ADVERTISEMENT

ಚಿಕ್ಕಪಡಸಲಗಿ ಬ್ಯಾರೇಜ್‌ ತುಂಬಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 6:57 IST
Last Updated 7 ಅಕ್ಟೋಬರ್ 2015, 6:57 IST

ಜಮಖಂಡಿ:  ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಹತ್ತಿರ ಕೃಷ್ಣಾನದಿ ಬ್ಯಾರೇಜ್‌ನ ಕೆಳಭಾಗದ ನೀರನ್ನು ವಿದ್ಯುತ್‌ ಪಂಪ್‌ಸೆಟ್‌ಗಳ ಮೂಲಕ ಎತ್ತಿ ಬ್ಯಾರೇಜ್‌ ತುಂಬಿಸುವ ಕಾರ್ಯವನ್ನು ಬರುವ ಬೇಸಿಗೆ ಪೂರ್ವದಲ್ಲಿ ಕೈಗೊಳ್ಳುವ ನಿರ್ಧಾರವನ್ನು ಕೃಷ್ಣಾತೀರ ರೈತ ಸಂಘದ ಪ್ರಧಾನ ಕಾರ್ಯದರ್ಶಿ, ಶಾಸಕ ಸಿದ್ದು ನ್ಯಾಮಗೌಡ ಪ್ರಕಟಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗದ ಕಾರಣ ಬರುವ ಬೇಸಿಗೆ ಯಲ್ಲಿ ಉಂಟಾಗಬಹುದಾದ ನೀರಿನ ಬವಣೆ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ತಾಲ್ಲೂಕಿನ ಆಲಗೂರ ಗ್ರಾಮದ ಚಂದ್ರಗಿರಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಕರೆದಿದ್ದ ಜಮಖಂಡಿ ಮತ್ತು ಅಥಣಿ ತಾಲ್ಲೂಕು ಗ್ರಾಮಗಳ ಕೃಷ್ಣಾನದಿಗೆ ಪಂಪ್‌ಸೆಟ್‌ ಅಳವಡಿಸಿದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ನೀರಾವರಿ ಪಂಪ್‌ಸೆಟ್‌ಗೆ ರೈತರು ತಲಾ ₹5 ಸಾವಿರ ವಂತಿಗೆ ಸಂಗ್ರಹಿಸಿ ಕೃಷ್ಣಾತೀರ ರೈತ ಸಂಘಕ್ಕೆ ಸಂದಾಯ ಮಾಡಬೇಕು. ವಂತಿಗೆ ಸಂಗ್ರಹಿಸಲು ಯಾರೂ ಯಾವ ಗ್ರಾಮ ಕ್ಕೂ ಬರುವುದಿಲ್ಲ. ಆಯಾ ಗ್ರಾಮದ ಪ್ರಮುಖ ರೈತರು ವಂತಿಗೆ ಸಂಗ್ರಹಿಸಿ ಇದೇ 16 ರೊಳಗಾಗಿ ಸಂದಾಯ ಮಾಡಬೇಕು. ಎಲ್ಲ ಗ್ರಾಮಗಳ ಎಲ್ಲ ರೈತರ ವಂತಿಗೆ ಹಣ ಸಂದಾಯವಾದ ಮೇಲೆ ಮಾತ್ರ ಬ್ಯಾರೇಜ್‌ಗೆ ನೀರು ತುಂಬಿಸುವ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.

ಬ್ಯಾರೇಜ್‌ಗೆ 28 ವಿದ್ಯುತ್‌ ಪಂಪ್‌ಸೆಟ್‌ಗಳ ಮೂಲಕ ನೀರು ತುಂಬಿಸಲು ಪ್ರತಿ ವರ್ಷ ₹60 ಲಕ್ಷ ವೆಚ್ಚವಾಗುತ್ತದೆ. ಆದ್ದರಿಂದ ಒಂದು ವೇಳೆ ನಿಗದಿತ ಗಡುವಿನೊಳಗಾಗಿ ಎಲ್ಲ ರೈತರು ವಂತಿಗೆ ಸಂದಾಯ ಮಾಡ ದಿದ್ದರೆ ಬ್ಯಾರೇಜ್‌ ತುಂಬಿಸುವ ಕಾರ್ಯ ವನ್ನು ಕೈಗೊಳ್ಳುವುದಿಲ್ಲ. ಆದರೆ, ಅಷ್ಟ ರೊಳಗೆ ವಂತಿಗೆ ಸಂದಾಯ ಮಾಡಿದ ರೈತರಿಗೆ ಹಣವನ್ನು ವಾಪಸ್‌ ಮಾಡಲಾ ಗುವುದು ಎಂದು ಎಚ್ಚರಿಸಿದರು.

ಚಿಕ್ಕಪಡಸಲಗಿ ಬ್ಯಾರೇಜ್‌ ಎತ್ತರವನ್ನು 1.75 ಮೀ. ಗೆ ಹೆಚ್ಚಿಸಲು ಹಾಗೂ ಕಳೆದ ಮೂರು ವರ್ಷಗಳಲ್ಲಿ ಬ್ಯಾರೇಜ್‌ ತುಂಬಿಸಲು ತಗುಲಿದ ಖರ್ಚು–ವೆಚ್ಚಗಳನ್ನು ಹಾಗೂ ರೈತರು ನೀಡಿದ ವಂತಿಗೆಯ ವಿವರಗಳನ್ನು ಶಾಸಕರು ಸಭೆಯಲ್ಲಿ ವಿವರಿಸಿದರು.

