ADVERTISEMENT

ಟೈರ್‌ಗೆ ಬೆಂಕಿ ಹಚ್ಚಿ ರೈತರ ಆಕ್ರೋಶ

ಹೊಲದಿಂದ ಕಬ್ಬು ಕಳಿಸುವ ಪದ್ಧತಿ ಉಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 8:44 IST
Last Updated 25 ಜುಲೈ 2014, 8:44 IST

ಮಹಾಲಿಂಗಪುರ: ಬುಧವಾರ ವಿಧಾನ ಸಭೆಯಲ್ಲಿ ಸರ್ಕಾರ ಮಂಡಿಸಿದ ವಿಧೇಯಕ ಖಂಡಿಸಿ ರೈತರು ರಸ್ತೆ ಬಂದ್ ಮಾಡಿ, ಟೈರ್‌ಗೆ ಬೆಂಕಿ ಹಚ್ಚಿ ಮೊದಲಿದ್ದ ರೈತ ಸ್ನೇಹಿ ಪದ್ಧತಿಯನ್ನೇ ಮುಂದುವರಿಸುವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹೊಲಗಳಿಗೆ ಕಬ್ಬು ಕಡೆಯುವ ಗ್ಯಾಂಗ್‌ಗಳನ್ನು ಕಳಿಸಿ ಕಬ್ಬನ್ನು ಕಾರ್ಖಾನೆಗೆ ತರಿಸಿಕೊಳ್ಳಲಾಗುತ್ತಿತ್ತು, ಈಗ ಮಂಡಿಸಲಾಗಿರುವ ವಿಧೇಯಕದನ್ವಯ ರೈತರೇ ಕಬ್ಬನ್ನು ಕಟಾವು ಮಾಡಿ ಕಾರ್ಖಾನೆಯ ಬಾಗಿಲಿಗೆ ಸಾಗಿಸಬೇಕಾಗುತ್ತದೆ, ಇದರಿಂದಾಗಿ ರೈತರ ಮೇಲೆ ಹೆಚ್ಚಿನ ಹೊರೆ ಬಿದ್ದು ಕಬ್ಬಿಗೆ ನೀಡುವ ದರ ಯಾತಕ್ಕೂ ಸಾಲದಾಗುತ್ತದೆ ಎಂದು ರೈತ ಮುಖಂಡ ಬಸಲಿಂಗಪ್ಪ ಕಾಂಬಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಿನ್ನೆಯ ವಿಧೇಯಕ ಅಂಗೀಕಾರವಾದ ಸುದ್ದಿ ತಿಳಿಯುತ್ತಲೇ ರೈತರನ್ನು ಕೂಡಿಸಿ ರಸ್ತೆ ಬಂದ್‌ಗೆ ಕರೆ ನೀಡಿದ್ದ ರೈತ ಸಂಘದ ಸದಸ್ಯರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹೊಸ ವಿಧೇಯಕದಿಂದ 11 ರಿಂದ 11.5 ಇಳುವರಿ ಇರುವ ರೈತರಿಗೆ ಹೆಚ್ಚು ನಷ್ಟವಾಗಲಿದ್ದು ಎಕ್ಸ್ ಫೀಲ್ಡ್ ಪದ್ಧತಿ ಮುಂದುವರೆಯ ಬೇಕು, ಉತ್ತರ ಕರ್ನಾಟಕದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯನ್ನೇ ಅನುಸರಿಸಿಕೊಂಡು ಹೋಗುವ ಭರವಸೆ ನೀಡುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ಅವರು ಹೇಳಿದರು.

ರೈತ ಮುಖಂಡ ಗಂಗಾಧರ ಮೇಟಿ ಮಾತನಾಡಿ ಸರ್ಕಾರ ಬೆಳಗಾವಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದಲ್ಲಿ ಎಕ್ಸ್ ಫೀಲ್ಡ್ ಪದ್ಧತಿಯನ್ನು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಎಕ್ಸ್‌ ಗೇಟ್ ಪದ್ಧತಿಯನ್ನು ಮುಂದುವರಿಸುವುದಾಗಿ ಘೋಷಿಸಿತ್ತು ಆದರೆ ಈಗ ಏಕಾಏಕಿ ವಿಧೇಯಕ ತಿದ್ದುಪಡೆ ಮಾಡಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಸಗಿದ್ದರಿಂದ ಸರ್ಕಾರವೇ ರೈತರನ್ನು  ಆತ್ಮಹತ್ಯೆಯ ಸರಮಾಲೆಗೆ ನೂಕುವ ಹುನ್ನಾರ ನಡೆಸಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು. ನಂತರ ರೈತರಿದ್ದಲ್ಲಿಯೇ ಬಂದ ಪುರಸಭೆ ಅಧಿಕಾರಿಗಳಿಗೆ ಸರ್ಕಾರಕ್ಕೆ ಕಳಿಸುವ ಮನವಿಯನ್ನು ನೀಡಿದರು.

ಸಂಜು ಮಾಣಿಕಶೆಟ್ಟಿ, ಬಾಬು ಹೊಸರಡ್ಡಿ, ಕರೆಪ್ಪ ಮೇಟಿ, ರಂಗಪ್ಪ ಕಳ್ಳಿಗುದ್ದಿ, ಮಹಾಲಿಂಗ ಅವರಾದಿ, ಸಿದ್ದು ಉಳ್ಳಾಗಡ್ಡಿ, ರೇವಪ್ಪ ನಾಗನೂರ, ಪರಮಾನಂದ ಸನದಿ, ಶಿವಾನಂದ ಮಾಲಬಸರಿ, ಈರಪ್ಪ ಹೊಸೂರ, ಶಿವಾನಂದ ಸಂಕ್ರಟ್ಟಿ, ಬಸವರಾಜ ಉಳ್ಳಾಗಡ್ಡಿ, ಈರಪ್ಪ ಚನ್ನಾಳ, ದಾನಯ್ಯ ಹಿರೇಮಠ, ಲಕ್ಷ್ಮಣ ಬ್ಯಾಳಿ, ಶ್ರೀಶೈಲ ಶಿವಾಪೂರ, ಚನ್ನಪ್ಪ ಇಟ್ನಾಳ, ಮಲ್ಲಪ್ಪ ಮಾಂಗ್, ಮಲ್ಲಪ್ಪ ಉಳ್ಳಾಗಡ್ಡಿ, ಕೃಷ್ಣಾ ಚನ್ನಾಳ, ಶಿವಾನಂದ ನಾಗನೂರ ಸೇರಿದಂತೆ ಸಮೀಪದ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು ಬಂದ್‌ನಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.