ADVERTISEMENT

ಜಾತ್ರೆಗೆ ನಾಟಕ ಕಂಪನಿಗಳ ಥೇಟರ್‌ ಸಜ್ಜು

ನಾಟಕ, ಸಿನಿಮಾ 11ರಿಂದ ಆರಂಭ: ಅಂಗಡಿ ಮಾಲೀಕರ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:14 IST
Last Updated 10 ಜನವರಿ 2017, 5:14 IST
ಜಾತ್ರೆಗೆ ನಾಟಕ ಕಂಪನಿಗಳ ಥೇಟರ್‌ ಸಜ್ಜು
ಜಾತ್ರೆಗೆ ನಾಟಕ ಕಂಪನಿಗಳ ಥೇಟರ್‌ ಸಜ್ಜು   
ಬಾದಾಮಿ: ಬನಶಂಕರಿದೇವಿ ಜಾತ್ರೆಗೆ ವಿವಿಧ ನಾಟಕ ಕಂಪನಿಗಳು, ಸಿನಿಮಾ  ಮತ್ತು ಅಂಗಡಿಗಳ ಮಾಲೀಕರು ತಮ್ಮ ತಮ್ಮ ಅಂಗಡಿಗಳ ಸಿದ್ಧತೆಯ ಕಾರ್ಯ ವನ್ನು ಭರದಿಂದ  ಆರಂಭಿಸಿದ್ದಾರೆ.
 
ಬಾದಾಮಿ ರಸ್ತೆಯಲ್ಲಿ ಜಾತ್ರೆಗೆ ಬರುವ  ಯಾತ್ರಿಕರನ್ನು ಸ್ವಾಗತಿಸಲು ಹೊಳೆ ಆಲೂರಿನ ಬಾಗಿಲು ಚೌಕಟ್ಟಿನ ಅಂಗಡಿಗಳು ಸಿದ್ಧಗೊಂಡಿವೆ. ಮನ ರಂಜನೆಗಾಗಿ ವೃತ್ತಿ ರಂಗ ಭೂಮಿಯ ನಾಟಕ ಕಂಪನಿಗಳು ಶೆಡ್‌ ಹಾಕಿ ಹೊರಗೆ ಫ್ಲೆಕ್ಸ್‌ ಹಾಕುವ ಕಾರ್ಯವನ್ನು ಭರದಿಂದ ನಡೆಸಿದ್ದಾರೆ. ಜಾತ್ರೆಯಲ್ಲಿ ನಾಟಕಗಳು ಮತ್ತು ಸಿನೇಮಾ ದೇವಿಯ ಪಲ್ಲೇದ ಹಬ್ಬದ ದಿನ ಜ. 11ರಂದು ಪ್ರದರ್ಶನ ಆರಂಭವಾಗುತ್ತವೆ. ಈ ಬಾರಿ  9 ನಾಟಕ ಕಂಪನಿಗಳು ಮತ್ತು ಎರಡು ಸಂಚಾರಿ ಚಲನಚಿತ್ರ ಮಂದಿರಗಳು ಇವೆ. ಜಾತ್ರೆಯಲ್ಲಿ ಇಡೀ ರಾತ್ರಿ ನಾಟಕ ಮತ್ತು ಸಿನಿಮಾ ಪ್ರದರ್ಶನಗೊಳ್ಳುತ್ತವೆ. 
 
