ADVERTISEMENT

ಕೆರೂರು ಉದ್ವಿಗ್ನ: ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 10:30 IST
Last Updated 20 ಏಪ್ರಿಲ್ 2017, 10:30 IST

ಕೆರೂರ (ಬಾಗಲಕೋಟೆ ಜಿಲ್ಲೆ):ಮರದ ಮೇಲೆ ಭಗವಾ ಧ್ವಜ ಕಟ್ಟುವ ವಿಚಾರವಾಗಿ ಹಿಂದೂ–ಮುಸ್ಲಿಂ ಯುವಕರ ನಡುವಿನ ಘರ್ಷಣೆಯಿಂದಾಗಿ ಪಟ್ಟಣದಲ್ಲಿ ಬುಧವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಲಾಗಿದೆ.

ಘಟನೆಯ ವಿವರ: ಸಂಜೆ, ಹಿಂದೂ ಜಾಗರಣ ವೇದಿಕೆಯ ಯುವಕರು ಮರವೊಂದರ ಮೇಲೆ ಭಗವಾ ಧ್ವಜ ಕಟ್ಟುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮುಸ್ಲಿಂ ಸಮುದಾಯದ ಕೆಲ ಯುವಕರು, ಈ ಮೊದಲೇ ಇದ್ದ ತಮ್ಮ ಧರ್ಮದ ಧ್ವಜವನ್ನು ತೆರವುಗೊಳಿಸಿ ಭಗವಾಧ್ವಜ ಕಟ್ಟಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಉಂಟಾದ ಗದ್ದಲದಲ್ಲಿ ಹಿಂದೂ ಜಾಗರಣ ವೇದಿಕೆಯ ಯುವ ಮುಖಂಡರೊಬ್ಬರ ಮೇಲೆ ಹಲ್ಲೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಕಾರಣವಾಯಿತು. ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಮಾರುಕಟ್ಟೆ ಮತ್ತು ಪೊಲೀಸ್ ಠಾಣೆ ಮುಂಭಾಗದಲ್ಲಿ ಎರಡೂ ಸಮುದಾಯದವರು ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಈ ನಡುವೆ, ಠಾಣೆ ಎದುರು ಜಮಾಯಿಸಿದ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.  ಇದೇ ವೇಳೆ ಮುಸ್ಲಿಂ ಯುವಕರ ಗುಂಪು ಅಲ್ಲಿಗೆ ಬಂದಿದ್ದು, ಪರಸ್ಪರ ವಾಗ್ವಾದ, ತಳ್ಳಾಟ ನಡೆದು ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂದಿದೆ.ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ADVERTISEMENT

ಮಾರುಕಟ್ಟೆ ಬಂದ್: ದಿಢೀರನೆ ನಡೆದ ಘಟನೆಯಿಂದಾಗಿ ಸ್ಥಳೀಯ ಮಾರುಕಟ್ಟೆ, ಬಸ್‌ ನಿಲ್ದಾಣ ಪ್ರದೇಶ ಹಾಗೂ ರಾಷ್ಟ್ರೀಯ ಹೆದ್ದಾರಿ ಎರಡೂ ಕಡೆಯ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸಲಾಯಿತು. ಡಿಎಆರ್‌ನ ಎರಡು ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಬಾದಾಮಿ ತಹಶೀಲ್ದಾರ್ ಎಸ್.ರವಿಚಂದ್ರ, ಸಿಪಿಐ ಎನ್.ಎಂ. ಓಲೇಕಾರ ಬೀಡು ಬಿಟ್ಟಿದ್ದಾರೆ.  ಎರಡೂ ಗುಂಪಿನ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.