ADVERTISEMENT

‘ಗಾಂಧೀಜಿ ಕನಸು ನನಸು ಮಾಡಿ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 9:05 IST
Last Updated 22 ಜುಲೈ 2017, 9:05 IST

ಜಮಖಂಡಿ: ‘ಮಧ್ಯಸ್ಥಿಕೆ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಬೇಕೆಂಬ ಮಹಾತ್ಮ ಗಾಂಧೀಜಿ ಅವರ ಕನಸನ್ನು ಅವರ 150ನೇ ಜನ್ಮ ಜಯಂತಿ ದಿನವಾದ 2019 ರ ಅಕ್ಟೋಬರ್‌ 2 ರ ವೇಳೆಗೆ ನನಸು ಮಾಡುವ ಪಣ ತೊಡಬೇಕು’ ಎಂದು ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಜಿ.ಎಂ. ಶೀನಪ್ಪ ಹೇಳಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿರುವ ಮಧ್ಯಸ್ಥಿಕೆ ಕೇಂದ್ರದ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.

‘ನ್ಯಾಯಾಲಯಗಳಿಂದ ಪ್ರತಿದಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಲಾಗುವ 5 ಪ್ರಕರಣಗಳಲ್ಲಿ ಕನಿಷ್ಠ 2 ಪ್ರಕರಣಗಳನ್ನಾದರೂ ಇತ್ಯರ್ಥ ಪಡಿಸಿದರೆ ಕಕ್ಷಿದಾರರಿಗೆ ನ್ಯಾಯ ದೊರೆಯುತ್ತದೆ. ವಕೀಲರಿಗೂ ಸಂಭಾವನೆ ಹೆಚ್ಚಾಗುತ್ತದೆ. ಆದ್ದರಿಂದ ನೆಪಕ್ಕೆ ಮಾತ್ರ ಮಧ್ಯಸ್ಥಿಕೆ ಬೇಡ. ಆದರೆ, ಪೂರ್ಣ ಮನಸ್ಸಿನಿಂದ ಕೆಲಸ ಮಾಡಬೇಕು’ ಎಂದು ಮಧ್ಯಸ್ಥಿಕೆ ದಾರರಿಗೆ ಸಲಹೆ ನೀಡಿದರು.

ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಜಿತೇಂದ್ರನಾಥ ಸಿ.ಎಸ್‌ ಮಾತನಾಡಿ, ಮಧ್ಯಸ್ಥಿಕೆದಾರರು ಯಾವೊಬ್ಬ ಕಕ್ಷಿದಾರರ ಪರ ವಾಲಬಾರದು. ವ್ಯಾಜ್ಯಗಳ ಇತ್ಯರ್ಥದಲ್ಲಿ ಮಧ್ಯಸ್ಥಿಕೆದಾರರು ಅಡ್ಡಿಯಾಗಬಾರದು. ಸಂಪೂರ್ಣವಾಗಿ ನಿಷ್ಪಕ್ಷಪಾತದಿಂದ ವರ್ತಿಸಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ವೀಣಾ ನಾಯ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಾಜ್ಯಗಳನ್ನು ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ನೀಡಬೇಕು ಎಂಬ ನಿರ್ದೇಶನ ಇರುವುದರಿಂದ ವ್ಯಾಜ್ಯಗಳು ಮಧ್ಯಸ್ಥಿಕೆ ಕೇಂದ್ರಕ್ಕೆ ಬರುವುದಿಲ್ಲ ಎಂಬ ಕೂಗಿಗೆ ಈಗ ಆಸ್ಪದವಿಲ್ಲ. ಅಪರಾಧ ಪ್ರಕರಣಗಳನ್ನು ಹೊರತು ಪಡಿಸಿ ವಾಟ್ನಿ, ವಿವಾಹ ಸಂಬಂಧಿ ಸೇರಿದಂತೆ ವಿವಿಧ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ನೀಡಲಾಗುವುದು. ವ್ಯಾಜ್ಯಗಳು ಇತ್ಯರ್ಥ ಆಗುವಂತೆ ನೋಡಿಕೊಳ್ಳಬೇಕು ಎಂದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ, ಎಪಿಪಿ ಹುಸೇನ್‌ಸಾಬ ಮುಲ್ಲಾ, ವಕೀಲರ ಸಂಘದ ಅಧ್ಯಕ್ಷ ಎಸ್‌.ವಿ. ಪಾಟೀಲ, ಉಪಾಧ್ಯಕ್ಷ ಎಂ.ಆರ್‌. ಡಾಂಗೆ ವೇದಿಕೆಯಲ್ಲಿದ್ದರು. ಪ್ರಧಾನ ಸಿವಿಲ್‌ ನ್ಯಾಯಾಧೀಶ ಮೊಹ್ಮದ ಅನ್ವರ್‌ ಹುಸೇನ್‌ ಮೊಗಲಾನಿ ನಿರೂಪಿಸಿದರು. ವಕೀಲ ಆರ್‌.ಜೆ. ಶಹಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.