ಕುಂಕುಮ, ಬಳೆ, ವಿಭೂತಿ, ಬಾಳೆಹಣ್ಣು, ಪಳಾರ, ಅಮೀನಗಡ ಕರದಂಟು, ಹೋಟೆಲ್‌, ಕೃಷಿ ವಸ್ತು, ಗೃಹ ಬಳಕೆ ವಸ್ತು, ಮಕ್ಕಳ ಆಟಿಕೆ, ಮಹಿಳೆಯರಿಗೆ ಅಲಂಕಾರ ವಸ್ತುಗಳು, ಖಾನಾವಳಿ, ಸೋಡಾ, ಕಬ್ಬಿನ ಹಾಲು, ಚಿಕನ್‌–ಮಟನ್‌, ಎಗ್‌ರೈಸ್‌, ಸ್ವೇಟರ್‌, ಹಾಸಲು, ಹೊದಿಕೆ, ಕಂಬಳಿ ಸಾವಿರಾರು ಅಂಗಡಿಗಳ ಸಾಲುಗಳು ಸಜ್ಜಾಗತೊ ಡಗಿವೆ. ಯುವಕ ಯುವತಿಯರಿಗೆ ಮತ್ತು ಮಕ್ಕಳಿಗೆ ಮನರಂಜನೆಗೆ ಎತ್ತರದಿಂದ  ಜೀಕುವ ಜೋಕಾಲಿ ಅಕರ್ಷಕವಾಗಿದೆ.
 
ತಾಲ್ಲೂಕು ಆಡಳಿತ, ದೇವಾಲಯ ಟ್ರಸ್ಟ್‌ ಮತ್ತು ಚೊಳಚಗುಡ್ಡ ಗ್ರಾಮ ಪಂಚಾಯ್ತಿ ಕುಡಿಯುವ ನೀರನ್ನು ಸಜ್ಜುಗೊಳಿಸಿದೆ. ಗ್ರಾಮ ಪಂಚಾಯ್ತಿ ಮತ್ತೊಂದು ಹೊಸ ಕೊಳವೆ ಬಾವಿಯ ಮೂಲಕ ನೀರನ್ನು ಪೂರೈಕೆ ಮಾಡು ತ್ತದೆ. ಶಿವಪುರ ರಸ್ತೆಯಲ್ಲಿ ಶೌಚಾಲಯ ಮತ್ತು ಸ್ವಚ್ಛತೆ ಕಾರ್ಯವನ್ನು ಕೈಗೊಂಡಿದ್ದಾರೆ.
 
ಜಾತ್ರೆಗೆ ಹಳ್ಳಕ್ಕೆ ನೀರು: ಭಕ್ತರಿಗೆ ಜಾತ್ರೆಯ ಸಲುವಾಗಿ ನವಿಲುತೀರ್ಥ ಜಲಾಶಯ ದಿಂದ 800 ಕ್ಯುಸೆಕ್‌ ನೀರನ್ನು ಶನಿವಾರ ಎಡದಂಡೆ ಕಾಲುವೆಗೆ ಬಿಡಲಾಗಿದೆ. ಬನಶಂಕರಿ ದೇವಾಲಯದ  ಸರಸ್ವತಿ ಹಳ್ಳಕ್ಕೆ ಬುಧವಾರ ಸಂಜೆ ಬರಬಹುದು ಎಂದು ತಹಶೀಲ್ದಾರ್‌ ಎಸ್‌. ರವಿಚಂದ್ರ ಹೇಳಿದರು.
 
ಜನ, ಜಾನುವಾರುಗಳಿಗೆ ಕುಡಿ ಯುವ ನೀರಿನ ಉದ್ದೇಶದಿಂದ ಮತ್ತು ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲ ವಾಗಲು ನೀರನ್ನು ಬಿಡಿಸಲಾಗಿದೆ. 144 ಕಲಂ ನಿಷೇಧಾಜ್ಞೆ  ಜಾರಿ ಮಾಡಿದೆ. ರೈತರು ಹೊಲಗಳಿಗೆ ನೀರನ್ನು ಬಿಡ ಬಾರದು. ನೀರು ಸರಿಯಾಗಿ ಕಾಲುವೆಗೆ ಬೇಗ ಬರುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
 
***
ಜಲಾಶಯದಿಂದ ಸರಸ್ವತಿ ಹಳ್ಳಕ್ಕೆ ಕಾಲುವೆಯಿಂದ ಬುಧವಾರ ಸಂಜೆ ನೀರು ಬರುವ ನಿರೀಕ್ಷೆ ಇದೆ
-ಎಸ್‌. ರವಿಚಂದ್ರ,
ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.