ಈ ವರೆಗೆ ಒಟ್ಟು ₹14.11 ಕೋಟಿ ಖರ್ಚಾಗಿದೆ. ಈ ಪೈಕಿ ₹10 ಕೋಟಿ ಹಣ ರಾಜ್ಯ ಸರ್ಕಾರದಿಂದ ಬಿಡುಗಡೆ ಆಗಲಿದೆ. ರೈತರಿಂದ ₹2.32 ಕೋಟಿ ವಂತಿಗೆ ಸಂಗ್ರಹಿಸಲಾಗಿದೆ. ಇನ್ನೂ ₹2 ಕೋಟಿ ಖರ್ಚಿನ ಬಾಕಿ ಪಾವತಿಸ ಬೇಕಾಗಿದೆ. ನದಿ ಪಾತ್ರದಲ್ಲಿ 5 ಸಾವಿರ ಪಂಪ್‌ಸೆಟ್‌ಗಳು ಇವೆ. ಕಾರಣ  ಪಂಪ್‌ಸೆಟ್‌ಗೆ ತಲಾ ₹ 5 ಸಾವಿರ ಪಾವ ತಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಮುಂದಿನ ವರ್ಷ ಬೇಕಿದ್ದರೆ ಒಂದು ಪಂಪ್‌ಸೆಟ್‌ನಿಂದ ಕೇವಲ ₹2 ಸಾವಿರ ಸಂಗ್ರಹಿಸಬಹುದು ಎಂದರು.

ಬ್ಯಾರೇಜ್‌ ಎತ್ತರ ಹೆಚ್ಚಿಸಿದ ಸಿವಿಲ್‌ ಕಾಮಗಾರಿ ವೆಚ್ಚ ₹5.17 ಕೋಟಿ. ಮೆಕ್ಯಾನಿಕಲ್‌ ಮತ್ತು ಎಲೆಕ್ಟ್ರಿಕಲ್‌ ವೆಚ್ಚ ₹6 ಕೋಟಿ. ಪ್ರತಿ ವರ್ಷ ವಿದ್ಯುತ್‌ ಪೂರೈಕೆ ವೆಚ್ಚ ₹25 ಲಕ್ಷ ಹಾಗೂ 3 ವರ್ಷಗಳ ವರೆಗಿನ ಬ್ಯಾಂಕಿನ ಬಡ್ಡಿ ₹2.33 ಕೋಟಿ ಆಗಿದೆ ಎಂದು ವಿವರ ನೀಡಿದರು.

ಸರ್ಕಾರದಿಂದ  ಅನುದಾನ ಬಿಡುಗಡೆಯಾದ ಕೂಡಲೇ ಈ ಹಿಂದೆ ರೈತರಿಂದ ಪಂಪ್‌ಸೆಟ್‌ಗೆ ತಲಾ ₹15 ಸಾವಿರದಂತೆ ಸಂಗ್ರಹಿಸಿದ ವಂತಿಗೆ ಹಣದಲ್ಲಿ ₹10 ಸಾವಿರ ಮೊತ್ತವನ್ನು ರೈತರಿಗೆ ಮರುಪಾವತಿ ಮಾಡಲಾಗು ವುದು ಎಂದು ಭರವಸೆ ನೀಡಿದರು.

ಮುತ್ತಣ್ಣ ಹಿಪ್ಪರಗಿ, ಸುಶೀಲಕುಮಾರ ಬೆಳಗಲಿ, ಸುರೇಶಗೌಡ ಪಾಟೀಲ, ಪರಗೌಡ ಬಿರಾದಾರ ಪಾಟೀಲ, ಈಶ್ವರ ಕರಬಸನವರ, ಬಾಬುಗೌಡ ಪಾಟೀಲ (ಶಿರಹಟ್ಟಿ), ಕೆ.ಕೆ. ತುಪ್ಪದ, ತಮ್ಮಣ್ಣ ನ್ಯಾಮಗೌಡ (ಟಕ್ಕೋಡ), ಮಲ್ಲಪ್ಪ ಪೂಜಾರಿ (ಕುಂಬಾರಹಳ್ಳ), ಬಸವರಾಜ ಗಲಗಲಿ (ನಾಗನೂರ), ಲಕ್ಷ್ಮಣ ಬನ್ನೂರ (ಶಿರಗುಪ್ಪಿ) ಮಾತನಾಡಿ ಬ್ಯಾರೇಜ್‌ ತುಂಬಿಸುವ ಕಾರ್ಯಕ್ಕೆ ಬೆಂಬಲ ಸೂಚಿಸಿ ಹಾಗೂ ಈ ಯೋಜನೆ ನಿರಂತರವಾಗಿ ನಡೆಯಬೇಕು ಎಂದರೆ ವಂತಿಗೆ ಪಾವತಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.

ಕಲ್ಲಪ್ಪ ಗಿರಡ್ಡಿ, ವರ್ಧಮಾನ ನ್ಯಾಮಗೌಡ, ಮಹಾಬಲ ಸದಲಗಿ, ಚಿಕ್ಕೂರಮಠ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.