ADVERTISEMENT

‘ಗ್ರಾಮೀಣರ ಅಭ್ಯುದಯಕ್ಕೆ ಶ್ರಮಿಸಿ’

ರಾಜ್ಯಮಟ್ಟದ ತಾಂತ್ರಿಕ ವಸ್ತು ಪ್ರದರ್ಶನ ‘ನೀವೇ ಮಾಡಿ ನೋಡಿ’ ಕಾರ್ಯಾಗಾರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 11:56 IST
Last Updated 6 ಮಾರ್ಚ್ 2017, 11:56 IST
ಬಾಗಲಕೋಟೆ:  ‘ದೇಶದಲ್ಲಿ ಶೇ 75ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದಾರೆ. ಅವರ ಅಭ್ಯುದಯಕ್ಕೆ ಅಗತ್ಯವಿರುವ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸಲು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮುಂದಾಗಬೇಕು’ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು.ತಳವಾರ ಕಿವಿಮಾತು ಹೇಳಿದರು.
 
ಇಲ್ಲಿನ ನವನಗರದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಭಾನುವಾರ ಆರಂಭವಾದ ಪಾಲಿಟಿಕ್ನಿಕ್ ಕಾಲೇಜುಗಳ ಎರಡು ದಿನಗಳ ‘ನೀವೇ ಮಾಡಿ ನೋಡಿ’ ರಾಜ್ಯಮಟ್ಟದ ತಾಂತ್ರಿಕ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
 
ಕೃಷಿ ಕ್ಷೇತ್ರ, ಗ್ರಾಮೀಣ ಗುಡಿ ಕೈಗಾರಿಕೆಗಳು ಸೇರಿದಂತೆ ದೈನಂದಿನ ಬಳಕೆಗೆ ಅಗತ್ಯವಿರುವ ಉಪಕರಣ ಮತ್ತು ತಾಂತ್ರಿಕತೆಯನ್ನು ಹೆಚ್ಚು ಅಭಿವೃದ್ಧಿಪಡಿಸಲು ಹೇಳಿದರು.
 
ಇಂದು ಎಲ್ಲರಿಗೂ ಸರ್ಕಾರಿ ನೌಕರಿ ಒದಗಿಸುವುದು ಕಷ್ಟ. ಹಾಗಾಗಿ ತಾಂತ್ರಿಕ ಶಿಕ್ಷಣ ಪಡೆದು ಉದ್ಯಮಶೀಲರಾಗುವ ಮೂಲಕ ಹೆಚ್ಚು ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಿ ಉದ್ಯೋಗದಾತರು ಎನಿಸಿಕೊಳ್ಳಿ. ಸಮಾಜಮುಖಿ ಚಿಂತನೆಯ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಸಲಹೆ ನೀಡಿದರು.
 
ನಿವೃತ್ತ ಪ್ರಾಚಾರ್ಯ ಎಂ.ಎಂ.ಜಿಗಜಿನ್ನಿ ಮಾತನಾಡಿ, ‘ಅವಕಾಶ ಎಲ್ಲರ ಮನೆಯ ಬಾಗಿಲನ್ನು ಬಡಿಯುತ್ತದೆ. ಆದರೆ ಅದನ್ನು ಬಳಕೆ ಮಾಡಿಕೊಳ್ಳುವ ಕೆಲಸ ವಿದ್ಯಾರ್ಥಿಗಳಿಂದ ನಡೆಯಬೇಕಿದೆ. ವಿಜ್ಞಾನ ಏಕೆ ಎಂಬ ಪ್ರಶ್ನೆಯನ್ನು ಕೇಳಿದರೆ ಎಂಜಿನಿಯರಿಂಗ್ ಹೇಗೆ ಎಂಬುದನ್ನು ಕಲಿಸುತ್ತದೆ. ಎರಡರ ನಡುವೆ ಸಮನ್ವಯ ಸಾಧಿಸಿದಾಗ ಮಾತ್ರ ಹೊಸ ಅವಿಷ್ಕಾರಗಳು ಸಾಧ್ಯ’ ಎಂದರು.
 
‘ಕೈ ಮುಟ್ಟಿ ಕೆಲಸ ಮಾಡಿದರೆ ಅದು ನಿಕೃಷ್ಟ ಎಂಬ ಕೀಳರಿಮೆ ನಮ್ಮಲ್ಲಿ ಅಡಕವಾಗಿರುವ ಕಾರಣ ದೇಶ ಇಂದು ಸಂಶೋಧನೆ ಹಾಗೂ ಅವಿಷ್ಕಾರಗಳ ವಿಚಾರದಲ್ಲಿ ಹಿಂದುಳಿದಿದೆ. ಯಾವುದೇ ವಿಷಯದಲ್ಲಿ ಕೌಶಲ್ಯತೆಯನ್ನು ಕೇವಲ ಕೊಠಡಿಯಲ್ಲಿ ಕುಳಿತು ಕಲಿಯಲು ಸಾಧ್ಯವಿಲ್ಲ. ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ತಾವೇ ಮುಂದಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಹೊಸ ಅವಿಷ್ಕಾರಗಳು ಮೊಳೆತು ಸೂಕ್ಷ್ಮ, ಮಧ್ಯಮ, ಸಾಮಾನ್ಯ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಯಶಸ್ಸು ಸಾಧ್ಯ’ ಎಂದರು.  ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 
 
ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎನ್.ರವಿಚಂದ್ರನ್, ಪ್ರಾಚಾರ್ಯ ವಿ.ಬಿ.ಕಂಚಿ, ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ನಟರಾಜ ಕುಂಟೋಜಿ, ವಿಭಾಗಾಧಿಕಾರಿ ಎಫ್.ಎಲ್.ಬನಶಂಕರಿ, ಅಧಿಕಾರಿಗಳಾದ ಡಿ.ಎಚ್.ಜಗದೀಶ, ಡಿ.ಎಸ್.ರಂಗಸ್ವಾಮಿ ಪಾಲ್ಗೊಂಡಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.