ADVERTISEMENT

‘ಕೃಷಿ ಕ್ಷೇತ್ರ ಅಭಿವೃದ್ಧಿಗೆ ₹ 4,713 ಕೋಟಿ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 10:00 IST
Last Updated 7 ಜುಲೈ 2017, 10:00 IST

ಸಾವಳಗಿ (ಜಮಖಂಡಿ): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಕಳೆದ 4 ವರ್ಷಗಳಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ₹ 4713 ಕೋಟಿ ವೆಚ್ಚ ಮಾಡಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಅಶ್ರಯದಲ್ಲಿ ತಾಲ್ಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತೊಗರಿ ಬೀಜ ಬಿತ್ತನೆಗಿಂತ ತೊಗರಿ ಸಸಿ ನಾಟಿ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಅದರಲ್ಲೂ ವಿಶೇಷವಾಗಿ ಹನಿ ನೀರಾವರಿ ಅಳವಡಿಸಿಕೊಂಡರೆ ಒಂದು ಎಕರೆಗೆ ಬಳಸುವ ನೀರನ್ನು 3–4 ಎಕರೆಗಳಿಗೆ ಉಪಯೋಗಿಸಬಹುದು ಎಂದರು. ನೀರಾವರಿ ಕ್ಷೇತ್ರ ಹೆಚ್ಚಿಸಲು ಹನಿ ನೀರಾವರಿಗೆ ಶೇ 90 ರಷ್ಟು ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.

ADVERTISEMENT

ರಾಜ್ಯದಲ್ಲಿ ಸುಮಾರು 1.6 ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದೆ. ಕೃಷಿ ಹೊಂಡಗಳ ಸಮರ್ಪಕ ಬಳಕೆಯಿಂದ ಶೇ 25 ರಷ್ಟು ಇಳುವರಿ ಹೆಚ್ಚಿಸಿಕೊಳ್ಳಬಹುದು. ಕಬ್ಬುಬೆಳೆಗೆ ಭವಿಷ್ಯವಿಲ್ಲ. ಕಾರಣ ಸಿರಿಧಾನ್ಯ ಬೆಳೆಗಳಾದ ಜೋಳ, ಸಜ್ಜೆ, ರಾಗಿ, ನವಣಿ ಇತ್ಯಾದಿಗಳನ್ನು ಬೆಳೆಯಬೇಕು ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಿದ್ದರೂ ಸಹ ರೈತರಿಗೆ ಹೆಚ್ಚಿನ ಪ್ರಯೋಜನ ಆಗಿರಲಿಲ್ಲ ಎಂದು ಟೀಕಿಸಿದರು.
ಶಾಸಕ ಸಿದ್ದು ನ್ಯಾಮಗೌಡ ರೈತರ ಪರವಾಗಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬೆಳ್ಳಿಗದೆ ನೀಡಿ ಸನ್ಮಾನಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಸೌದಾಗರ, ಜಮಖಂಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಜಿ.ಪಂ ಸದಸ್ಯ ಶಿವಾನಂದ ಪಾಟೀಲ, ತಾ.ಪಂ ಸದಸ್ಯೆ ಶೋಭಾ ಹೊಸೂರ, ಸುಶೀಲಕುಮಾರ ಬೆಳಗಲಿ, ಸುಭಾಷ ಪಾಟೋಳಿ, ಅರ್ಜುನ ದಳವಾಯಿ, ದಯಾನಂದ ಪಾಟೀಲ, ಅಭಯ ನಾಂದ್ರೇಕರ, ಸಾವಳಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ ಮತ್ತಿತರರು ವೇದಿಕೆಯಲ್ಲಿದ್ದರು. ವರ್ಷಿಣಿ ಕಳ್ಳಿಮಠ ಪ್ರಾರ್ಥನೆ ಗೀತೆ ಹಾಡಿದರು. ಪಿ. ರಮೇಶ ಸ್ವಾಗತಿಸಿದರು. ಡಾ.ಆರ್.ಬಿ. ಬೆಳ್ಳಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.