಂಡಿಲ್ಲ. ಕೃಷ್ಣಾ, ಮಲಪ್ರಭಾ ಜಲಾನಯನ ಪ್ರದೇಶದಲ್ಲಿನ ಕಾಲುವೆಗೆಳ ಅಚ್ಚುಕಟ್ಟು ರಸ್ತೆಗಳನ್ನು ಸಮರ್ಪಕವಾಗಿ ಮಾಡಿಲ್ಲ. ಬಹುತೇಕ ಕಡೆ ಹೊಲಗಾಲುವೆ, ಬಸಿಗಾಲುವೆ ಗಳನ್ನು ನಿರ್ಮಿಸದೇ ಬಿಲ್  ಎತ್ತಲಾಗಿದೆ.

ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವಂತೆ ಕೇಳಿಕೊಂಡರೂ ಸರಕಾರ ಮೌನವಾಗಿದೆ. ಹಾಗಾಗಿ  ಈ ವಿಚಾರದಲ್ಲಿ ತಕ್ಷಣವೇ  ತಾವು ಮಧ್ಯ ಪ್ರವೇಶಿಸಿ ಕೃಷ್ಣಾ ಮತ್ತು ಮಲಪ್ರಭಾ ಕಾಡಾಗಳಲ್ಲಿ ಇಲ್ಲಿಯವರೆಗೂ ಬಳಕೆ ಯಾಗಿರುವ ಅನುದಾನದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹೊಂಗಲ್ ಪತ್ರದಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.